ಸೋಮವಾರ, ಜೂನ್ 14, 2021
26 °C
ಕಾರಾಗೃಹಕ್ಕೆ ಏಳು ದಿನಕ್ಕೊಮ್ಮೆ ಬರುವ ಕಿಮ್ಸ್‌ ವೈದ್ಯರು

ಹುಬ್ಬಳ್ಳಿ ಉಪ ಕಾರಾಗೃಹ: ಚಿಕಿತ್ಸೆಗೆ ಕೈದಿಗಳು ಒಂದು ವಾರ ಕಾಯಬೇಕು!

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹದ ಕೈದಿಗಳು ಕಾಯಿಲೆಗೆ ತುತ್ತಾದರೆ ಚಿಕಿತ್ಸೆಗಾಗಿ ಒಂದು ವಾರ ಕಾಯಬೇಕು! ಜಿಲ್ಲಾ ಕಾರಾಗೃಹಗಳಿಗೆ ದಿನವೂ ವೈದ್ಯರು ಬಂದು ಹೋಗುತ್ತಾರೆ. ಆದರೆ ಉಪ ಕಾರಾಗೃಹ ಎಂಬ ಕಾರಣಕ್ಕೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ವೈದ್ಯರು ವಾರಕ್ಕೆ ಒಂದು ದಿನ ಮಾತ್ರ ಭೇಟಿ ನೀಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ಉಪ ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆ 166, ಈ ಸಂಖ್ಯೆ ಕೆಲವೊಮ್ಮೆ 200 ಸಹ ದಾಟುತ್ತದೆ. ಸದಾ ಅನಾರೋಗ್ಯದಿಂದ ಬಳಲುವಂತಹ ಕೈದಿಗಳು ಸಹ ಇಲ್ಲಿದ್ದಾರೆ. ಆದರೆ, ಕಿಮ್ಸ್ ವೈದ್ಯರು ಏಳು ದಿನಕ್ಕೊಮ್ಮೆ ಮಾತ್ರ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಮಧ್ಯದಲ್ಲಿ ಅನಾರೋಗ್ಯ ಉಂಟಾದರೆ ಕಿಮ್ಸ್‌ಗೆ ಕರೆದೊಯ್ಯುವುದು ಅನಿವಾರ್ಯವಾಗುತ್ತದೆ. ಕೈದಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಭದ್ರತೆ ಬೇಕಾಗುತ್ತದೆ, ಆ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಹಿಡಿಯುವುದರಿಂದ ಕೈದಿಗಳು ನರಳಬೇಕಾಗಿದೆ.

‘ತೀವ್ರ ಅನಾರೋಗ್ಯಕ್ಕೆ ತುತ್ತಾದರೆ ಮಾತ್ರ ಕೂಡಲೇ ಕಿಮ್ಸ್‌ಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಕೈದಿಯೊಬ್ಬ ಜ್ವರ– ಶೀತದಿಂದ ನರಳಿದರೆ, ಗಾಯ ಮಾಡಿಕೊಂಡರೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ವೈದ್ಯರು ಸಹ ಇರದ ಕಾರಣ ಪ್ರಾಣ ಸಂಕಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯವಾಗಿ ಜನರಲ್ ಫಿಜಿಶಿಯನ್‌ಗಳನ್ನು ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಆದರೆ ಇಲ್ಲಿಯ ಕಥೆಯೇ ಬೇರೆ. ಒಂದೊಂದು ವಾರ ಒಬ್ಬೊಬ್ಬ ವೈದ್ಯರು ಭೇಟಿ ನೀಡುತ್ತಾರೆ. ಪ್ರಸೂತಿ ತಜ್ಞರು, ಚರ್ಮ ರೋಗ ತಜ್ಞರು ಸಹ ಬಂದು ಹೋಗಿರುವ ಉದಾಹರಣೆ ಇದೆ. ಕಾರಾಗೃಹದಲ್ಲಿಯೇ ಚಿಕಿತ್ಸೆ ಸಿಗಬೇಕು ಎಂಬುದು ನಮ್ಮ ಬೇಡಿಕೆಯಾಗಿರುತ್ತದೆ. ಆದರೆ, ಇಲ್ಲಿಗೆ ಬಂದವರು ಸಣ್ಣಪುಟ್ಟ ಕಾಯಿಲೆಗೂ ಕಿಮ್ಸ್‌ಗೆ ಕರೆದೊಯ್ಯುವಂತೆ ಶಿಫಾರಸು ಮಾಡುತ್ತಾರೆ. ಎಲ್ಲರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾದರೆ ವೈದ್ಯರು ಕಾರಾಗೃಹಕ್ಕೆ ಬರುವುದರಿಂದ ಆಗುವ ಪ್ರಯೋಜನವೇನು’ ಎಂದು ಅವರು ಪ್ರಶ್ನಿಸುತ್ತಾರೆ.

‘ವೈದ್ಯರು ವಾರಕ್ಕೊಮ್ಮೆ ಬರುವುದರಿಂದ ಸಮಸ್ಯೆ ಆಗಿರುವುದು ನಿಜ. ವಾರಕ್ಕೆ ಎರಡು ಬಾರಿಯಾದರೂ ವೈದ್ಯರನ್ನು ಕಳುಹಿಸಿ ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಜನರಲ್ ಫಿಜಿಶಿಯನ್ ಅವರನ್ನೇ ಕಳುಹಿಸಿಕೊಡಿ ಎಂದು ಸಹ ಮನವಿ ಮಾಡಲಾಗಿದೆ. ಈ ಬೇಡಿಕೆಗೆ ಸ್ಪಂದಿಸಿದರೆ ಅನುಕೂಲವಾಗಲಿದೆ’ ಎನ್ನುತ್ತಾರೆ ಕಾರಾಗೃಹ ಅಧೀಕ್ಷಕ ಎಚ್‌.ಎ. ಚೌಗುಲೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು