ಸೋಮವಾರ, ಜುಲೈ 4, 2022
20 °C
ಮಳೆಯ ನಡುವೆ ‘ಜನತಾ ಜಲಧಾರೆ’, ಪಂಚರತ್ನ ಯೋಜನೆ ಘೋಷಿಸಿದ ಕುಮಾರಸ್ವಾಮಿ

ಭರವಸೆ ಈಡೇರಿಸದಿದ್ದರೆ ಪಕ್ಷ ವಿಸರ್ಜನೆ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜನರ ಬದುಕು ಸುಂದರವಾಗಿರಬೇಕೆಂದು ‘ಪಂಚರತ್ನ’ ಯೋಜನೆಗಳನ್ನು ರೂಪಿಸಿದ್ದೇನೆ. ಅಧಿಕಾರಕ್ಕೆ ಬಂದ ಮೇಲೆ ನೀಡಿದ ಭರವಸೆಗಳನ್ನು ಈಡೇರಿಸದ್ದರೆ ಪಕ್ಷ ವಿಸರ್ಜನೆ ಮಾಡುವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆ ಅನುಷ್ಠಾನ ಹಾಗೂ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಜೆಡಿಎಸ್‌ ಗುರುವಾರ ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಜನತಾ ಜಲಧಾರೆ ಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಶಿಕ್ಷಣ, ಆರೋಗ್ಯ, ರೈತರ ಸಾಲಮನ್ನಾ, ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ಹಾಗೂ ಪ್ರತಿ ಕುಟುಂಬಕ್ಕೂ ಒಂದು ಮನೆ ನೀಡುವ ಪಂಚರತ್ನ ಯೋಜನೆಗಳನ್ನು ರೂಪಿಸಿದ್ದೇನೆ. ಇದರಿಂದ ಸಾಮಾನ್ಯ ಜನರ ಬದುಕು ಹಸನಾಗುತ್ತದೆ’ ಎಂದರು.

‘ಅಧಿಕಾರಕ್ಕೆ ಬಂದರೆ ಮಹದಾಯಿ ಯೋಜನೆ ಕಾರ್ಯಾರಂಭಕ್ಕೆ ಆದ್ಯತೆ ನೀಡುತ್ತೇನೆ. ಬಿಜೆಪಿ, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೂ ಜಾರಿಗೊಳಿಸಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಜನರ ಹಿತಾಸಕ್ತಿ ಬೇಕಾಗಿಲ್ಲ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಕೋರಿದರು.

‘ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಗಲಭೆ ಮಾಡಿದ ಸಮಾಜದವರಿಗೇ ಅನ್ಯಾಯವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ತಮ್ಮ ಬೇಳೆ ಬೇಯಿಸಿಕೊಂಡವು. ಈ ಎರಡೂ ಪಕ್ಷಗಳಿಗೆ ಜನರ ಶಾಂತಿ, ಭಾವೈಕ್ಯತೆ, ನೆಮ್ಮದಿ ಬೇಕಾಗಿಲ್ಲ’ ಎಂದು ಟೀಕಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ, ಶಂಕರ ಪವಾರ, ಪ್ರಕಾಶ ಅಂಗಡಿ, ಈಶ್ವರ ತಗ್ಗಿ, ಸಲೀಂ ಮುಲ್ಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಹೊರಟ್ಟಿಗೆ ಟಾಂಗ್‌ ಕೊಟ್ಟ ಕುಮಾರಸ್ವಾಮಿ

ಮಳೆಯ ನಡುವೆಯೂ ಇಷ್ಟೊಂದು ಜನ ಸೇರಿರುವುದು ನೋಡಿದರೆ ನಮ್ಮ ಪಕ್ಷಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಭವಿಷ್ಯವಿದೆ ಎನ್ನುವುದು ಗೊತ್ತಾಗುತ್ತದೆ. ಪಕ್ಷದಲ್ಲಿ ಇದ್ದವರು ಭವಿಷ್ಯವಿಲ್ಲವೆಂದು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕುಮಾರಸ್ವಾಮಿ ಟಾಂಗ್‌ ಕೊಟ್ಟರು. ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೊರಟ್ಟಿ ಇತ್ತೀಚೆಗೆ ಘೋಷಿಸಿದ್ದರು.

ಮಳೆ ಅಡ್ಡಿ; ಸಾಂಕೇತಿಕ ಯಾತ್ರೆ

ದುರ್ಗದ ಬೈಲ್‌ನಿಂದ ಮೂರುಸಾವಿರ ಮಠದ ತನಕ ‘ಜನತಾ ಜಲಧಾರೆ ಯಾತ್ರೆ’ ಹಾಗೂ ತೆರೆದ ಜೀಪಿನಲ್ಲಿ ಕುಮಾರಸ್ವಾಮಿ ಅವರ ಮೆರವಣಿಗೆ ನಿಗದಿಯಾಗಿತ್ತು. ಸಾಂಸ್ಕೃತಿಕ ಕಲಾ ತಂಡಗಳು, ಕಾರ್ಯಕರ್ತರು ಉತ್ಸಾಹದಿಂದ ಕಾಯುತ್ತಿದ್ದರು.

ಗುಡುಗು ಹಾಗೂ ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದ ಕಾರಣ ಯಾತ್ರೆ ನಡೆಯಲಿಲ್ಲ. ಮಳೆ ನಿಂತ ಕೆಲಹೊತ್ತಿನ ಬಳಿಕ ದುರ್ಗದ ಬೈಲ್‌ಗೆ ಬಂದ ಕುಮಾರಸ್ವಾಮಿ ಸಾಂಕೇತಿಕವಾಗಿ ಯಾತ್ರೆಗೆ ನಮಸ್ಕರಿಸಿ ಕಾರಿನಲ್ಲಿ ಮೂರುಸಾವಿರ ಮಠಕ್ಕೆ ತೆರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು