ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಾರ’ ಹೊತ್ತ ಕೂಲಿಗಳಿಗೆ ಬೇಕಿದೆ ನೆರವು

ನಿತ್ಯದ ಕನಿಷ್ಠ ಗಳಿಕೆಯಲ್ಲಿ ಜೀವನ ನಿರ್ವಹಣೆಗೆ ಪರದಾಟ: ಸೌಲಭ್ಯಕ್ಕೆ ಆಗ್ರಹ
ಗೋವರ್ಧನ ಎಸ್‌.ಎನ್‌.
Published 29 ಡಿಸೆಂಬರ್ 2023, 5:19 IST
Last Updated 29 ಡಿಸೆಂಬರ್ 2023, 5:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಭಾರದ ಸರಕು ಹೊತ್ತು, ರೈಲಿಗೆ ಸಾಗಿಸುವ ಕೂಲಿ ಕಾರ್ಮಿಕರು, ಜೀವನ ನಿರ್ವಹಣೆಯ ಭಾರ ಹೊರಲಾಗದೆ ಬಸವಳಿದಿದ್ದಾರೆ. ಸರ್ಕಾರದಿಂದ ಯಾವುದಾದರೂ ನೆರವಿನ ‘ಬಲ’ ಸಿಗುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

‘ನಾನು 14 ವರ್ಷಗಳಿಂದ ಕೂಲಿ ಕಾರ್ಮಿಕ. ರೈಲ್ವೆ ಇಲಾಖೆಯೇ 60ಕ್ಕೂ ಹೆಚ್ಚು ಜನರನ್ನು ಕಾರ್ಮಿಕರನ್ನಾಗಿ ಆಯ್ಕೆ ಮಾಡಿದೆ. ವರ್ಷಕ್ಕೆ ₹75 ಶುಲ್ಕ ಕಟ್ಟುತ್ತೇವೆ. ಸಮವಸ್ತ್ರ ನೀಡುತ್ತಾರೆ. ಹುಬ್ಬಳ್ಳಿ ರೈಲು ನಿಲ್ದಾಣ ಬೆಳೆಯುತ್ತಿದೆ; ಜೊತೆಗೆ ಕೂಲಿಕಾರ್ಮಿಕರ ಸಂಕಷ್ಟಗಳೂ ಕೂಡ. ನಿತ್ಯ ₹ 400 ಕೂಲಿ ಸಿಕ್ಕರೆ ಹೆಚ್ಚು. ಒಮ್ಮೊಮ್ಮೆ ಅದೂ ಇಲ್ಲ. ಕನಿಷ್ಠ ಹಣದಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ’ ಎನ್ನುತ್ತಾರೆ ಮಂಜು ಸಿದ್ಧಾಪುರ. 

‘ಹುಬ್ಬಳ್ಳಿ–ಧಾರವಾಡ ಸೇರಿ ವಿಜಯಪುರ, ಬೆಳಗಾವಿ, ಬಾಗಲಕೋಟೆ ನಿವಾಸಿಗಳೂ ಇಲ್ಲಿ ಕೂಲಿ ಕಾರ್ಮಿಕರಾಗಿ‌ದ್ದಾರೆ. ಕಾರ್ಮಿಕರ ಸಂಖ್ಯೆ ಹೆಚ್ಚಿದೆ, ಆದರೆ ಅದಕ್ಕೆ ತಕ್ಕಂತೆ ಕೂಲಿ ನೀಡುವ ಪ್ರಯಾಣಿಕರಿಲ್ಲ. ಎಲ್ಲ ಕಾರ್ಮಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಳಿಗ್ಗೆ ಪಾಳಿಯಲ್ಲಿ ಅರ್ಧದಷ್ಟು ಹಾಗೂ ರಾತ್ರಿ ಪಾಳಿಯಲ್ಲಿ ಅರ್ಧದಷ್ಟು ಕಾರ್ಮಿಕರು ಇರುತ್ತೇವೆ. ಕೆಲವರಿಗೆ ಕೂಲಿ ಸಿಕ್ಕರೆ, ಇನ್ನು ಕೆಲವರಿಗೆ ಸಿಗುವುದಿಲ್ಲ. ಅಗತ್ಯವಿದ್ದರೆ ಕೂಲಿ ಹಣ ಹಂಚಿಕೊಳ್ಳುತ್ತೇವೆ’ ಎಂದು ತಮ್ಮ ಪರಿಸ್ಥಿತಿ ವಿವರಿಸಿದರು.  

‘ಕೂಲಿ ಕೆಲಸದಿಂದ ಸಿಗುವ ಹಣದಲ್ಲೇ ಮನೆ ಬಾಡಿಗೆ ಕಟ್ಟಬೇಕು, ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸಬೇಕು. ಇಷ್ಟು ವರ್ಷ ಮಾಡಿದ ಕೆಲಸ ಪರಿಗಣಿಸಿ ರೈಲ್ವೆ ಇಲಾಖೆಯಲ್ಲಿ ಯಾವುದಾದರೂ ಕಾಯಂ ಕೆಲಸ ಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.

‘ರೈಲ್ವೆ ನಿಲ್ದಾಣದಲ್ಲಿ ಎಲಿವೇಟರ್‌, ಲಿಫ್ಟ್‌ ಇದೆ. ಬ್ಯಾಟರಿ ಚಾಲಿತ ವಾಹನಗಳಿವೆ. ಇದರಿಂದ ಹೆಚ್ಚಿನ ಪ್ರಯಾಣಿಕರು ಕೂಲಿ ಕಾರ್ಮಿಕರತ್ತ ಗಮನ ಹರಿಸುವುದಿಲ್ಲ. ಇಂತಹ ಸೌಲಭ್ಯಗಳಿಂದ ಕೂಲಿ ಕೆಲಸಕ್ಕೆ ಹೊಡೆತ ಬಿದ್ದಿದೆಯಾದರೂ, ಅವುಗಳನ್ನು ಬೇಡ ಎನ್ನಲಾಗದು. ನಮಗೂ ಅನುಕೂಲ ಕಲ್ಪಿಸಬೇಕು. ಸೌಲಭ್ಯ ಬೇಕೆಂಬ ಕೂಗು ಕೇಳಿಬಂದಾಗ ಭರವಸೆಯಲ್ಲೇ ದಿನದೂಡುವ ಅಧಿಕಾರಿಗಳು, ಇಲಾಖೆ, ಶೀಘ್ರ ಕ್ರಮಕ್ಕೆ ಮುಂದಾಗಬೇಕು’ ಎಂದು ಕೂಲಿ ಕಾರ್ಮಿಕ ಸುರೇಶ ಕುಂದರಗಿ ಒತ್ತಾಯಿಸಿದರು.

ಕೂಲಿ ಕಾರ್ಮಿಕರನ್ನು ಕೇಳುವವರೇ ಇಲ್ಲ. ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಸಂಘಟನೆಯೂ ಸೊರಗಿದೆ ಇಮಾಮ್‌ ಕೂಲಿ ಕಾರ್ಮಿಕ

- ಕೆಲಸದ ವೇಳೆ ಗಾಯಗೊಂಡರೂ ಹೆಚ್ಚಿನ ಚಿಕಿತ್ಸಾ ಸೌಲಭ್ಯವಿಲ್ಲ. ರೈಲ್ವೆ ಆಸ್ಪತ್ರೆಯಲ್ಲಿ ಒಂದು ಮಾತ್ರೆ ನೀಡಲೂ ಎಂ.ಡಿ ಅನುಮತಿ ಕೇಳುತ್ತಾರೆ ಸುರೇಶ ಕುಂದರಗಿ ಕೂಲಿ ಕಾರ್ಮಿಕ

ಅಲ್ಪ ಸೌಲಭ್ಯ

ಹಲವು ವರ್ಷಗಳಿಂದ ಕೂಲಿಗೆಲಸ ಮಾಡುವ ಕಾರ್ಮಿಕರಿಗೆ ರೈಲಿನ ಸಾಮಾನ್ಯ ಬೋಗಿಯಲ್ಲಿ 6 ತಿಂಗಳವರೆಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ರೈಲ್ವೆ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಮತ್ತು ರೈಲು ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿ ಹೊರತಾಗಿ ಬೇರೆ ಸೌಲಭ್ಯಗಳಿಲ್ಲ. ಪ್ರಯಾಣಿಕರಿಗೆ ಒದಗಿಸಿರುವಷ್ಟು ಸೌಲಭ್ಯ ತಮಗಿಲ್ಲ ಎಂಬ ಬೇಸರ ಕೂಲಿಕರ್ಮಿಕರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT