ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ವಿದ್ಯಾರ್ಥಿಗಳಿಂದ ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ

ಜೆಜಿಸಿಸಿ ಕಾಲೇಜಿನಲ್ಲಿ ಅಭಿಯಾನ; 200 ಚೀಲಕ್ಕೂ ಹೆಚ್ಚು ಅಕ್ಕಿ ಸಂಗ್ರಹ
Last Updated 19 ಜನವರಿ 2022, 9:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಬಡ, ನಿರ್ಗತಿಕ ಹಾಗೂ ದಾಸೋಹ ಕೈಂಕರ್ಯ ನಡೆಸುತ್ತಿರುವ ಮಠಗಳಿಗೆ ವಿತರಿಸುವುದಕ್ಕಾಗಿ, ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್‌) ವಿದ್ಯಾರ್ಥಿಗಳು ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ ಆರಂಭಿಸಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಡಿ.ವಿ. ಹೊನಗಣ್ಣವರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸುಮಾರು 50 ವಿದ್ಯಾರ್ಥಿಗಳು ಜ. 1ರಿಂದ 20ರವರೆಗೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದುವರೆಗೆ 25 ಕೆ.ಜಿ.ಯ 200ಕ್ಕೂ ಹೆಚ್ಚು ಅಕ್ಕಿ ಚೀಲಗಳು ಸಂಗ್ರಹವಾಗಿವೆ. ಇನ್ನೂ 100ಕ್ಕೂ ಹೆಚ್ಚು ಅಕ್ಕಿ ಚೀಲಗಳು ಸಂಗ್ರಹವಾಗುವ ನಿರೀಕ್ಷೆ ಇದೆ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಅಭಿಯಾನಕ್ಕೆ ಸ್ಪಂದಿಸಿ ಅಕ್ಕಿ ಚೀಲಗಳನ್ನು ಕಳಿಸುತ್ತಿದ್ದಾರೆ. ಆರಂಭದಲ್ಲಿ ಒಂದು ಮುಷ್ಠಿ ಅಕ್ಕಿಯೊಂದಿಗೆ ಆರಂಭಗೊಂಡ ಅಭಿಯಾನವು ಇದೀಗ, 25 ಕೆ.ಜಿ ಚೀಲದ ಅಕ್ಕಿ ಸಂಗ್ರಹದ ಹಂತಕ್ಕೆ ಬಂದಿದೆ’ ಎಂದರು.

ಎನ್‌ಎಸ್‌ಎಸ್‌ ಅಧಿಕಾರಿ ಪ್ರೊ.ವಿ.ಎಸ್. ಕಟ್ಟೀಮಠ ಮಾತನಾಡಿ, ‘ಸಂಗ್ರಹಗೊಂಡಿರುವ ಅಕ್ಕಿ ಪೈಕಿ 101 ಚೀಲಗಳನ್ನು ಸಿದ್ಧಾರೂಢ ಮಠಕ್ಕೆ ನೀಡಲಾಗುವುದು. ಉಳಿದ ಅಕ್ಕಿಯನ್ನು ಮೂರುಸಾವಿರ ಮಠ, ಧಾರವಾಡದ ಮುರುಘಾಮಠ, ಕುಂದಗೋಳದ ಬಸವಣ್ಣಜ್ಜನವರ ದಾಸೋಹ ಮಠ, ಹುಬ್ಬಳ್ಳಿಯ ಹಳೇ ಕೋರ್ಟ್ ವೃತ್ತದಲ್ಲಿರುವ ಸಾಯಿ ಮಂದಿರ, ಅನಾಥಾಶ್ರಮ, ಅಂಧ–ಕಿವುಡ ಮಕ್ಕಳ ಸಂಸ್ಥೆ, ರಸ್ತೆ ಬದಿ ವಾಸಿಸುವ ನಿರಾಶ್ರಿತರು ಹಾಗೂ ಬಡವರಿಗೆ ವಿತರಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

ಅಭಿಯಾನದ ವಿದ್ಯಾರ್ಥಿಗಳಾದ ಮೀನಾಕ್ಷಿ ಹೊಂಡಲಕಟ್ಟಿ, ನವೀನ ಹೂಗಾರ, ಆದರ್ಶಗೌಡ ಎಂ., ಹೃಷಿಕೇಶ ಮಾನ್ವಿ, ಸುದೀಪ ಕುಂದರಗಿ, ಪುಜಾ ಸತೀಶ, ರಾಜು ಪವಾರ, ಮಲ್ಲಿಕಾರ್ಜುನ ಸಣ್ಣಗೌಡರ, ಸಚಿನ ಸುಬ್ಬಣ್ಣವರ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರೊ. ಮ್ಯಾಗ್ಲಿನ್ ಕ್ರೂಸ್, ಪ್ರೊ.ಎಸ್‌.ಎ. ಗಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT