ಬುಧವಾರ, ಮೇ 25, 2022
23 °C
ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಂಗ್ರಹ l ಬಂಧಿತರ ಸಂಖ್ಯೆ 116 ಕ್ಕೆ

ಹುಬ್ಬಳ್ಳಿ ಗಲಭೆ: ಪ್ರಚೋದಕರ ಬೆನ್ನತ್ತಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಹಾಗೂ ಕಾಣದ ಕೈಗಳ ಪಾತ್ರವಿರುವ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಗಲಭೆಗೆ ಸಂಬಂಧಿಸಿ ಮತ್ತೆ 12 ಮಂದಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 116ಕ್ಕೆ ಏರಿದೆ. 

ಹಳೇ ಹುಬ್ಬಳ್ಳಿ ಠಾಣೆ ಎದುರು ಪೊಲೀಸ್ ವಾಹನ ಏರಿ ಉದ್ರಿಕ್ತರಿಗೆ ಪ್ರಚೋದನೆ ನೀಡಲಾಗಿದೆ ಎಂಬ ವಿಡಿಯೊದಲ್ಲಿದ್ದ ಕೆಲವರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಹುಬ್ಬಳ್ಳಿ–ಧಾರವಾಡ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ವಸೀಂ ಪಠಾಣ್, ಮೊಹಮ್ಮದ್ ಆರೀಫ್ ಇದ್ದರು ಎಂದು ಪೊಲೀಸರು ಗುರುತಿಸಿದ್ದಾರೆ.

‘ಗಲಭೆ ನಿಯಂತ್ರಿಸಲು ಪೊಲೀಸ್ ವಾಹನದ ಮೇಲೆ ಹತ್ತಿದ್ದೆ. ಪ್ರಚೋದನೆ ನೀಡುವಂತಹ ದೇಶದ್ರೋಹದ ಕೆಲಸ ಮಾಡಿಲ್ಲ’ ಎಂದು ಅಲ್ತಾಫ್ ಅವರು ಸ್ಪಷ್ಟನೆ ನೀಡಿದ್ದಾರೆ. ವಸೀಂ ಮತ್ತು ಆರೀಫ್ ತಲೆ ಮರೆಸಿಕೊಂಡಿದ್ದಾರೆ. ತನಿಖಾ ತಂಡಗಳು ಇಬ್ಬರ ಬೆನ್ನತ್ತಿವೆ ಎಂದು ಮೂಲಗಳು ತಿಳಿಸಿವೆ.

ವಿಡಿಯೊ ಆಧರಿಸಿ ವಿಚಾರಣೆ

‘ಪೊಲೀಸ್ ವಾಹನದ ಮೇಲೆ ಹತ್ತಿದ್ದವರ ಹಾಗೂ ಘಟನಾ ಪ್ರದೇಶದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳ ಆಧರಿಸಿ ಗಲಭೆಗೆ ಪ್ರಚೋದನೆ ನೀಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆದಿದ್ದು, ಕೆಲವರ ವಿಚಾರಣೆ ನಡೆಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಲಾಭೂ ರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳೇ ಹುಬ್ಬಳ್ಳಿಯ ಸುತ್ತಮುತ್ತ ಅಳವಡಿಸಿದ್ದ 48 ಕ್ಯಾಮೆರಾಗಳಲ್ಲಿ 21 ನಿರ್ವಹಿಸುತ್ತಿದ್ದು, 20 ನಿಷ್ಕ್ರೀಯವಾಗಿವೆ. ಉಳಿದ 7 ಕ್ಯಾಮೆರಾಗಳು ನಾಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಕಲಬುರಗಿಗೆ ಸ್ಥಳಾಂತರ

ಗಲಭೆಗೆ ಸಂಬಂಧಿಸಿ ಬಂಧಿಸಲಾಗಿರುವ 103 ಆರೋಪಿಗಳನ್ನು ಮಂಗಳವಾರ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಮರಿಗೌಡ ಎಂ.ಎ ‘ಪ್ರಜಾವಾಣಿ’ಗೆ ತಿಳಿಸಿದರು.

ಏ.16ರ ಗಲಭೆ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಏ.30ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಒಪ್ಪಿಸಿದೆ. ಆರೋಪಿ ಅಭಿಷೇಕ ಹಿರೇಮಠ ವಿರುದ್ಧ ಸಲ್ಲಿಕೆಯಾಗಿರುವ ಜಾಮೀನು ಅರ್ಜಿಗೆ ಪ್ರತಿಯಾಗಿ ಬುಧವಾರ ತಕರಾರು ಅರ್ಜಿ ಸಲ್ಲಿಸಲು ಸರ್ಕಾರದ ಪರ ವಕೀಲರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಬೇರೆ, ಬೇರೆ ಸಂಘಟನೆಯವರ ಕೈವಾಡ’

‘ಕಲ್ಲು ತೂರಿದವರೂ ಸೇರಿದಂತೆ ಗಲಭೆಯಲ್ಲಿದ್ದ ಹೆಚ್ಚಿನವರು ಸ್ಥಳೀಯರಲ್ಲ. ಬೇರೆ ಬೇರೆ ಸಂಘಟನೆಯವರ ಕೈವಾಡವಿದೆ’ ಎಂದು  ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಆರೋಪಿಸಿದರು.

‘ಗಲಾಟೆ ಮಾಡಬೇಡಿ ಎಂದು ನಮ್ಮವರಿಗೆ ಸಮಾಧಾನ ಮಾಡುತ್ತಿದ್ದೆ. ಎತ್ತರದಲ್ಲಿ ನಿಂತು ಮಾತನಾಡಿದ್ರೆ ಕೇಳುತ್ತದೆ ಎಂದು ಪೊಲೀಸ್ ವಾಹನವನ್ನು ಏರಿದ್ದೆ. ಪೊಲೀಸರ ಅನುಮತಿ ಪಡೆದು ಅವರ ಮೈಕ್‌ನಲ್ಲೇ ಮಾತನಾಡಿದೆ’ ಎಂದು ಪೊಲೀಸ್ ವಾಹನದ ಮೇಲೆ ತಾವು ಹತ್ತಿರುವ ವಿಡಿಯೊ ವೈರಲ್ ಆದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮೌಲ್ವಿ ಅಲ್ಲ...’

‘ಪೊಲೀಸ್ ವಾಹನ ಹತ್ತಿದ್ದ ವಸೀಂ ಪಠಾಣ್ ಮೌಲ್ವಿ ಅಥವಾ ಧರ್ಮಗುರು ಅಲ್ಲ. ಆತ ಸ್ಥಳೀಯ ಮಸೀದಿಯೊಂದರಲ್ಲಿ ಅಜಾನ್ ಕೂಗುವ ಕೆಲಸ ಮಾಡುತ್ತಾನೆ. ಆತ ಆತ ಪ್ರಚೋದನೆ ನೀಡುವಂತಹ ಮಾತುಗಳನ್ನು ಆಡಿಲ್ಲ’ ಎಂದು ಹಳ್ಳೂರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು