ಕಲಘಟಗಿ: ಸರ್ಕಾರದ ಆದೇಶದಂತೆ ಗ್ರಾಮೀಣ ಜನರ ಸಮಸ್ಯೆ ಆಲಿಸಿ ಗ್ರಾಮ ಮಟ್ಟದಲ್ಲಿ ಆದಷ್ಟು ಸಮಸ್ಯೆ ಬಗೆಹರಿಸುವ ಸಲುವಾಗಿ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಸ್ವರೂಪ ಟಿ.ಕೆ ತಿಳಿಸಿದರು.
ತಾಲ್ಲೂಕಿನ ದುಮ್ಮವಾಡ ಗ್ರಾಮದಲ್ಲಿ ಬುಧವಾರ ಬೂದಗುಡ್ಡ ಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಧಾರವಾಡ, ತಾಲ್ಲೂಕು ಪಂಚಾಯಿತಿ ಕಲಘಟಗಿ, ಗ್ರಾಮ ಪಂಚಾಯಿತಿ ದುಮ್ಮವಾಡ ಆಶ್ರಯದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ಉದ್ದೇಶಿಸಿ ಮಾತನಾಡಿದರು.
ಗ್ರಾಮದ ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಕೊಠಡಿಗಳು ಸೋರುತ್ತಿವೆ. ಹೊಸ ಕೊಠಡಿ ಅವಶ್ಯಕತೆ ಇದೆ. ಮಾದರಿ ಕೇಂದ್ರ ಶಾಲೆ ಆಟದ ಮೈದಾನ ಸಮತಟ್ಟು ಮಾಡಿ ನೀರು ಹೊರ ಹಾಕಲಾಗುವುದು. ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ, ನೂತನ ಸರ್ಕಾರಿ ಪ್ರೌಢಶಾಲೆ, ಗ್ರಾಮದ ಹೊರವಲಯದ 58 ಎಕರೆ ವಿಸ್ತೀರ್ಣದ ದುಮ್ಮವಾಡ ಕೆರೆ ಸುತ್ತಲೂ ಅತಿಕ್ರಮಣವಾಗಿದ್ದು ಸರ್ವೇ ಮಾಡಿಸಿಕೊಡಲು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಸಿಇಓ ಅವರಿಗೆ ಮನವಿ ಮಾಡಿದರು.
ಬೂದನಗುಡ್ಡದಿಂದ ರಸ್ತೆ ಮೇಲೆ ನೀರು ಹರಿದು ಬರುತ್ತದೆ. ಅಲ್ಲಿ ಎರಡು ಕಡೆ ಕಾಲುವೆ ನಿರ್ಮಿಸಲು ಗ್ರಾಮಸ್ಥರು ತಿಳಿಸಿದರು. ಗ್ರಾಮದ ಫಕೀರಪ್ಪ ಹುಬ್ಬಳ್ಳಿ ಮಾತನಾಡಿ, ‘ನಮ್ಮ ಮನೆಗೆ ನಳ ಹಾಗೂ ವಿದ್ಯುತ್ ಸೌಕರ್ಯ ನೀಡಿಲ್ಲ ಕಲ್ಪಿಸಿಕೊಡಬೇಕು ಹಾಗೂ ದಾರಿ ದುರಸ್ತಿ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
‘15 ದಿನಗಳಲ್ಲಿ ನಳ ಸಂಪರ್ಕಕಲ್ಪಿಸಿ ಕೊಡಲಾಗುವುದು’ ಎಂದು ನೀರು ನೈರ್ಮಲ್ಯ ಇಲಾಖೆ ಅಧಿಕಾರಿ ಶಿವಪುತ್ರಪ್ಪ ಮಠಪತಿ ಹೇಳಿದರು.
2016- 17ರಲ್ಲಿ ₹ 13 ಲಕ್ಷ ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದರೂ ಸರ್ಕಾರದಿಂದ ಹಣ ಪಾವತಿಯಾಗಿಲ್ಲ ಇದಕ್ಕೆ ಎಂಜಿನಿಯರ್ ಹಾಗೂ ಅಧಿಕಾರಿಗಳೇ ಕಾರಣ ಎಂದು ಮುಖಂಡರಾದ ಧನಪಾಲ ಬೇಟದೂರ ಅಳಲು ತೋಡಿಕೊಂಡರು. ಸರ್ಕಾರದಿಂದ ಹಣ ಬಂದ ಕೂಡಲೇ ಮಾಡಿಸಿಕೊಡಲಾಗುವುದು ಎಂದು ಸಿಇಒ ಭರವಸೆ ನೀಡಿದರು.
ಗ್ರಾಮದಲ್ಲಿ 820 ಜಾಬ್‌ಕಾರ್ಡ್ ಬಂದಿವೆ. ಎಷ್ಟು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ್ದೀರಿ ಎಂದು ಪಿಡಿಒ ಹಾಗೂ ಅಧ್ಯಕ್ಷರಿಗೆ ಸಿಇಒ ಪ್ರಶ್ನೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ನರೇಂದ್ರ ಮಾತನಾಡಿ, ಈ ಭಾಗದಲ್ಲಿ ಕಂಪೆನಿಗಳು ಹಾಗೂ ಕಲ್ಲು ಗಣಿಗಾರಿಕೆ ಇರುವುದರಿಂದ ನರೇಗಾ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜನರಿಗೆ ಈ ಕುರಿತು ಜಾಗೃತಿ ಮೂಡಿಸಿ ಉದ್ಯೋಗ ಚೀಟಿ ನೀಡಲಾಗುವುದು ಎಂದರು.
ನರೇಗಾ ಯೋಜನೆಯಡಿ ದಿನಕ್ಕೆ ಮೂರು ಬಾರಿ ಜಿಪಿಎಸ್ ಮಾಡುವುದು ಕಡ್ಡಾಯವಾಗಿದ್ದರಿಂದ ಕೂಲಿಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುತ್ತಿಲ್ಲ. ಅದಕ್ಕೂ ಕೂಡ ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಸರಿಪಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್.ಕಟ್ಟೆಗೌಡರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್.ವೈ.ಆಸಂಗಿ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಅಜಯ್.ಎನ್, ಪಿಡಿಒ ವೈ.ಎಚ್.ಹೊಟ್ಟಿಗೌಡರ, ಉಪ್ಪಾಧ್ಯಕ್ಷೆ ಗಿರಿಜಾ ಹಿರೇಮಠ, ತಾಂತ್ರಿಕ ಸಂಯೋಜಕ ವರುಣ್ ಕುಲಕರ್ಣಿ, ತಾಂತ್ರಿಕ ಸಹಾಯಕ ಎಂ.ಎಂ.ಶರಬತ್‌ವಾಲಾ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.