ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಟ್ರಕ್ ಟರ್ಮಿನಲ್ ನಿರ್ಮಾಣ ಪ್ರಸ್ತಾವ ನನೆಗುದಿಗೆ

Last Updated 26 ಜೂನ್ 2018, 11:57 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಲಾರಿ ಚಾಲಕರಿಗೆ ಒಂದೇ ಸೂರಿನಡಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸುವ ‘ಹುಬ್ಬಳ್ಳಿ ಟ್ರಕ್ ಟರ್ಮಿನಲ್’ ನಿರ್ಮಾಣ ಪ್ರಸ್ತಾವ ನನೆಗುದಿದೆ ಬಿದ್ದಿದೆ. ಸ್ಥಳೀಯ ಹಲವು ಸಮಸ್ಯೆಗಳಿಗೂ ಪರಿಹಾರ ಎನಿಸಿರುವ ಟರ್ಮಿನಲ್ ತಲೆ ಎತ್ತದಿರುವುದು ಲಾರಿ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಗೆ ಟ್ರಕ್ ಟರ್ಮಿನಲ್ ಅಗತ್ಯವಿದೆ ಎಂದು ಲಾರಿ ಮಾಲೀಕರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ ದೇವರಾಜು ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ ಮೂಲಕ (ಸಾರಿಗೆ ಇಲಾಖೆ ಅಧೀನ ಸಂಸ್ಥೆ) ಟರ್ಮಿನಲ್ ನಿರ್ಮಾಣ ಮಾಡುವ ಘೋಷಣೆಯನ್ನು 2012ರಲ್ಲಿಯೇ ಮಾಡಿತ್ತು. ಇದಕ್ಕಾಗಿ ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕ ಸೂಚನೆ ನೀಡಿತ್ತು. ನಗರದ ಹೊರ ವಲಯದಲ್ಲಿರುವ ಅಂಚಟಗೇರಿಯಲ್ಲಿ ಕಂದಾಯ ಇಲಾಖೆಗೆ ಸೇರಿದ 54 ಎಕರೆ ಜಾಗವನ್ನು ಗುರುತಿಸಲಾಗಿದೆ. ಆದರೆ ಜಮೀನಿನ ವಿವಾದದ ಕಾರಣ ಅದನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಿಲ್ಲ.

‘ಜಮೀನಿಗೆ ಸಂಬಂಧಿಸಿದಂತೆ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳಿವೆ. ಆ ಜಮೀನಲ್ಲಿಯೇ ಕೆಲವೊಂದು ಮನೆಗಳು ಇರುವುದರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈಗಾಗಲೇ ಸಂಬಂಧಿಸಿದವರೊಂದಿಗೆ ಸಭೆ ನಡೆಸಲಾಗಿದೆ. ಮತ್ತೊಮ್ಮೆ ಸಭೆ ನಡೆಸುವಂತೆ ಉಪ ವಿಭಾಗಾಧಿಕಾರಿ ಅವರಿಗೂ ಸೂಚನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಧಾರವಾಡ ಬೇಲೂರಿನಲ್ಲಿ ಈಗಾಗಲೇ ಒಂದು ಟರ್ಮಿನಲ್ ಇದೆ. ಹುಬ್ಬಳ್ಳಿಯಲ್ಲಿಯೂ ಅಂತಹ ಟರ್ಮಿನಲ್ ನಿರ್ಮಾಣವಾದರೆ ಲಾರಿ ಮಾಲೀಕರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಹುಬ್ಬಳ್ಳಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತವಾಡ.

ಧಾರವಾಡ ಜಿಲ್ಲೆಯಲ್ಲಿ ಸುಮಾರು 3,900 ಲಾರಿಗಳಿವೆ. ಹುಬ್ಬಳ್ಳಿ ನಗರವೊಂದರಲ್ಲೇ 600 ಲಾರಿಗಳಿವೆ. ವಾಹನವನ್ನು ನಿಲ್ಲಿಸಲು ಸ್ಥಳ ಇಲ್ಲದಂತಹ ಪರಿಸ್ಥಿತಿ ಇದೆ. ನಗರದ ಒಳಗೆ ವಾಹನಗಳು ಓಡಾಡುವುದರಿಂದ ಸಂಚಾರ ಸಮಸ್ಯೆ ಸಹ ಉದ್ಭವಿಸುತ್ತಿದೆ. ಟರ್ಮಿನಲ್ ನಿರ್ಮಾಣವಾದರೆ ಊರಿಂದ ಹೊರಗೆ ಲಾರಿಗಳನ್ನು ನಿಲುಗಡೆ ಮಾಡಬಹುದು. ಇದರಿಂದಾಗಿ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎನ್ನುತ್ತಾರೆ ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗೈಬುಸಾಬ್ ಹೊನ್ಯಾಳ.

ಹೊರ ಜಿಲ್ಲೆ, ರಾಜ್ಯದ ಲಾರಿ ಚಾಲರು ಸ್ನಾನ– ಊಟ ಮಾಡಲು, ಕೆಲ ಕಾಲ ತಂಗಲು ಸಹಾಯವಾಗುತ್ತದೆ. ಟರ್ಮಿನಲ್ ಅಭಿವೃದ್ಧಿಪಡಿಸಿದ ನಂತರ ಸ್ಥಳೀಯ ಲಾರಿ ಮಾಲೀಕರಿಗೆ ಸಣ್ಣ ವಿಸ್ತೀರ್ಣದ ಜಾಗವನ್ನು ಮಾರಾಟ ಮಾಡಿದರೆ ಕಚೇರಿ ಆರಂಭಿಸಲು ಸಹ ಅನುಕೂಲವಾಗುತ್ತದೆ. ಆದ್ದರಿಂದ ಈ ಯೋಜನೆ ಆದಷ್ಟು ಬೇಗನೆ ಜಾರಿಯಾಗಬೇಕು ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT