ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದಿರುವ ಆಶಯ ಈಡೇರದಿದ್ದರೆ ಪ್ರಶ್ನಿಸುತ್ತೇನೆ: ಬಿ.ಕೆ. ಹರಿಪ್ರಸಾದ್

Published 10 ಡಿಸೆಂಬರ್ 2023, 16:01 IST
Last Updated 10 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾವು ಅಧಿಕಾರಕ್ಕೆ ಬಂದಿರುವ ಆಶಯ ಈಡೇರಬೇಕು. ಈಡೇರದಿದ್ದರೆ ಪಕ್ಷದ ವೇದಿಕೆಯಲ್ಲಿ ಅದನ್ನು ಪ್ರಶ್ನೆ ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಅವರು ನಡೆದುಕೊಳ್ಳುವ ರೀತಿಯನ್ನು ಪ್ರಶ್ನೆ ಮಾಡಿದ್ದೇನೆ. ಅಗತ್ಯಬಿದ್ದರೆ ಪಕ್ಷದ ವೇದಿಕೆ, ಚೌಕಟ್ಟಿನಲ್ಲಿ ಇನ್ನು ಮುಂದೆಯೂ ಪ್ರಶ್ನೆ ಮಾಡುತ್ತೇನೆ. ರಾಜ್ಯ ಸರ್ಕಾರದ ‘ಹನಿಮೂನ್’ ಅವಧಿ ಮುಗಿದಿದ್ದು, ಮುಂದೆ ಏನು ಆಗುತ್ತದೆ ನೋಡೋಣ’ ಎಂದರು. 

‘ಸಿದ್ದರಾಮಯ್ಯ ಅವರು 2006ರಲ್ಲಿ ಪಕ್ಷಕ್ಕೆ ಬಂದರು. ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾಗ ನಾನು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನಾಗಿದ್ದೆ. ಹೀಗಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿತ್ತು. ನಮ್ಮ ಸಂಬಂಧ ಚೆನ್ನಾಗಿ ಏನೂ ಇರಲಿಲ್ಲ’ ಎಂದು ಹೇಳಿದರು.

‘ನನ್ನ ರಾಜಕೀಯ ಜೀವನದಲ್ಲಿ ಅಧಿಕಾರದ ಹಿಂದೆ ಹೋಗಿಲ್ಲ. ದುರ್ಬಲ ವರ್ಗದವರಿಗೆ ಸಹಾಯ ಮಾಡಿಕೊಂಡು ಬಂದಿದ್ದೇನೆ. ಸಾಮಾಜಿಕ ನ್ಯಾಯಕ್ಕಾಗಿ  ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಕುತಂತ್ರಕ್ಕೆ ಬಗ್ಗುವುದಿಲ್ಲ’ ಎಂದರು.

ಎಲ್ಲ ಸ್ವಾಮೀಜಿಗಳನ್ನು ಸೇರಿಸಿ ಸಮಾವೇಶ ಮಾಡಿ:

‘ಕೆ.ಎನ್.ಗುರುಸ್ವಾಮಿ, ಕೆ.ವೆಂಕಟಸ್ವಾಮಿ, ಕೆ.ಎ.ನೆಟ್ಟಕಲ್ಲಪ್ಪ ಅವರಂತಹ ಮಹನೀಯರಿಂದ ಆರ್ಯ ಈಡಿಗರ ಸಂಘದ ಸ್ಥಾಪನೆಯಾಗಿದೆ. ಜೆ.ಪಿ.ನಾರಾಯಣಸ್ವಾಮಿ ಅವರ ನಂತರ ಸಂಘದವರು ಸಮಾಜಕ್ಕಾಗಿ ಏನು ಮಾಡಿದ್ದಾರೆ? ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಈ ಹಿಂದೆ ಹಿಂದುಳಿದವರು, ಅತಿ ಹಿಂದುಳಿದ ವರ್ಗದವರ ಸಮಾವೇಶವನ್ನು ಮಾಡಲಾಗಿತ್ತು. ಸಮಾಜದಲ್ಲಿ ಒಗ್ಗಟ್ಟು ಇರಬೇಕಾದರೆ ಎಲ್ಲ ಸ್ವಾಮೀಜಿಗಳನ್ನು ಸೇರಿಸಿ ಸಮಾವೇಶ ಮಾಡಬೇಕು. ಈಡಿಗ ಸಮಾಜವನ್ನು ಯಾರು ಒಡೆದಿದ್ದಾರೆ ಎಂಬುದು ಗೊತ್ತಿದೆ. ಅವರ ಹೆಸರು ಹೇಳಲು ಬಯಸುವುದಿಲ್ಲ’ ಎಂದು ಹೇಳಿದರು.  

‘ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ಮಾಡಿ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ನಾರಾಯಣ ಗುರು ನಿಗಮ ಸ್ಥಾಪನೆಯಾಯಿತು. ಈಗ ಅದಕ್ಕೆ ಹಣ ನೀಡಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಲ್ಲವ ಸಮಾಜಕ್ಕೆ ಹಾಸ್ಟೆಲ್‌ ನಿರ್ಮಾಣಕ್ಕೆ ನೀಡಿದ್ದ ಜಾಗವನ್ನು ಬ್ಯಾಸ್ಕೆಟ್‌ ಬಾಲ್ ಅಸೋಸಿಯೇಷನ್‌ಗೆ ನೀಡಲಾಗಿದೆ. ಕೋಟಿ ಚೆನ್ನಯ ಥೀಮ್‌ ಪಾರ್ಕ್‌ಗೆ ಅನುದಾನ ನೀಡಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT