ಧಾರವಾಡ: ತಾಲ್ಲೂಕಿನ ಕರಡಿಗುಡ್ಡದ ಕೆರೆಗೆ ಕೊಳಚೆ ನೀರು ಸೇರುತ್ತಿದ್ದು, ಒಂದು ಕಾಲದಲ್ಲಿ ಗ್ರಾಮದ ಜೀವಜಲವಾಗಿದ್ದ ಕೆರೆ ಸದ್ಯ ಕಲುಷಿತಗೊಂಡು, ದುರ್ನಾತ ಬೀರುತ್ತಿದೆ.
ಸುಮಾರು 10 ಎಕರೆ ಪ್ರದೇಶದಲ್ಲಿರುವ ಈ ಕೆರೆಯ ಹೂಳೆತ್ತಿ ಹಲವಾರು ವರ್ಷಗಳೇ ಕಳೆದಿವೆ. 15 ವರ್ಷಗಳ ಹಿಂದೆ ಸಮೃದ್ಧವಾಗಿದ್ದ ಕೆರೆ ಸದ್ಯ ಹಳಾಗಿದೆ. ಕೆರೆಯ ತುಂಬ ಗಿಡಗಂಟಿಗಳು ಬೆಳೆದಿದ್ದು, ಗ್ರಾಮದ ಕಸ ಹಾಗೂ ಚರಂಡಿ ನೀರು ಕೆರೆ ಸೇರುತ್ತಿದೆ. ಕೆರೆಯ ಕೆಲ ಭಾಗಗಳು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವ ಕಾರ್ಯವೂ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕೆರೆ ಅಭಿವೃದ್ಧಿಗೂ ಅನುದಾನ ಮೀಸಲಿಡಲಾಗಿದೆ. ಆದರೆ, ಗ್ರಾಮಸ್ಥರ ದೂರುಗಳು ಇರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ತಿಳಿಸಿದರು.
ಕೆರೆ ಸಮೃದ್ಧವಾಗಿದ್ದ ಸಂದರ್ಭದಲ್ಲಿ ಗ್ರಾಮದ ದನ–ಕರುಗಳಿಗೆ ನೀರು ಪೂರೈಸುತ್ತಿತ್ತು. ಬೇಸಿಗೆಯಲ್ಲಿಯೂ ಕೆರೆ ತುಂಬಿರುತಿತ್ತು. ಆದರೆ, ಮಲಪ್ರಭಾ ನದಿ ನೀರು ಬಂದಾಗಿನಿಂದ ಈ ಕೆರೆ ನೀರನ್ನು ಯಾರೂ ಬಳಕೆ ಮಾಡುತ್ತಿಲ್ಲ. ವಸತಿ ಪ್ರದೇಶಕ್ಕಿಂತ ಕೆರೆ ತಗ್ಗಿನಲ್ಲಿದ್ದು, ಚರಂಡಿ ನೀರು ಕೆರೆಯ ಒಡಲು ಸೇರುತ್ತಿದೆ.
ಜೆಜೆಎಂ ಯೋಜನೆ ಜಿಲ್ಲೆಯಲ್ಲೇ ಮೊದಲು ಜಾರಿಯಾಗಿದ್ದು ಈ ಗ್ರಾಮದಲ್ಲಿ. ಆದರೆ, ಜನರಿಗೆ ನೀರು ಪೂರೈಸುವಲ್ಲಿ ಯೋಜನೆಸಂಪೂರ್ಣವಾಗಿ ಮುಗ್ಗರಿಸಿದೆ. ಅವೈಜ್ಞಾನಿಕವಾಗಿ ನಲ್ಲಿಗಳನ್ನು ಅಳವಡಿಸಿದ ಪರಿಣಾಮ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ನಲ್ಲಿಯಲ್ಲಿ ಹನಿ ಹನಿಯಾಗಿ ನೀರು ಬರುತ್ತಿದೆ ಎಂದು ಗ್ರಾಮದ ನಿವಾಸಿ ಈರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಸಂಬಂಧ ಮಾಹಿತಿ ಪಡೆಯಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಸಲಿಂಗಪ್ಪ ಮಡಿವಾಳರ ಅವರನ್ನು ಹಲವು ಬಾರಿ ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ.
ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಡಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಳೀಯ ಆಡಳಿತ ಮಂಡಳಿ ಕೈಗೆತ್ತಿಕೊಂಡಿದೆ. ಗ್ರಾಮದ ವಿವಿಧ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಹೊಸ ಚರಂಡಿಗಳ ನಿರ್ಮಾಣ, ರೈತರು ಹೊಲಗಳಿಗೆ ಹೋಗುವ ದಾರಿಗಳನ್ನು ದುರಸ್ತಿಗೊಳಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣ, ಭೋಜನಾಲಯಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ತಿಳಿಸಿದರು.
ಶಾಲೆಗಳಲ್ಲಿ ಸ್ವಚ್ಛಂದ ವಾತಾವರಣ: ಸುತ್ತಲೂ ಗಿಡ–ಮರಗಳಿಂದ ಕೂಡಿದ ಹಚ್ಚ ಹಸಿರಿನ ವಾತಾವರಣ. ಹಲವು ಬಗೆಯ ಹೂವು, ಹಣ್ಣುಗಳ ಗಿಡಗಳು. ಹೀಗೆ ಗ್ರಾಮದ ಶಾಲೆಗಳ ವಾತಾವರಣ ಸ್ವಚ್ಛಂದವಾಗಿವೆ. ವಿಶಾಲವಾದ ಆಟ ಮೈದಾನಗಳೂ ಇವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.