ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ತಿರುವುಗಳ ಸಿನಿಮಾ ‘ಜರ್ಕ್’ 26ಕ್ಕೆ ರಾಜ್ಯದಾದ್ಯಂತ ತೆರೆಗೆ

Last Updated 15 ಜುಲೈ 2019, 14:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರತಿಯೊಬ್ಬರ ಬದುಕಿನಲ್ಲೂ ಹಲವು ತಿರುವುಗಳಿರುತ್ತವೆ. ಅದರಿಂದ ವ್ಯಕ್ತಿಯ ಜೀವನದಲ್ಲಿ ಎಂತಹ ಬದಲಾವಣೆಗಳಾಗುತ್ತವೆ ಎಂಬುದೇ ನಮ್ಮ ಸಿನಿಮಾದ ತಿರುಳು’ ಎಂದು ‘ಜರ್ಕ್’ ಸಿನಿಮಾದ ನಿರ್ದೇಶಕ ಮಹಾಂತೇಶ್ ಮದಕರಿ ತಮ್ಮ ಚಿತ್ರದ ಎಳೆಯನ್ನು ಬಿಚ್ಚಿಟ್ಟರು.

ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡದೊಂದಿಗೆ ಸೋಮವಾರ ನಗರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಬೆಂಗಳೂರಿನ ಮೆಟ್ರೊದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಮಿತ್ರರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಕೆಲಸದ ಸ್ಥಳದಲ್ಲೇ ಹೊಳೆದ ಕಥೆಗೆ ಚಿತ್ರಕಥೆ ಬರೆದು, ನಿರ್ದೇಶನ ಮಾಡಿ ಜುಲೈ 26ಕ್ಕೆ ತೆರೆಗೆ ತರಲು ತಯಾರಿ ನಡೆಸುತ್ತಿದ್ದೇನೆ’ ಎಂದರು.

‘ಕೆಎಎಸ್ ತರಬೇತಿಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಬರುವ ಹುಡುಗ ಎದುರಿಸುವ ಸವಾಲುಗಳು ಹಾಗೂ ಆತನ ಸುತ್ತ ನಡೆಯುವ ವಿದ್ಯಮಾನಗಳನ್ನು ಕಥೆಯಲ್ಲಿ ಹೇಳಲಾಗಿದೆ. ಆ್ಯಕ್ಷನ್, ಸಸ್ಪೆನ್ಸ್‌ ಕಥಾಹಂದರವಿರುವ ಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶವಿದೆ. ‘ತಿಥಿ’ ಖ್ಯಾತಿಯ ಚನ್ನೇಗೌಡ (ಗಡ್ಡಪ್ಪ) ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ತಮ್ಮ ಮೊದಲ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.‌

‘ಚಿತ್ರಕ್ಕೆ ತ್ರಿಭುವನ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಎಡ್ವರ್ಡ್ ಷಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಜಾ ಟಾಕೀಸ್‌ನ ಪವನ್ ಹಾಗೂ ಕುರಿ ರಂಗ ಅವರು ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ’ ಎಂದರು.

‘ಬೀದರ್‌ ಮೂಲದವನಾದ ನನಗೆ ಇದು ಮೊದಲ ಸಿನಿಮಾ’ ಎಂದು ಮಾತು ಆರಂಭಿಸಿದ ನಾಯಕ ನಟ ಕೃಷ್ಣರಾಜ್, ‘ಚಿತ್ರತಂಡದಲ್ಲಿರುವ ಪ್ರತಿಯೊಬ್ಬರೂ ರಂಗಭೂಮಿಯ ಹಿನ್ನೆಲೆ ಹೊಂದಿದ್ದೇವೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಬೇಕಾದ ಮನರಂಜನೆಯ ಸರಕನ್ನು ನಿರ್ದೇಶಕರು ಕಥೆಯಲ್ಲಿ ಅಡಕಗೊಳಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳ ಜತೆಗೆ, ಒಂದು ಹೊಡೆದಾಟದ ದೃಶ್ಯವಿದೆ’ ಎಂದರು.‌

ನಟಿ ನಿತ್ಯಾರಾಜ್, ‘ಸಮಾಜಮುಖಿಯಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ನನಗೆ ನಿರ್ದೇಶಕರೇ ನಟನಾ ಗುರು. ನನಗೂ ಇದು ಮೊದಲ ಸಿನಿಮಾವಾಗಿದ್ದು, ಪ್ರೇಕ್ಷಕರು ನನ್ನ ನಟನೆಯನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌‌‌ ‘ವೃತ್ತಿಯಲ್ಲಿ ಭರತನಾಟ್ಯ ಹಾಗೂ ನೃತ್ಯ ಕಲಾವಿದೆಯಾಗಿದ್ದ ನನಗೆ ಸಿನಿಮಾದಲ್ಲಿ ಉತ್ತಮ ಪಾತ್ರ ಸಿಕ್ಕಿದೆ’ ಎಂದು ಮತ್ತೊಬ್ಬ ನಟಿ ಆಶಾ ಭಂಡಾರಿ ಹೇಳಿದರು.

ನಿರ್ಮಾಪಕರಾದ ರವಿಕುಮಾರ್ ಮಾತನಾಡಿ, ‘ರಾಜ್ಯದಾದ್ಯಂತ 100 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಶೇ 70ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT