ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಸಿಬ್ಬಂದಿ

ಮತಗಟ್ಟೆಗೆ ತಡವಾಗಿ ಬಂದ ಅಧಿಕಾರಿಗಳು; ಮಸ್ಟರಿಂಗ್‌ ಕೇಂದ್ರಕ್ಕೆ ಭೇಟಿ ನೀಡಿದ ಡಿ.ಸಿ
Last Updated 2 ಸೆಪ್ಟೆಂಬರ್ 2021, 14:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಗುರುವಾರ ಮತಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ತೆಗೆದುಕೊಂಡು ಮತಗಟ್ಟೆಗಳಿಗೆ ತೆರಳಿದರು.

ಲ್ಯಾಮಿಂಗ್ಟನ್‌ ಶಾಲೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ತೆರಯಲಾಗಿರುವ ಮಸ್ಟರಿಂಗ್‌ ಕೇಂದ್ರದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಈ ಕಾರ್ಯ ನಡೆಯಿತು..

ಚುನಾವಣಾ ಕಾರ್ಯ ನಿರ್ವಹಿಸಲು ಹುಬ್ಬಳ್ಳಿ ಸೇರಿದಂತೆ ಅಣ್ಣಿಗೇರಿ, ಕುಂದಗೋಳ ಭಾಗದ ನೌಕರರನ್ನು ನೇಮಕ ಮಾಡಲಾಗಿದೆ. ಕೇಂದ್ರಕ್ಕೆ ಬರಲು ಅವರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಒಂಬತ್ತು ಗಂಟೆ ಹೊತ್ತಿಗೆ ಬಹುತೇಕ ಎಲ್ಲ ಸಿಬ್ಬಂದಿ ಕೇಂದ್ರಕ್ಕೆ ಬಂದಿದ್ದರು.

ವಾರ್ಡ್‌ ನಂ.53ರ ಏಳು ಹಾಗೂ ಎಂಟನೇ ಮತಗಟ್ಟೆಯ ಹಾಗೂ ವಾರ್ಡ್‌ ನಂ.52ರ ಒಂದು ಹಾಗೂ ಮೂರನೇ ಮತಗಟ್ಟೆಯ ಅಧಿಕಾರಿಗಳು 11.30 ಆದರೂ ಬಂದಿರಲಿಲ್ಲ. ‘ಕರ್ತವ್ಯ ನಿರ್ಲಕ್ಷವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದು ಧ್ವನಿವರ್ಧಕ ಮೂಲಕ ಎಚ್ಚರಿಸುತ್ತಿದ್ದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ಸಾಂಕೇತಿಕವಾಗಿ ಮತಯಂತ್ರಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದ ಮಹಿಳೆಯ ತಾಯಿ ಶ್ರೀಗೌರಿ ಅವರು, ‘10 ದಿನಗಳ ಹಿಂದಷ್ಟೇ ಮಗಳ ಬಾಣಂತನವಾಗಿದ್ದು, ಕರ್ತವ್ಯದಿಂದ ವಿನಾಯಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿಗೆ ವಿನಂತಿಸಿದರು. ಮಹಿಳೆಯನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಿ, ಬೇರೆಯವರನ್ನು ಕರ್ತವ್ಯಕ್ಕೆ ನಿಯೋಜಿಸಿದರು.

‘54 ವರ್ಷ ಮೇಲ್ಪಟ್ಟ, ಆರೋಗ್ಯ ಸಮಸ್ಯೆ ಇರುವ ಹಾಗೂ ಗರ್ಭಿಣಿಯರನ್ನು ಕರ್ತವ್ಯಕ್ಕೆ ನಿಯೋಜಿಸಿಲ್ಲ. ಮಾಹಿತಿ ಕೊರತೆಯಿಂದ ಇಂತಹ ಸಮಸ್ಯೆ ಆಗಿದ್ದು, ನಿಯೋಜಿನೆಗೊಂಡಿರುವ 174 ಮಂದಿಯ ಆದೇಶ ರದ್ದು ಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದರು.

7,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ: ‘ಅತಿಸೂಕ್ಷ್ಮ ಮತಗಟ್ಟೆಗೆ ಮೂರು, ಸೂಕ್ಷ್ಮ ಮತಗಟ್ಟೆಗೆ ಎರಡು ಪೊಲೀಸ್‌ ‌‌ಸಿಬ್ಬಂದಿ ಸೇರಿ 842 ಮತಗಟ್ಟೆಗಳಿಗೆ 1,486 ಸಿಬ್ಬಂದಿ ನಿಯೋಜಿಸಲಾಗಿದೆ. ಗಸ್ತು ತಿರುಗಲು 25 ಪಿಎಸ್‌ಐ ನೇತೃತ್ವದಲ್ಲಿ 50 ಸೆಕ್ಟರ್‌ ತಂಡ ರಚಿಸಲಾಗಿದ್ದು, 150 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣೆ ಪ್ರಕ್ರಿಯೆಗೆ ವಿವಿಧ ಇಲಾಖೆಗಳಿಂದ 7,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ’ ಎಂದು ಡಿ.ಸಿ. ನಿತೇಶ್‌ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT