ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಧಾನ್ಯವಿಲ್ಲದೆ ಎಪಿಎಂಸಿ ಕಳಾಹೀನ

ಅಸಮರ್ಪಕ ಮಳೆಯಿಂದ ಮುಂಗಾರು ಹಂಗಾಮಿನ ಬೆಳೆ ವಿಫಲ
Published 21 ಸೆಪ್ಟೆಂಬರ್ 2023, 4:17 IST
Last Updated 21 ಸೆಪ್ಟೆಂಬರ್ 2023, 4:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತಿ ವರ್ಷ ಆಗಸ್ಟ್‌ ಆರಂಭದಿಂದ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಕೃಷಿ ಹುಟ್ಟುವಳಿಗಳಿಂದ ಕಂಗೊಳಿಸುತ್ತಿದ್ದ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣವು ಈ ಬಾರಿ ಕಳಾಹೀನವಾಗಿದೆ.

175 ಎಕರೆ ವಿಸ್ತಾರದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಕಮಿಷನ್‌ ಏಜೆಂಟ್‌ರ ಮಳಿಗೆಗಳಿವೆ. ಯಾವುದೇ ಮಳಿಗೆಗಳ ಎದುರು ರೈತರು ಈ ವರ್ಷ ಬೆಳೆದ ಕೃಷಿ ಉತ್ಪನ್ನಗಳಿರುವ ಚೀಲಗಳ ರಾಶಿಗಳು ಕಾಣುತ್ತಿಲ್ಲ. ರೈತರು ಹಾಗೂ ಕಮಿಷನ್‌ ಏಜೆಂಟರ್‌ ನಡುವೆ ನಡೆಯುತ್ತಿದ್ದ ಲೆಕ್ಕಾಚಾರದ ದೃಶ್ಯ ಅಪರೂಪವಾಗಿದೆ.

ಗುಂಪುಗುಂಪಾಗಿ ರೈತರು ಟ್ರ್ಯಾಕ್ಟರ್‌, ಲಾರಿಗಳು, ಟಾಟಾ ಏಸ್‌ ಸೇರಿ ಬೇರೆಬೇರೆ ವಾಹನಗಳಲ್ಲಿ ಕೃಷಿ ಉತ್ಪನ್ನಗಳೊಂದಿಗೆ ಎಪಿಎಂಸಿ ಆವರಣಕ್ಕೆ ರಾತ್ರಿಯಿಡೀ ಧಾವಿಸುತ್ತಿದ್ದ ಚಿತ್ರಣ ಈ ವರ್ಷ ಮಾಯವಾಗಿದೆ.

ಎಪಿಎಂಸಿ ಪ್ರಾಂಗಣಕ್ಕೆ ಬರುವ ಕೃಷಿ ಉತ್ಪನ್ನಗಳ ಪ್ರಮಾಣದ ಪಟ್ಟಿ ಹಿಡಿದು ಕಮಿಷನ್‌ ಏಜೆಂಟರು ಟೆಂಡರ್‌ ರೂಮ್‌ಗೆ ಧಾವಿಸುತ್ತಿದ್ದರು. ಅದೇ ರೀತಿ ಖರೀದಿದಾರರು ಎಲ್ಲ ಮಳಿಗೆಗಳಿಗೂ ಭೇಟಿನೀಡಿ ಕೃಷಿ ಉತ್ಪನ್ನದ ಗುಣಮಟ್ಟವನ್ನು ಪರಿಶೀಲನೆ ಮಾಡಿಕೊಂಡು, ಅಲ್ಲಿ ನಮೂದಿಸಿದ ಸಂಖ್ಯೆಗಳನ್ನು ದಾಖಲಿಸಿಕೊಂಡು ಟೆಂಡರ್‌ನಲ್ಲಿ ಭಾಗವಹಿಸುತ್ತಿದ್ದರು.

ಎಪಿಎಂಸಿಯಲ್ಲಿ ಕೃಷಿ ಟೆಂಡರ್‌ ಪ್ರಕ್ರಿಯೆ ನಡೆಸುವ ವಿಶಾಲವಾದ ಕೋಣೆಯಲ್ಲಿ ಚಟುವಟಿಕೆಗಳು ಸದಾ ಎದ್ದು ಕಾಣುತ್ತಿದ್ದವು. ಆದರೆ ಈ ವರ್ಷ ದಿನಬಿಟ್ಟು ದಿನಕ್ಕೆ ಬೆರಳೆಣಿಕೆಯಷ್ಟು ಕೃಷಿ ಉತ್ಪನ್ನ ಪ್ರಮಾಣ ಬರುತ್ತಿದೆ. ಟೆಂಡರ್‌ ರೂಮ್‌ ಬಿಕೋ ಎನ್ನುತ್ತಿದೆ. ಟೆಂಡರ್‌ ಪ್ರಕ್ರಿಯೆ ನಡೆಸುವ ಎಪಿಎಂಸಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಧ್ವನಿವರ್ಧಕದ ಮೂಲಕ ರೈತರಿಗೆ ಟೆಂಡರ್‌ ದರಗಳನ್ನು ಬಿತ್ತರಿಸಲಾಗುತ್ತಿತ್ತು. ಈ ವರ್ಷ ಸಂಭ್ರಮವೇ ಇಲ್ಲದಾಗಿದ್ದು, ದ್ವನಿವರ್ಧಕ ಬಳಸುವ ಅಗತ್ಯಬಿದ್ದಿಲ್ಲ.

‘ಜುಲೈ ಮುಗಿಯುತ್ತಿದ್ದಂತೆ ರೈತರು ಎಪಿಎಂಸಿಗೆ ಹೆಸರು ಕಾಳು ಮಾರಾಟಕ್ಕೆ ತೆಗೆದುಕೊಂಡು ಬರುತ್ತಿದ್ದರು. ಧಾರವಾಡ ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಿಂದಲೂ ಕೃಷಿ ಉತ್ಪನ್ನ ಬರುತ್ತಿತ್ತು. ನೆರೆಯ ಆಂಧ್ರಪ್ರದೇಶ ರಾಜ್ಯಗಳ ರೈತರು ಕೂಡಾ ಬೇಳೆಕಾಳು ಹಾಗೂ ಇತರೆ ಉತ್ಪನ್ನ ಮಾರಾಟಕ್ಕೆ ತರುತ್ತಿದ್ದರು. ಈ ವರ್ಷ ಯಾವುದೇ ಉತ್ಪನ್ನ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ’ ಎಂದು ಎಪಿಎಂಸಿ ಮಾರುಕಟ್ಟೆ ಸಹಾಯಕ ನಿಖಿಲ್‌ ಹೇಳಿದರು.

ಬೆಳೆಗಳ ಆವಕದಲ್ಲಿ ಇಳಿಕೆ

ಕಳೆದ ವರ್ಷ ಆಗಸ್ಟ್‌ ಆರಂಭದಿಂದ ಸೆಪ್ಟೆಂಬರ್‌ ಆರಂಭದವರೆಗೂ ಒಂದೇ ತಿಂಗಳಲ್ಲಿ 24,312 ಕ್ವಿಂಟಲ್‌ ಹೆಸರುಕಾಳು ಆವಕವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 1,899 ಕ್ವಿಂಟಲ್‌ ಮಾತ್ರ ಹೆಸರುಕಾಳು ಆವಕವಾಗಿದೆ. ಕಳೆದ ಬಾರಿ ಸೊಯಾಬಿನ್‌, ಮೆಕ್ಕೆಜೋಳ ಹಾಗೂ ಜೋಳ ಕೂಡಾ ಮಾರಾಟಕ್ಕೆ ಬಂದಿತ್ತು. ಈ ಬಾರಿ ತುಂಬಾ ಕಡಿಮೆ ಪ್ರಮಾಣ ಉತ್ಪನ್ನ ಆವಕವಾಗಿದೆ. ಈ ಭಾಗದ ರೈತರು ಮುಂಗಾರಿನಲ್ಲಿ ಹೆಸರುಕಾಳು ಅತಿಹೆಚ್ಚು ಬೆಳೆಯುತ್ತಾರೆ. ಮಳೆ ಅವಲಂಬಿತ ಪ್ರದೇಶದಲ್ಲಿ ಈ ಸಲ ಎರಡು ಬಾರಿ ಬಿತ್ತನೆ ಮಾಡಿದ್ದರೂ ಹೆಸರು ಬೆಳೆ ಬೆಳೆದಿಲ್ಲ.

ಆಗಸ್ಟ್‌ನಿಂದ ಇದುವರೆಗೂ ಎಪಿಎಂಸಿಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಯಾವುದೇ ಕೃಷಿ ಉತ್ಪನ್ನ ಬಂದಿಲ್ಲ. ಎಂದಿನಂತೆ ತರಿಕಾರಿಗಳ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ಮಾತ್ರ ನಡೆಯುತ್ತಿದೆನಂದನ್‌,
ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT