ಗುರುವಾರ , ಸೆಪ್ಟೆಂಬರ್ 16, 2021
24 °C
ಸಾಹಿತಿಗಳು, ಕಲಾವಿದರು, ಎಂಜಿನಿಯರ್‌ಗಳತ್ತ ಜೆಡಿಎಸ್‌ ಚಿತ್ತ

ಹುಬ್ಬಳ್ಳಿ–ಧಾರವಾಡ ಪಾಲಿಕೆ ಚುನಾವಣೆ: ಸಾಹಿತಿಗಳು, ಕಲಾವಿದರತ್ತ ಜೆಡಿಎಸ್ ಚಿತ್ತ

ಪ್ರಮೋದ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಚುನಾವಣೆ ಎಂದಾಕ್ಷಣ ಟಿಕೆಟ್‌ ಗಿಟ್ಟಿಸಲು ಸ್ಪರ್ಧಾಕಾಂಕ್ಷಿಗಳು ಆಯಾ ಪಕ್ಷಗಳ ನಾಯಕರ ದುಂಬಾಲು ಬೀಳುವುದು ಸಾಮಾನ್ಯ. ಸ್ಥಳೀಯ ಆಡಳಿತದ ಚುಕ್ಕಾಣಿಗೆ ನೆರವಾಗುವ ಈ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಮಣೆ ಹಾಕುವುದು ಮಾಮೂಲು. ಆದರೆ, ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಪಕ್ಷದ ಕಾರ್ಯಕರ್ತರಲ್ಲದವರಿಗೂ ಟಿಕೆಟ್‌ ನೀಡಲು ನಿರ್ಧರಿಸಿದೆ.

ನಗರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರದಿದ್ದರೆ ಚುನಾವಣೆಯಲ್ಲಿ ಆಯ್ಕೆಯಾದರೂ ಪ್ರಯೋಜನವಿಲ್ಲ. ಆದ್ದರಿಂದ, ಉತ್ತಮ ಅಭಿವೃದ್ಧಿ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಮಣೆ ಹಾಕಲು ಪಕ್ಷ ಮುಂದಾಗಿದೆ.

ಇದಕ್ಕಾಗಿ ಜಿಲ್ಲೆಯ ಜೆಡಿಎಸ್‌ ನಾಯಕರು, ಅವಳಿ ನಗರಗಳ ಕಲಾವಿದರು, ಸಾಹಿತಿಗಳು, ಎಂಜಿನಿಯರ್‌, ವೈದ್ಯರು, ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌ ಮತ್ತು ನಿವೃತ್ತ ಶಿಕ್ಷಕರತ್ತ ಚಿತ್ತ ನೆಟ್ಟಿದೆ.

ರಾಜಕಾರಣದ ನಂಟಿನಿಂದ ದೂರವಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಇರುವವರನ್ನು ಗುರುತಿಸಿ ಅವರಿಗೆ ಟಿಕೆಟ್‌ ನೀಡಲಿದೆ. ಇದಕ್ಕಾಗಿ ಈಗಾಗಲೇ ಕೆಲ ಕಲಾವಿದರು ಮತ್ತು ಸಾಹಿತಿಗಳನ್ನು ನಾಯಕರು ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಲದ ಚುನಾವಣೆಯಲ್ಲಿ ಕನಿಷ್ಠ 12ರಿಂದ 15 ಜನರನ್ನು ರಾಜಕಾರಣದ ಜೊತೆ ನಂಟು ಹೊಂದದೇ ಇರುವವರನ್ನು ಕಣಕ್ಕಿಳಿಸುವ ಯೋಜನೆ ಹೊಂದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಜೆಡಿಎಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ‘ವಾರ್ಡ್‌ಗಳ ಸಂಖ್ಯೆ ಹೆಚ್ಚಾದಷ್ಟು ಪಕ್ಷದಲ್ಲಿ ಟಿಕೆಟ್‌ಗಾಗಿ ಪೈಪೋಟಿಯೂ ಹೆಚ್ಚಿದೆ. ಒಂದು ವಾರ್ಡ್‌ಗೆ ಮೂರ್ನಾಲ್ಕು ಜನ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಹಿಂದೆ ಸ್ಪರ್ಧಿಸಿದ್ದ ಕೆಲವರಿಗೆ ಈಗಾಗಲೇ ಟಿಕೆಟ್‌ ನೀಡುವುದಾಗಿ ಖಚಿತವಾಗಿ ಹೇಳಿದ್ದೇವೆ’ ಎಂದರು.

‘ರಾಜಕೀಯ ಸಂಪರ್ಕ ಇಲ್ಲದಿದ್ದರೂ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದ ಮೂರ್ನಾಲ್ಕು ಜನರಿಗೆ ಈಗಾಗಲೇ ಸ್ಪರ್ಧೆಗೆ ಅವಕಾಶ ನಿಡುವುದಾಗಿ ಹೇಳಿದ್ದೇವೆ. ಇಂಥವರ ಸಂಖ್ಯೆ ಹೆಚ್ಚಾಗಬೇಕೆಂಬುದು ಪಕ್ಷದ ಅಭಿಲಾಷೆ. ಉತ್ತಮ ಅಭ್ಯರ್ಥಿ ಸಿಕ್ಕರೆ ಟಿಕೆಟ್‌ ಆಕಾಂಕ್ಷಿಯಾಗಿರುವ ಪಕ್ಷದ ಕಾರ್ಯಕರ್ತರನ್ನು ಮನವೊಲಿಸಿ ಸಾಹಿತಿಗಳು, ಕಲಾವಿದರು ಮತ್ತು ಎಂಜಿನಿಯರ್‌ಗಳಿಗೆ ನೀಡಲಾಗುವುದು. ಅಭಿವೃದ್ಧಿಗೆ ರಾಜಕಾರಣಿಗಳಷ್ಟೇ ಬೇಕಾಗಿಲ್ಲ. ಸಮಾಜದ ಎಲ್ಲ ಕ್ಷೇತ್ರಗಳ ಜನರು ಬೇಕು ಎನ್ನುವ ಆಸೆ ನಮ್ಮದು’ ಎಂದರು.

ರಾಜಕೀಯ ನಂಟು ಹೊಂದದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಪಕ್ಷದ ಕಾರ್ಯಕರ್ತರ ಸಂಬಂಧಿಕರಿಗೂ ಟಿಕೆಟ್ ನೀಡಲಾಗುವುದು. ಪಕ್ಷ ಅವರ ಬೆಂಬಲಕ್ಕೆ ನಿಂತು ಅವರನ್ನು ಗೆಲ್ಲಿಸಲಿದೆ.
ಗುರುರಾಜ ಹುಣಸಿಮರದ, ಜೆಡಿಎಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು