ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅಕ್ರಮವಾಗಿ‌ ಗುಡಿ ಕಟ್ಟಿದ ಇನ್‌ಸ್ಪೆಕ್ಟರ್‌

ಕೈಗಾರಿಕಾ ಇಲಾಖೆ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳಿಗೆ ಪತ್ರ
Last Updated 27 ಜೂನ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ವಂತ ಜಾಗದಲ್ಲಿಯೂ ಸ್ಥಳೀಯ ಆಡಳಿತದಿಂದ ಅನುಮತಿಯಿಲ್ಲದೆ ಚಿಕ್ಕ ಕಟ್ಟಡ ನಿರ್ಮಿಸಲುಸಹ ಅವಕಾಶವಿಲ್ಲ. ಬಾಡಿಗೆ ಜಾಗದಲ್ಲಿ ವಾಸ ಮಾಡಿ, ಅಲ್ಲಿಯೇ ಒಂದು ಗುಡಿ ಕಟ್ಟುತ್ತಾರೆ ಅಂದರೆ? ಅದರಲ್ಲೂ, ಕಾನೂನು ಪಾಲನೆ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಗುಡಿಯನ್ನು ಅಕ್ರಮವಾಗಿ ನಿರ್ಮಿಸುತ್ತಾರೆಂದರೆ..!

ಇಂತಹದ್ದೊಂದು ಕಾನೂನು ಬಾಹಿರ ಕೃತ್ಯ ಗೋಕುಲ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಅವರಿಂದ ನಡೆದಿದೆ. ಕಳೆದ ನಲವತ್ತು ವರ್ಷಗಳಿಂದ ಗೋಕುಲ ಪೊಲೀಸ್ ಠಾಣೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ಇಲಾಖೆಗೆ ಕಟ್ಟಡದ ಒಂದು ಭಾಗವನ್ನವಷ್ಟೇ ನೀಡಲಾಗಿದೆ. ಆದರೆ, ಇನ್‌ಸ್ಪೆಕ್ಟರ್ ಕಟ್ಟಡದ ಆವರಣವನ್ನೇ ಅತಿಕ್ರಮಿಸಿ ಅಂದಾಜು ₹3 ಲಕ್ಷ ವೆಚ್ಚದಲ್ಲಿ, ಆರು ಅಡಿ ಅಗಲ, 16 ಅಡಿ ಎತ್ತರದ ಗುಡಿಯೊಂದನ್ನು ಕಟ್ಟಿದ್ದಾರೆ. ಇದೀಗ ವಿವಾದಕ್ಕೆ ಈಡಾಗಿದೆ.

ಆರು ತಿಂಗಳ ಹಿಂದೆಯೇ ಗುಡಿ ಕಾಮಗಾರಿ ನಡೆಸಿ, ಪ್ಲಾಸ್ಟರ್ ಸಹ ಪೂರ್ಣಗೊಳಿಸಲಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಬಣ್ಣ ಬಳಿದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಉದ್ಘಾಟನೆಯಾಗಿರುತ್ತಿತ್ತು. ಆದರೆ, ಕ್ಯೂರಿಂಗ್(ಕಟ್ಟಡಕ್ಕೆ ನೀರುಣಿಸುವ ಪ್ರಕ್ರಿಯೆ) ಸಂಬಂಧಿಸಿದಂತೆ ಸಣ್ಣ ಕೈಗಾರಿಕಾ ಇಲಾಖೆ ಸಿಬ್ಬಂದಿ ಮತ್ತು ಇನ್‌ಸ್ಪೆಕ್ಟರ್ ನಡುವೆ ನಡೆದ ವಾಗ್ವಾದ ಅಕ್ರಮ ಕಟ್ಟಡ ಕಾಮಗಾರಿ ಬಹಿರಂಗವಾಗುವಂತೆ ಮಾಡಿದೆ.

ಸಣ್ಣ ಕೈಗಾರಿಕೆ ಇಲಾಖೆ ಸಿಬ್ಬಂದಿ ಸಂಜೆ ಕರ್ತವ್ಯ ಮುಗಿಸಿ ತೆರಳುವಾಗ, ನೀರಿನ ವಾಲ್ ಬಂದ್ ಮಾಡಿ ಹೋಗುತ್ತಾರೆ. ಇದರಿಂದ ಸಂಜೆ ವೇಳೆ ಕಟ್ಟಡದ ಯಾವ ಭಾಗಕ್ಕೂ ನೀರು ಲಭ್ಯವಾಗುವುದಿಲ್ಲ. ಗುಡಿಯ ಪ್ಲಾಸ್ಟರ್‌ಗೆ ನೀರುಣಿಸಲು ಇನ್‌ಸ್ಪೆಕ್ಟರ್ ಕಾಲಿಮಿರ್ಚಿ ಅವರು ಮೇಲ್ಮಹಡಿಯ ಕೈಗಾರಿಕಾ ಇಲಾಖೆ ಸಿಬ್ಬಂದಿಯಲ್ಲಿ ಹೋಗಿ, ವಾಲ್ ಬಂದ್ ಮಾಡುತ್ತಿರುವ ಕುರಿತು ತುಸು ಏರು ದನಿಯಲ್ಲಿ ಮಾತನಾಡಿದ್ದಾರೆ. ಆಗ ಅಲ್ಲಿಯ ಸಿಬ್ಬಂದಿ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಕೈಗಾರಿಕಾ ಇಲಾಖೆ ಸಹಾಯಕ ವ್ಯವಸ್ಥಾಪಕರು ‘ನಮ್ಮ ಇಲಾಖೆ ಜಾಗದಲ್ಲಿ ಅನುಮತಿಯಿಲ್ಲದೆ ಗುಡಿ ಕಟ್ಟಲಾಗಿದೆ’ ಎಂದು ಬೆಂಗಳೂರಿನ ಪ್ರಧಾನ ಕಚೇರಿಗೆ ಪತ್ರ ಬರೆದು ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅಲ್ಲಿಂದ‌ ಇನ್‌ಸ್ಪೆಕ್ಟರ್ ಅವರಿಗೆ ‘ಕಟ್ಟಡ ಕಾಮಗಾರಿ ಮುಂದುವರಿಸದೆ, ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು’ ಎಂದು ಸೂಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಣ್ಣ ಕೈಗಾರಿಕಾ ಇಲಾಖೆ ಉಪ ವ್ಯವಸ್ಥಾಪಕ ದಿನೇಶ ಜವಳಿ, ‘ನಮ್ಮಿಂದ ಅನುಮತಿ ಪಡೆಯದೆ ನಮ್ಮ ಇಲಾಖೆ ಜಾಗದಲ್ಲಿ ಗುಡಿ ಕಟ್ಟಲಾಗಿದೆ. ಮುಂದೆ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಪ್ರಧಾನ ಕಚೇರಿಗೆ ಪತ್ರ ಬರೆದು ತಿಳಿಸಲಾಯಿತು’ ಎಂದು ತಿಳಿಸಿದರು.

‘ಮೌಖಿಕ ಒಪ್ಪಿಗೆ ಪಡೆಯಲಾಗಿತ್ತು’

‘ದತ್ತ ಕನ್‌ಸ್ಟ್ರಕ್ಸನ್‌ ಅವರ ಸಹಕಾರದಿಂದ ನಿಸ್ವಾರ್ಥ ಭಾವದ ಮೇರೆಗೆ ಗುಡಿ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಅದಕ್ಕೆ ಕೈಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಮೌಖಿಕ ಒಪ್ಪಿಗೆ ಪಡೆಯಲಾಗಿದೆ. ಇದೀಗ ಗೋಕುಲ ಪೊಲೀಸ್ ಠಾಣೆಗೆ ಸ್ವಂತ ಜಾಗ ಮಂಜೂರಾಗಿದ್ದು, ಕಟ್ಟಿರುವ ಗುಡಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದು ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ತಿಳಿಸಿದರು.

ಇಬ್ಬರಿಂದಲೂ ತಪ್ಪು ನಡೆದಿದೆ...

‘ಕೈಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿತ್ಯ ಕಚೇರಿಗೆ ಬರುವಾಗ ಗುಡಿಯನ್ನು ನೋಡಿಯೇ ಬರಬೇಕು. ಅದರ ಕಾಮಗಾರಿ ಮುಗಿಯುವವರೆಗೂ ಸುಮ್ಮನಿದ್ದು, ವಾಗ್ವಾದ ನಡೆದಾಗ ಕ್ರಮಕ್ಕೆ ಮುಂದಾಗಿರುವುದು ಅವರ ಕರ್ತವ್ಯ ಲೋಪಕ್ಕೆ ನಿದರ್ಶನ. ಪೊಲೀಸ್ ಅಧಿಕಾರಿಯೇ ಅಕ್ರಮವಾಗಿ ಗುಡಿಯ ಕಟ್ಟಡ ನಿರ್ಮಿಸಿದ್ದು ಅಧಿಕಾರ ದುರುಪಯೋಗಕ್ಕೆ ಹಿಡಿದ ಕೈಗನ್ನಡಿ. ಸರ್ಕಾರದ ಜಾಗವನ್ನು, ಸರ್ಕಾರದ ಅನು
ಮತಿ ಇಲ್ಲದೆಯೇ ಬಳಸುವುದು ಅಕ್ಷಮ್ಯ ಅಪರಾಧ’ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

‘ನಾವೇ ಬಾಡಿಗೆ ಕಟ್ಟಡದಲ್ಲಿದ್ದೇವೆ. ಹಾಗಿದ್ದಾಗ ಅಲ್ಲಿ ಇನ್‌ಸ್ಪೆಕ್ಟರ್ ಗುಡಿ ಹೇಗೆ ನಿರ್ಮಿಸುತ್ತಾರೆ? ಆ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’

–ಲಾಭೂರಾಮ್, ಕಮಿಷನರ್, ಹುಧಾ ಪೊಲೀಸ್‌ ಕಮಿಷನರೇಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT