ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮನ ಮೂರ್ತಿ ಕೆತ್ತನೆಗೆ ಕೈಜೋಡಿಸಿದ ಕಲಘಟಗಿ ಶಿಲ್ಪಿ

ಕಲ್ಲಪ್ಪ ಮ. ಮಿರ್ಜಿ
Published 15 ಜನವರಿ 2024, 6:42 IST
Last Updated 15 ಜನವರಿ 2024, 6:42 IST
ಅಕ್ಷರ ಗಾತ್ರ

ಕಲಘಟಗಿ: ಶ್ರೀರಾಮನ ಜನ್ಮಭೂಮಿ ಆಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ದೇವಾಲಯದಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆಯಲ್ಲಿ ತಾಲ್ಲೂಕಿನ ಯುವ ಪ್ರತಿಭಾವಂತ ಕಲಾವಿದರೊಬ್ಬರೂ ಭಾಗವಹಿಸಿ ತಮ್ಮ ಶಿಲ್ಪಕಲೆ ಪ್ರದರ್ಶಿಸಿ ಪ್ರತಿಭೆ ಅನಾವರಣಗೊಳಿಸಿದ್ದಾರೆ.

ತಾಲ್ಲೂಕಿನ ಅರಣ್ಯ ಪ್ರದೇಶದ ಜುಂಜನಬೈಲ್ ಗ್ರಾಮದ ಪ್ರತಿಭಾವಂತ ಶಿಲ್ಪ ಕಲಾವಿದ ಪ್ರಕಾಶ ಹರಮಣ್ಣವರ ಶ್ರೀರಾಮನ ಜನ್ಮಭೂಮಿಯಲ್ಲಿ ಕೆತ್ತನೆ ಮಾಡಿದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಣೆಗೆ ಸಿದ್ಧಗೊಂಡಿದೆ.

ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಶ್ರೀರಾಮನ ನೂತನ ಮೂರ್ತಿ ತಯಾರಿಕೆಗೆ ದೇಶದ ಮೂರು ತಂಡಗಳಿಗೆ ಜವಾಬ್ದಾರಿ ವಹಿಸಲಾಗಿತ್ತು. ಅದರಲ್ಲಿ ಬೆಂಗಳೂರಿನ ವಿಪಿನ್ ಬದೋರಿಯಾ ಹಾಗೂ ಜಿ.ಎಲ್. ಭಟ್ ಅವರ ನೇತೃತ್ವದ ತಂಡದಲ್ಲಿ ಪ್ರಕಾಶ ಹರಮಣ್ಣವರ ಕೂಡ ಒಬ್ಬರಾಗಿದ್ದರು.

ಕಳೆದ 8 ತಿಂಗಳಿಂದ ಶ್ರೀರಾಮ ತಯಾರಿಕೆ ಕಾರ್ಯ ಪೂರ್ಣಗೊಳಿಸಿ ಈಗ ಮರಳಿ ಸ್ವಗ್ರಾಮಕ್ಕೆ ಆಗಮಿಸಿದ್ದರಿಂದ ಪ್ರಕಾಶ ಅವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಾಲರಾಮನ ಪ್ರತಿಷ್ಠಾಪನೆ: ಅಯೋಧ್ಯೆಯ ಮೂಲ ಮಂದಿರದಲ್ಲಿದ್ದ ಬಾಲರಾಮ ಅವತಾರವನ್ನೇ ಪುನರ್ ಪ್ರತಿಷ್ಠಾಪನೆಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿಯವರು ನಿರ್ಧರಿಸಿದ್ದರಿಂದ ಬಾಲರಾಮನ ಮೂರ್ತಿಯನ್ನು ಕಲಾವಿದರು ತಯಾರಿಸಿದ್ದಾರೆ. ಮೂರ್ತಿ ಏಳೂವರೆ ಅಡಿ ಎತ್ತರ, 24 ಇಂಚು ದಪ್ಪ, 41 ಇಂಚು ಅಗಲವಿದೆ. ಮೂರ್ತಿಯನ್ನು ಕೃಷ್ಣೆ ಶಿಲೆ ಅಥವಾ ಶ್ಯಾಮ್ ಶಿಲೆ ಕರೆಯಕಲ್ಪಡುವ ಶಿಲೆಯಿಂದ ತಯಾರಿಸಲಾಗಿದೆ ಎನ್ನುತ್ತಾರೆ ಪ್ರಕಾಶ ಹರಮಣ್ಣವರ.

ಸಾಗರದಲ್ಲಿ ಕಲಾಲೋಕ: ಕಲಘಟಗಿ ಪಟ್ಟಣದ ಗುಡ್ ನ್ಯೂಸ್ ಕಾಲೇಜಿನಲ್ಲಿ ಪಿಯುಸಿ ಓದಿರುವ ಪ್ರಕಾಶ, ನಂತರ ಸಾಗರದ ಕರ್ನಾಟಕ ರಾಜ್ಯ ಕರಕುಶುಲ ಅಭಿವೃದ್ಧಿ ನಿಗಮದ ಶಿಲ್ಪ ಗುರುಕುಲದಲ್ಲಿ ಎರಡು ವರ್ಷ ಕೋರ್ಸ್ ಮುಗಿದಿಸಿದ್ದರು.

ಆನಂತರ ಮೈಸೂರಲ್ಲಿ ರವಿವರ್ಮಾ ಆರ್ಟ್ ಕಾಲೇಜಿನಲ್ಲಿ ವಿಜವಲ್ ಡಿಗ್ರಿ (ಬಿವಿಎ) ಪದವಿ ಪಡೆದು ಸದ್ಯ ಸಾಗರದಲ್ಲಿ ಕಲಾಲೋಕ ಆರ್ಟ್ ಸ್ಟೂಡಿಯೋ ತೆರೆದಿರುವ ಪ್ರಕಾಶ ದೇಶದಲ್ಲೆಡೆ ಕ್ಯಾಂಪ್ ಆಯೋಜಿಸುವ ಮೂಲಕ ಶಿಲ್ಪ ಕಲಾಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಶ್ರೀರಾಮ ಮೂರ್ತಿ ಸಿದ್ಧಪಡಿಸಲು ತಮ್ಮ ಗುರುಕುಲದ ಹಳೆಯ ವಿದ್ಯಾರ್ಥಿಗಳಲ್ಲಿ 5 ಜನರ ತಂಡವನ್ನು ವಿಪಿನ್ ಬದೂರಿಯಾ ಆಯ್ಕೆ ಮಾಡಿಕೊಂಡಿದ್ದರು. ಕಲಘಟಗಿ ತಾಲೂಕಿನ ಜುಂಜನಬೈಲ್ ಗ್ರಾಮದ ಪ್ರಕಾಶ್ ಹರಮಣ್ಣವರ, ಹಾನಗಲ್ಲ ತಾಲೂಕಿನ ಹಿರೇಕಂಸಿ ಗ್ರಾಮದ ಮೌನೇಶ ಬಡಿಗೇರ ಅವರನ್ನು ಒಳಗೊಂಡು ಮೊದಲು ನಾಲ್ಕು ತಿಂಗಳು ಮೂರ್ತಿ ಕೆತ್ತನೆ ಆರಂಭಿಸಿದ್ದರು. ಆನಂತರ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯ ಸಂದೀಪ್ ನಾಯಕ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಜಯಚಂದ್ರ ಎಂಬುವವರು ತಂಡ ಸೇರಿದ್ದರು. ಈ ಎಲ್ಲ ಕಲಾವಿದರು ಸತತ 7 ತಿಂಗಳಿನಿಂದ ಅಯೋಧ್ಯೆಯಲ್ಲಿ ಬಿಡುಬಿಟ್ಟು ಮೂರ್ತಿ ಕೆತ್ತನೆ ಕಾರ್ಯಪೂರ್ಣಗೊಳಿಸಿದ್ದಾರೆ.

ಜ.17ಕ್ಕೆ ಆಯ್ಕೆ: ‘ದೇಶದ ಮೂರು ಭಾಗದಿಂದ ತಯಾರಾದ ಬಾಲರಾಮನ ಮೂರ್ತಿಗಳನ್ನು ಅಂತಿಮವಾಗಿ ಜ.17ರಂದು ಆಯ್ಕೆ ಮಾಡಲಾಗುತ್ತಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ ಪದಾಧಿಕಾರಿಗಳು ಮೂರೂ ಮೂರ್ತಿಗಳನ್ನು ಪರಿಶೀಲಿಸಿ ಅಂತಿಮವಾಗಿ ಪ್ರತಿಷ್ಠಾಪನೆಗೊಳ್ಳುವ ಬಾಲರಾಮನ ಮೂರ್ತಿ ಆಯ್ಕೆ ಮಾಡಲಿದ್ದಾರೆ. ಬೆಂಗಳೂರಿನ ನಮ್ಮ ತಂಡದಿಂದ ತಯಾರಾದ ಮೂರ್ತಿ ಹಾಗೂ ಮೈಸೂರು, ರಾಜಸ್ಥಾನದ ಕಲಾವಿದರಿಂದ ತಯಾರದ ಮೂರ್ತಿಗಳು ಆಯ್ಕೆ ಪಟ್ಟಿಯಲ್ಲಿವೆ‘ ಎನ್ನುತ್ತಾರೆ ಪ್ರಕಾಶ.

‘ಗ್ರಾಮೀಣ ಪ್ರದೇಶದಲ್ಲಿ ಬೆಳೆದ ನನಗೆ ಮೊದಲಿನಿಂದಲೂ ಶಿಲ್ಪಕಲೆಯ ಬಗ್ಗೆ ಸಾಕಷ್ಟು ಆಸಕ್ತಿ ತೋರಿದ್ದೆ ವಿಪಿನ್ ಬದೂರಿಯಾ ಅವರ ಮಾರ್ಗದರ್ಶನದಲ್ಲಿ ಬೆಳೆದು ನನ್ನ ಕಲೆಯನ್ನು ಗುರುತಿಸಿ ಇಂತಹ ಮಹಾನ್ ಕಾರ್ಯಕ್ಕೆ ಗುರುಗಳು ನನಗೆ ಅವಕಾಶ ನೀಡಿರುವುದು ಜೀವನದ ಮರೆಯಲಾಗದ ಕ್ಷಣ‘ ಎಂದು ಶಿಲ್ಪ ಕಲಾವಿದ ಪ್ರಕಾಶ ಹರಮಣ್ಣವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT