ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka elections 2023: ಕಲಘಟಗಿಯಲ್ಲಿ ಸ್ನೇಹಿತರ ಸವಾಲ್‌

ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ; ನೆಲೆಯೂರಲು ಜೆಡಿಎಸ್ ಕಸರತ್ತು
Published 8 ಮೇ 2023, 6:58 IST
Last Updated 8 ಮೇ 2023, 6:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿಂದೆ ಒಂದೇ ಪಕ್ಷದಲ್ಲಿದ್ದ, ಸ್ನೇಹಿತರೂ ಆಗಿರುವ ಸಂತೋಷ್ ಲಾಡ್ ಮತ್ತು ನಾಗರಾಜ ಛಬ್ಬಿ ಈಗ ಎದುರಾಳಿಗಳಾಗಿದ್ದಾರೆ. ಹೀಗಾಗಿ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ನೇಹಿತರ ಸವಾಲ್ ಏರ್ಪಟ್ಟಿದೆ.

ಸಂತೋಷ್ ಲಾಡ್ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಅದೇ ಪಕ್ಷದಲ್ಲಿದ್ದ ಛಬ್ಬಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದರಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ವೈದ್ಯ ವೀರಣ್ಣ ಸೀಗಿಗಟ್ಟಿ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ಮರಾಠರ ಮತಗಳೇ ನಿರ್ಣಾಯಕವಾಗಿವೆ. ಛಬ್ಬಿ ಮತ್ತು ಲಾಡ್‌ ಅವರು ಈ ಸಮುದಾಯಗಳಿಗೆ ಸೇರಿರುವುದರಿಂದ ಚುನಾವಣಾ ಕಣ ಇನ್ನಷ್ಟು ರಂಗೇರಿದೆ.

ಎರಡು ಬಾರಿ ಶಾಸಕರಾಗಿದ್ದ ಲಾಡ್ ಅವರಿಗೆ 2018ರ ಚುನಾವಣೆಯಲ್ಲಿ ಮತದಾರರು ಕೈಹಿಡಿದಿರಲಿಲ್ಲ. ಕೈತಪ್ಪಿರುವ ಕ್ಷೇತ್ರದಲ್ಲಿ ಮತ್ತೆ ಪ್ರಾಬಲ್ಯ ಮೆರೆಯಲು ಅವರು ಯತ್ನಿಸುತ್ತಿದ್ದಾರೆ.

ಶಾಸಕರಾಗಿ, ಸಚಿವರಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳು, ಕೋವಿಡ್‌ ಸಂದರ್ಭದಲ್ಲಿ ಜನರಿಗೆ ನೆರವಾಗಿದ್ದರಿಂದ ಜನ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಲಾಡ್‌ ಅವರದ್ದು.  ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಪಕ್ಷದ ಸಾಂಪ್ರದಾಯಿಕ ಮತಗಳನ್ನು ಅವರು ನೆಚ್ಚಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಗೆಲುವಿನ ಪತಾಕೆ ಹಾರಿಸಿದ್ದ ಬಿಜೆಪಿ ಈ ಬಾರಿಯೂ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮತ್ತು ಲಾಡ್‌ ಅವರ ಪಟ್ಟುಗಳನ್ನು ತಿಳಿದಿರುವ ಛಬ್ಬಿ ಅವರನ್ನು ಹುರಿಯಾಳು ಮಾಡಲಾಗಿದೆ. ಛಬ್ಬಿ ಅವರ ಪರ ನಟ ಸುದೀಪ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಚಾರ ನಡೆಸಿದ್ದಾರೆ. 

ವಿಧಾನ ಪರಿಷತ್‌ ಸದಸ್ಯರೂ ಆಗಿದ್ದ ನಾಗರಾಜ ಛಬ್ಬಿ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಕೊನೆ ಗಳಿಗೆಯಲ್ಲಿ ಪಕ್ಷ ಟಿಕೆಟ್‌ ನಿರಾಕರಿಸಿದ್ದರಿಂದ ‘ಕೈ’ ಬಿಟ್ಟು ಕಮಲ ಹಿಡಿದ್ದಾರೆ. ಬಿಜೆಪಿಯಲ್ಲಿ ಹಾಲಿ ಶಾಸಕರೂ ಸೇರಿದಂತೆ ಅನೇಕ ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಛಬ್ಬಿಗೆ ಟಿಕೆಟ್ ನೀಡಿದ್ದರಿಂದ ಕೆಲವರು ಅಸಮಾಧಾನಗೊಂಡಿದ್ದರು. ಎಲ್ಲವನ್ನೂ ಪಕ್ಷದ ಮುಖಂಡರು ನಿವಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ‘ಅಸಮಾಧಾನ’ದ ಕಾರಣಕ್ಕೆ ಪಕ್ಷದ ಸಾಂಪ್ರದಾಯಿಕ ಮತಗಳು ಕೈತಪ್ಪಿದರೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವೀರಣ್ಣ ಸೀಗಿಗಟ್ಟಿ ಅವರು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಹೊರಗಿನವರು. ತಾವು ಸ್ಥಳೀಯರಾಗಿರುವುದರಿಂದ ಜನರು ತಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸದಲ್ಲಿ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ಈವರೆಗೂ ಖಾತೆ ತೆರೆದಿಲ್ಲ. ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಯಾವುದೇ ನಾಯಕರು ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿಲ್ಲ. ಹೀಗಾಗಿ ವೀರಣ್ಣ ಅವರು ಎರಡೂ ಪಕ್ಷಗಳಿಗೆ ಯಾವ ರೀತಿ ಸ್ಪರ್ಧೆಯೊಡ್ಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ತಣ್ಣಗಾದ ಹೊರ–ಒಳಗಿನ ಕಾವು: ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಮಹೇಶ ಟೆಂಗಿನಕಾಯಿ ಅವರಿಗೆ ‘ಬಿ’ ಫಾರಂ ನೀಡಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಕಾರ್ಯಕರ್ತರು ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದು, ಸಿ.ಎಂ.ನಿಂಬಣ್ಣವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಲಾಡ್‌ ಅವರ ಹ್ಯಾಟ್ರಿಕ್‌ ಗೆಲುವಿಗೆ ಅಡ್ಡಿಯಾಗಿತ್ತು.

ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರಗಿನವರಿಗೆ ಟಿಕೆಟ್ ನೀಡಿವೆ. ಈ ಮಾತನ್ನು ಅಲ್ಲಗಳೆಯುವ ಅಭ್ಯರ್ಥಿಗಳು, ‘ಈ ಸಲದ ಚುನಾವಣೆಯಲ್ಲಿ ಸ್ಥಳೀಯರು– ಹೊರಗಿನವರು ಎನ್ನುವ ವಿಷಯ ಇಲ್ಲ. ತಾವು ಸ್ಥಳೀಯರೊಂದಿಗೆ ಬೆರೆತಿದ್ದೇವೆ. ಇಲ್ಲಿಯೇ ವಾಸ ಮಾಡಿದ್ದೇವೆ. ಹೀಗಾಗಿ ಜನ ನಮ್ಮನ್ನು ಸ್ಥಳೀಯರಂತೆ ಸ್ವೀಕರಿಸಿದ್ದಾರೆ’ ಎನ್ನುತ್ತಾರೆ.

ಈ ಎಲ್ಲದರ ನಡುವೆ ‘ಸ್ನೇಹಿತರ ಸವಾಲ್‌’ನಲ್ಲಿ ಕ್ಷೇತ್ರದ ಮತದಾರರು ಯಾರಿಗೆ ಒಲಿಯುತ್ತಾರೆಯೋ ಎನ್ನುವುದು ಕುತೂಹಲ ಮೂಡಿಸಿದೆ.

ಕಲಘಟಗಿ ವಿಧಾನಸಭಾ ಕ್ಷೇತ್ರ

ಮತದಾರರ ಸಂಖ್ಯೆ -

ಪುರುಷರು - 99170

ಮಹಿಳೆಯರು - 93444

ಇತರೆ - 7

ಒಟ್ಟು- 192621

ಕಣದಲ್ಲಿರುವ ಅಭ್ಯರ್ಥಿಗಳು

ನಾಗರಾಜ ಛಬ್ಬಿ- ಬಿಜೆಪಿ

ಸಂತೋಷ್‌ ಲಾಡ್ - ಕಾಂಗ್ರೆಸ್‌

ವೀರಣ್ಣ ಸೀಗಿಗಟ್ಟಿ - ಜೆಡಿಎಸ್‌

ಮಂಜುನಾಥ ಜಕ್ಕಣ್ಣವರ - ಆಮ್ ಆದ್ಮಿ ಪಕ್ಷ

ಚಂದ್ರಶೇಖರ ಮಠದ - ಕರ್ನಾಟಕ ರಾಷ್ಟ್ರ ಸಮಿತಿ

ಬಸವಲಿಂಗಪ್ಪ ಈರಪ್ಪ ಬುಗಡಿ - ಉತ್ತಮ ಪ್ರಜಾಕೀಯ

ಮಲ್ಲಿಕಾ ಬಸವರಾಜ ದೊಡಮನಿ - ಪ್ರೌಟಿಸ್ಟ್ ಬ್ಲಾಕ್ ಇಂಡಿಯಾ

ಮಹಬೂಬಅಲಿ ಬುಡನಖಾನ - ಇಂಡಿಯನ್ ಮೂವ್‌ಮೆಂಟ್ ಪಾರ್ಟಿ

ಬಸವರಾಜ ಗೊಡ್ಡೆಮ್ಮಿ - ಪಕ್ಷೇತರ

ಬಸವರಾಜ ದೊಡಮನಿ - ಪಕ್ಷೇತರ

ಬಸವರಾಜ ಸಂಗಣ್ಣವರ - ಪಕ್ಷೇತರ

ಶಂಕರ ನಿಂಗಪ್ಪ ಹುದ್ದಾರ - ಪಕ್ಷೇತರ

2018ರ ಚುನಾವಣೆ ಬಲಾಬಲ

ಗೆಲುವು- ಸಿ.ಎಂ.ನಿಂಬಣ್ಣವರ (ಬಿಜೆಪಿ- ಪಡೆದ ಮತ:83267)

ಸಮೀಪದ ಪ್ರತಿಸ್ಪರ್ಧಿ - ಸಂತೋಷ್ ಲಾಡ್‌ ( ಕಾಂಗ್ರೆಸ್ - ಪಡೆದ ಮತ 57270)

ಗೆಲುವಿನ ಅಂತರ - 25997

2013ರ ಚುನಾವಣೆ ಬಲಾಬಲ

ಗೆಲುವು - ಸಂತೋಷ್‌ ಲಾಡ್‌ ( ಕಾಂಗ್ರೆಸ್‌ - ಪಡೆದ ಮತ: 76802)

ಸಮೀಪದ ಪ್ರತಿಸ್ಪರ್ಧಿ - ಸಿ.ಎಂ.ನಿಂಬಣ್ಣವರ ( ಕೆಜೆಪಿ ಪಡೆದ ಮತ- 31144)

ಗೆಲುವಿನ ಅಂತರ - 45658

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT