ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಾದಿಗ ಸಮುದಾಯಕ್ಕೆ ಅನ್ಯಾಯ'

ಪ್ರಸಾದ ಅಬ್ಬಯ್ಯ ವಿರುದ್ಧ ದ.ಸಂ..ಸ ವಿಜಯ ಗುಂಟ್ರಾಳ ಆರೋಪ
Last Updated 5 ಏಪ್ರಿಲ್ 2022, 3:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದಲ್ಲಿ ಡಾ. ಬಾಬು ಜಗಜೀವನರಾಂ ಅವರ ಸಮುದಾಯ ಭವನ ನಿರ್ಮಾಣ ಕಾಮಗಾರಿ ಐದು ವರ್ಷಗಳಿಂದ ಆಮೆವೇಗದಲ್ಲಿ ಸಾಗುತ್ತಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಅವರ ಸಮುದಾಯ ವಿರೋಧಿ ನಡೆಯೇ ಇದಕ್ಕೆ ಕಾರಣ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಧಾರವಾಡ ಜಿಲ್ಲಾ ಸಂಚಾಲಕ ವಿಜಯ ಗುಂಟ್ರಾಳ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾದಿಗ ಸಮುದಾಯದ ನಿರಂತರ ಹೋರಾಟದಿಂದ ಹು‌ಬ್ಬಳ್ಳಿಯ ಪಡದಯ್ಯನ ಹಕ್ಕಲ ಪ್ರದೇಶದಲ್ಲಿ ₹9.15 ಕೋಟಿ ಅನುದಾನದಲ್ಲಿ 2017ರಲ್ಲಿ ಡಾ. ಬಾಬು ಜಗಜೀವನರಾಂ ಅವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ, ಪ್ರಸಾದ ಅಬ್ಬಯ್ಯ ಹಾಗೂ ಅಧಿಕಾರಿಗಳು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದರು.

‘ಐದು ವರ್ಷಗಳಲ್ಲಿ ಹಲವು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಆದರೆ, ಜಗಜೀವನರಾಂ ಅವರ ಸಮುದಾಯ ಭವನ ಅರ್ಧಕ್ಕೆ ನಿಂತಿದ್ದು, ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದೆ. ಜನ ಇಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸದಿದ್ದರೆ, ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಮಾದಿಗರ ಸಮುದಾಯದ ಬಹುದಿನದ ಬೇಡಿಕೆಯಾದ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸುವುದಕ್ಕೂ ಪ್ರಸಾದ ಅಬ್ಬಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದಲ್ಲಿ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಶಾಸಕರು ಇದೇ ಧೋರಣೆ ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಹೇಳಿದರು.

ಮಾದಿಗ ದಂಡೋರ ಸಮಿತಿ ಮುಖಂಡರಾದ ಮೇಘರಾಜ ಹಿರೇಮನಿ, ಶಿವಶಂಕರ ಭಂಜಾರಿ, ಭರಮಣ್ಣ ಮಂಕಣಿ, ಎಸ್‌.ಪಿ ಹುಬ್ಳಿಕರ, ಗಂಗಾಧರ ಪೇರೂರ ಇದ್ದರು.

* ಕೀಳುಮಟ್ಟದ ರಾಜಕೀಯ ಮಾಡಲಾಗುತ್ತಿದೆ. ಎಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ನಾನೇ ತಂದ ಯೋಜನೆ‌, ಶೀಘ್ರ ಮುಗಿಯಲಿದ್ದು, ₹50 ಲಕ್ಷ ಮಂಜೂರು ಮಾಡಿಸಲಾಗಿದೆ.

-ಪ್ರಸಾದ ಅಬ್ಬಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT