ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಕಾದವರನ್ನೂ ಜೋಶಿ ತುಳಿಯುತ್ತಾರೆ: ದಿಂಗಾಲೇಶ್ವರ ಸ್ವಾಮೀಜಿ

Published 12 ಏಪ್ರಿಲ್ 2024, 16:06 IST
Last Updated 12 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸರ್ವಾಧಿಕಾರಿ ಹಿಟ್ಲರ್‌ ತನಗೆ ಬೇಡದವರನ್ನು ಮಾತ್ರ ತುಳಿಯುತ್ತಿದ್ದ. ಆದರೆ, ಪ್ರಲ್ಹಾದ ಜೋಶಿ ತಮಗೆ ಬೇಕಾದವರನ್ನೂ ತುಳಿಯುತ್ತಾರೆ. ಅವರನ್ನು ಯಾರಿಗೆ ಹೋಲಿಸಬೇಕು? ಜೋಶಿ ಕೈಯಲ್ಲಿ ಆ ಹಿಟ್ಲರ್‌ ತರಬೇತಿ ಪಡೆಯಬೇಕಿತ್ತು’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌,  ಲಕ್ಷ್ಮಣ ಸವದಿ, ಕೆ.ಎಸ್‌. ಈಶ್ವರಪ್ಪ ಅವರನ್ನು ಕೆಳಗಿಳಿಸುವಾಗ ಜೋಶಿ ಬಾಯಿ ಮುಚ್ಚಿಕೊಂಡು ಕೂತಿದ್ದರು. ಈಗ ಅವರಿಗೆ ಈ ಸ್ಥಿತಿ ಬಂದಾಗ ಎಲ್ಲ ಸಮುದಾಯಗಳ ನಾಯಕರು ಇವರ ಪರ ಹೋರಾಟ ಮಾಡಬೇಕಾ’ ಎಂದರು.

‘ಚುನಾವಣೆಗೆ ನಾನು ಸ್ಪರ್ಧಿಸುತ್ತಿರುವ ಕಾರಣ ಬಿಜೆಪಿಯ ಪ್ರಲ್ಹಾದ ಜೋಶಿ ಹತಾಶರಾಗಿದ್ದಾರೆ. ಎಲ್ಲಾ ಜಾತಿಯ ನಾಯಕರನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಅವರು ನಿಸ್ಸೀಮರು’ ಎಂದು ಅವರು ಟೀಕಿಸಿದರು.

‘ನನ್ನನ್ನು ತೇಜೋವಧೆಗೆ ಸಮಾಜವನ್ನೇ ಒಡೆದು, ನನ್ನ ವಿರುದ್ಧ ನಿಲ್ಲಿಸುವ ಪ್ರಯತ್ನ ನಡೆದಿದೆ. ನನ್ನ ವಿರುದ್ಧ ಭಕ್ತರನ್ನು ಎತ್ತಿಕಟ್ಟಿ, ಅವರಿಂದ ಪತ್ರಿಕಾಗೋಷ್ಠಿ ಮಾಡಿಸಿದ್ದಾರೆ. ಇಂತಹ ಅನೇಕ ಕುತಂತ್ರ ಅವರು ಮಾಡಿದ್ದಾರೆ’ ಎಂದರು.

‘ತಮ್ಮ ಹಿರಿತನ ಉಳಿಸಿಕೊಳ್ಳಲು ಜೋಶಿ ಅವರು ಪಕ್ಷದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ಕರಡಿ ಸಂಗಣ್ಣ, ಶಿವಕುಮಾರ ಉದಾಸಿ, ಜಿ.ಎಂ. ಸಿದ್ಧೇಶ್ವರ, ಮಹೇಶ ನಾಲವಾಡ ಸೇರಿ ಹಲವು ನಾಯಕರನ್ನು ರಾಜಕೀಯವಾಗಿ ನಾಶ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೆ’ ಎಂದು ಆರೋಪಿಸಿದರು.

ಭಕ್ತರಿಂದ ‘ಗೋ ಬ್ಯಾಕ್‌’ ಅಭಿಯಾನ: ಎಚ್ಚರಿಕೆ

‘ದಿಂಗಾಲೇಶ್ವರ ಶ್ರೀ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ಶಿರಹಟ್ಟಿ ಫಕೀರೇಶ್ವರ ಮಠದಿಂದ ಹೊರ ನಡೆಯುವಂತೆ ಆಗ್ರಹಿಸಿ ಗೋ ಬ್ಯಾಕ್‌ ಅಭಿಯಾನ ಆರಂಭಿಸುತ್ತೇವೆ’  ಎಂದು ಶಿರಹಟ್ಟಿ ಲಕ್ಷ್ಮೇಶ್ವರ ತಾಲ್ಲೂಕಿನ ಮಠದ ಭಕ್ತರು ಎಚ್ಚರಿಕೆ ನೀಡಿದ್ದಾರೆ. ಶಿರಹಟ್ಟಿಯಲ್ಲಿ ಶುಕ್ರವಾರ ನಡೆದ ಭಕ್ತರ ಸಭೆಯಲ್ಲಿ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಮಾತನಾಡಿ ‘ಮಠಾಧೀಶರು ರಾಜಕೀಯ ಪ್ರವೇಶ ಮಾಡುವುದು ನಮ್ಮಲ್ಲಿ ನಿಷಿದ್ಧ. ರಾಜ್ಯದ ಮಠಾಧೀಶರು ಧರ್ಮ ಜಾಗೃತಿ ಮಾಡಬೇಕು. ಒಂದು ವೇಳೆ ಅವರಿಗೆ ರಾಜಕೀಯ ಪ್ರವೇಶಿಸುವ ಇಚ್ಛೆಯಿದ್ದರೆ ಮಠ ಬಿಟ್ಟು ಹೊರನಡೆಯಬೇಕು’ ಎಂದರು. ‘ದೇಶದಲ್ಲಿ ಶೇ 5ರಷ್ಟಿರುವ ಬ್ರಾಹ್ಮಣರು ನಮ್ಮನ್ನು ಆಳುತ್ತಾರೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ. ಫಕೀರೇಶ್ವರ ಮಠ ಭಾವೈಕ್ಯದ ಮಠ. ಆದರೆ ಆ ಮಠದ ಉತ್ತರಾಧಿಕಾರಿ ಆಗಿರುವ ದಿಂಗಾಲೇಶ್ವರ ಶ್ರೀಗಳು ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡುತ್ತಾರೆ. ಬ್ರಾಹ್ಮಣರು ಶೇ 5 ಅಥವಾ ಶೇ 10ರಷ್ಟಾದರೂ ಇರಲಿ. ಬ್ರಾಹ್ಮಣರ ಬಗ್ಗೆ ಆ ರೀತಿ ಮಾತನಾಡುವುದೇ ಆದರೆ ಅವರು ಖಾವಿ ತ್ಯಜಿಸಿ ಖಾದಿ ಧರಿಸಿ ರಾಜಕೀಯ ಪ್ರವೇಶ ಮಾಡಲಿ’ ಎಂದು ಅವರು ಕಿಡಿಕಾರಿದರು. ‘ಫಕೀರೇಶ್ವರ ಮಠವನ್ನು ಸುತ್ತೂರು ಸಿದ್ಧಗಂಗಾ ಮಠದಂತೆ ಶೈಕ್ಷಣಿಕವಾಗಿ ಉನ್ನತೀಕರಿಸುತ್ತಾರೆ ಎಂಬ ಆಶಯದಿಂದ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದೆವು. ಆದರೆ ಅವರು ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದಾರೆ. ಅವರು ತಮ್ಮ ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡುತ್ತಾರೆ. ಮೋದಿ ಬಂದು ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಅವರಿಗೆ ನಾವು ಯಾವ ಲೆಕ್ಕ. ಏಪ್ರಿಲ್ 18ರಂದು ಅವರು ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಶಿರಹಟ್ಟಿ ಜನತೆ ಮಠದ ಭಕ್ತರು ನಿರ್ಧರಿಸುವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT