ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗಿಲ್ಲ ಹಾಸ್ಟೆಲ್‌, ಅವ್ಯವಸ್ಥೆಗೇ ಫುಲ್‌ ಮಾರ್ಕ್ಸ್‌

ಹಾಸ್ಟೆಲ್‌ ರಗಳೆ
Last Updated 14 ಅಕ್ಟೋಬರ್ 2019, 9:19 IST
ಅಕ್ಷರ ಗಾತ್ರ

ಧಾರವಾಡ: ಶಿಕ್ಷಣ ಅರಸಿ ವಿದ್ಯಾಕಾಶಿ ಧಾರವಾಡಕ್ಕೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರುಮುಖವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ವಿದ್ಯಾರ್ಥಿ ನಿಲಯಗಳಿಲ್ಲದೆ ಮರಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನು ಪ್ರವೇಶ ಸಿಕ್ಕವರು, ಸೌಲಭ್ಯಗಳಿಲ್ಲದೆ ಮರುಗುತ್ತಿದ್ದಾರೆ.

ಅವಳಿ ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಅರಸಿ ಬರುತ್ತಿರುವವರ ಅಕ್ಕಪಕ್ಕದ ಜಿಲ್ಲೆಯವರು ಮಾತ್ರವಲ್ಲ, ಹೊರರಾಜ್ಯ ಹಾಗೂ ಹೊರದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಆದರೆ ಅವರಿಗೆ ಮುಖ್ಯವಾಗಿ ಬೇಕಿರುವ ವಸತಿ ಸೌಕರ್ಯ ಮಾತ್ರ ಇಲ್ಲಿ ಅಗತ್ಯಕ್ಕೆ ತಕ್ಕಷ್ಟು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪಿಜಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.

ಎಷ್ಟೋ ಬಡ ವಿದ್ಯಾರ್ಥಿಗಳು ಹಣಕಾಸಿನ ಕೊರತೆಯಿಂದ ಉನ್ನತ ವ್ಯಾಸಂಗ ಮಾಡುವುದನ್ನೇ ಕೈ ಬಿಡುತ್ತಾರೆ. ಉತ್ತಮ ಅಂಕಗಳನ್ನು ಪಡೆದು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಬಂದರೂ ಅವರಿಗೆ ವಸತಿ ನಿಲಯ ದೊರೆಯದೇ ಹೋದಲ್ಲಿ, ಅಂತಹ ಎಷ್ಟೋ ವಿದ್ಯಾರ್ಥಿಗಳು ವಾಪಸ್ಸು ಊರುಗಳನ್ನು ಸೇರಿರುವಂತಹ ಉದಾಹರಣೆಗಳು ಸಾಕಷ್ಟು ಇವೆ. ಆದರೆ, ಸದ್ಯದ ಆಯ್ಕೆ ಪ್ರಕ್ರಿಯೆಗಳು ಒಂದು ಪ್ರತಿಷ್ಠೆಯಾಗಿ ಹೊರ ಹೊಮ್ಮುತ್ತಿರುವುದರಿಂದ ಅರ್ಹ ವಿದ್ಯಾರ್ಥಿಗಳು ವಸತಿ ಸೌಲಭ್ಯಗಳಿಂದ ದೂರ ಉಳಿಯುವಂತಹ ಸ್ಥಿತಿ
ನಿರ್ಮಾಣವಾಗುತ್ತಿದೆ.

ಹಿಂದುಳಿದ ವರ್ಗಗಳ ಇಲಾಖೆಯಡಿ ಈ ಬಾರಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್‌ಗಳಲ್ಲೂ ಅರ್ಜಿ ಹಾಕಿದ ವಿದ್ಯಾರ್ಥಿಗಳು ಖಾಲಿ ಕೈಯಲ್ಲಿ ಮರಳಿದ್ದಾರೆ. ಶಾಲಾ-ಕಾಲೇಜುಗಳು ಆರಂಭವಾಗಿ ಮೂರು ತಿಂಗಳಾದರೂ ಹಾಸ್ಟೆಲ್‌ ವ್ಯವಸ್ಥೆ ಆಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಿಜಿಗಳ ಮೊರೆ ಹೋಗಬೇಕಾಗಿದೆ.

ಬಿಸಿಎಂ ಇಲಾಖೆ ವ್ಯಾಪ್ತಿಯಲ್ಲಿ 67, ಸಮಾಜ ಕಲ್ಯಾಣ ಇಲಾಖೆಯ 14 ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಡಿ 8 ವಸತಿ ನಿಲಯಗಳು ಇವೆ. ಆದರೆ, ಬಹುತೇಕ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿವೆ. ಗರಿಷ್ಠ ಇಬ್ಬರು ಇರಬೇಕಾದ ಕೊಠಡಿಗಳಲ್ಲಿ ನಾಲ್ಕಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಾಕಲಾಗುತ್ತಿದೆ.

ಬಾಡಿಗೆ ಕಟ್ಟಡಗಳಿಗಾಗಿಯೇ ಹಿಂದುಳಿದ ವರ್ಗಗಳ ಇಲಾಖೆ ತಿಂಗಳಿಗೆ ₹50ಲಕ್ಷ ಖರ್ಚು ಮಾಡುತ್ತಿದೆ. ಆದರೆ ಬಾಡಿಗೆ ಕಟ್ಟಡ ಎಂಬ ಕಾರಣಕ್ಕಾಗಿ ಅಲ್ಲಿನ ಕೆಲವೊಂದು ಅಗತ್ಯ ಕಾಮಗಾರಿಗಳನ್ನು ಕೈಬಿಡಲಾಗಿದೆ. ಶಾಶ್ವತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಸ್ವಚ್ಛತೆ, ನೀರು ಹಾಗೂ ಇತರೆ ಸೌಲಭ್ಯಗಳ ಕೊರತೆ ಬಾಡಿಗೆ ಕಟ್ಟಡಗಳಲ್ಲಿ
ಸಾಕಷ್ಟಿವೆ. ಬಿಟ್ಟರೆ ಅದೂ ಸಿಗದು ಎಂಬ ಆತಂಕದಲ್ಲಿ ಇಲ್ಲೇ ಉಳಿದು ಶಿಕ್ಷಣ ಪಡೆಯುತ್ತಿದ್ದೇವೆ ಎಂದು ಇಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.

ಧಾರವಾಡ ಜಿಲ್ಲೆಯಲ್ಲಿ ಬಿಸಿಎಂ ವತಿಯಿಂದ 67 ವಸತಿ ನಿಲಯಗಳಿದ್ದು, ಈ ಪೈಕಿ 36 ಬಾಡಿಗೆ ಹಾಗೂ 31 ಸ್ವಂತ ಕಟ್ಟಡಗಳಿವೆ. ಸಮಾಜ ಕಲ್ಯಾಣ ಇಲಾಖೆಯಿಂದ 14 ಹಾಸ್ಟೆಲ್‌ಗಳ ಪೈಕಿ ಏಳು ಸ್ವಂತ, ಎಂಟು ಬಾಡಿಗೆ, ಅಲ್ಪಸಂಖ್ಯಾತ ಇಲಾಖೆಯ ಎಂಟು ಹಾಸ್ಟೆಲ್‌ಗಳ ಪೈಕಿ ನಾಲ್ಕು ಸ್ವಂತ ಹಾಗೂ ನಾಲ್ಕು ಬಾಡಿಗೆ ಕಟ್ಟಡದಲ್ಲಿವೆ. ಬಿಸಿಎಂ ವತಿಯಿಂದ ಐದು ಹಾಸ್ಟೆಲ್‌ಗೆ, ಸಮಾಜ ಕಲ್ಯಾಣ ಇಲಾಖೆಯಿಂದ ಆರು ಹಾಗೂ ಅಲ್ಪ ಸಂಖ್ಯಾತ ಇಲಾಖೆಯಿಂದ ಎರಡು ಹಾಸ್ಟಲ್‌ಗೆ ಬೇಡಿಕೆ ಇದೆ.

ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಅವರ ಕ್ಷೇತ್ರದಲ್ಲಿಯೇ ವಸತಿ ನಿಲಯಗಳಿವೆ. ಆದರೆ, ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ 2ನೇ ಆಯ್ಕೆ ಪಟ್ಟಿ ಕೂಡ ಬಿಡುಗಡೆಗೊಂಡಿಲ್ಲ. ತಾವು ನೀಡಿದ ಪಟ್ಟಿಯಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಬೇಕು ಎಂಬ ಕಟ್ಟು ನಿಟ್ಟಿನ ಆದೇಶದಿಂದ ಅಧಿಕಾರಿಗಳು ಆ ಪಟ್ಟಿಯನ್ನು ತಡೆ ಹಿಡಿದು ಸುಮ್ಮನೆ ಕುಳಿತುಕೊಂಡಿದ್ದಾರೆ.

ಇದರಿಂದಾಗಿ ದಿನ ಬೆಳಗಾದರೆ ಸಾಕು ವಿದ್ಯಾರ್ಥಿ ನಿಲಯ ಪ್ರವೇಶ ಬಯಸಿ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ ಹಾಗೂ ಅಲ್ಪಸಂಖ್ಯಾತ ಇಲಾಖೆ ಎದುರು ಪಟ್ಟಿ ಪ್ರಕಟಿಸಿದ್ದಾರೆಯೇ ಎಂದು ಕಾದು ನಿಲ್ಲುವ ಸ್ಥಿತಿ ಎದುರಾಗಿದೆ. ಅಲ್ಲದೇ ಹಾಸ್ಟೆಲ್ ಪ್ರವೇಶ ಕೋರಿ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಸೀಟು ಸಿಗುತ್ತಿಲ್ಲ
ಎಂದು ವಿದ್ಯಾರ್ಥಿಗಳು ತಮ್ಮ ಸ್ನೇಹಿತ ಹಾಸ್ಟೆಲ್‌ಗಳಲ್ಲಿ ಇಲ್ಲವೇಪ್ರತಿ ದಿನ ತಮ್ಮ ಊರಿನಿಂದ ಕಾಲೇಜುಗಳಿಗೆ ಪ್ರಯಾಣ ಮಾಡುತ್ತಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಎಂ), ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಇಲಾಖೆ ಅಡಿ ಧಾರವಾಡ ಜಿಲ್ಲೆಯಲ್ಲಿ ಅಂದಾಜು 100 ಹಾಸ್ಟೆಲ್‌ಗಳಿದ್ದರೂ ಸಹ ಸಾಲುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಹಾಸ್ಟೆಲ್‌ಗಳ ಬೇಡಿಕೆಯ ಪ್ರಮಾಣ ದುಪ್ಪಟ್ಟಾಗುತ್ತಿದೆ. ಆದರೆ, ಸರ್ಕಾರದಿಂದ ಅವುಗಳಿಗೆ ಮಂಜೂರಾತಿ ದೊರೆಯುತ್ತಿಲ್ಲ.

ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಬೇಡಿಕೆ ಹೆಚ್ಚು. ಅರ್ಜಿ ಹಾಕಿರುವಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಷ್ಟು ಸ್ಥಳಾವಕಾಶ ಇಲ್ಲ. ಹೀಗಾಗಿ ಸರ್ಕಾರಕ್ಕೆ ಆರು ವಸತಿಗೃಹಗಳನ್ನು ನಿರ್ಮಿಸಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ

-ನವೀನ ಶಿಂತ್ರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ

****

ವಿದ್ಯಾರ್ಥಿಗಳು ದಿನ ಬೆಳಗಾದರೆ ಕಚೇರಿ ಮುಂದೆ ಬಂದು ನಿಲ್ಲುವುದನ್ನು ನೋಡಿ ತಮಗೂ ಬೇಸರವಾಗಿದೆ. ಶಾಸಕರು ಆಯ್ಕೆ ಪಟ್ಟಿ ಅಂತಿಮಗೊಳಿಸಿದ ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ತಮ್ಮ ಇಲಾಖೆ ಅಡಿ ಇದೀಗ ಐದು ವಸತಿಗೃಹಗಳ ನಿರ್ಮಾಣ ಕಾರ್ಯ ನಡೆದಿದೆ.

-ಅಬ್ದುಲ್ ರಶೀದ್‌ ಮಿರ್ಜನ್ನವರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ

****

'ಕಾಲೇಜು ಆರಂಭವಾಗಿ ನಾಲ್ಕು ತಿಂಗಳು ಕಳೆದಿವೆ. ಇನ್ನೂ ವಸತಿಗೃಹದ ಆಯ್ಕೆ ಪಟ್ಟಿ ಬಿಡುಗಡೆ ಮಾಡಿಲ್ಲ. ಪ್ರತಿದಿನ ಊರಿನಿಂದ ಬಸ್‌ನಲ್ಲಿ ಕಾಲೇಜಿಗೆ ಬರುತ್ತಿದ್ದೇನೆ. ಪ್ರಯಾಣದಲ್ಲೇ ಸಮಯ ವ್ಯರ್ಥವಾಗುತ್ತಿದೆ

-ಉಮೇಶ ಪಾರ್ಸಿ,ವಿದ್ಯಾರ್ಥಿ

****

'ಸರ್ಕಾರದ ಸೌಲಭ್ಯ ಇರುವುದರಿಂದ ಶಿಕ್ಷಣ ಪಡೆಯಲು ಮುಂದಾಗಿದ್ದೇನೆ. ಆದರೆ, ಇಲ್ಲಿ ಇನ್ನೂ ಆಯ್ಕೆ ಪಟ್ಟಿ ಬಿಡುಗಡೆ ಮಾಡಿಲ್ಲ. ಕಾಲೇಜಿನಲ್ಲಿ ದಿನ ತರಗತಿಗಳನ್ನು ಮುಗಿಸಿಕೊಂಡು ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದಾರೆಯೇ ಎಂದು ನೋಡುವುದಾಗಿದೆ

-ಶ್ರೀಧರ ತುಪ್ಪದ,ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT