ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಮ್ಸ್‌ಗೆ ಮತ್ತೆ ಹಳೆ ಹೆಸರು; ‘ಕೆಎಂಸಿ–ಆರ್‌ಐ’ ನಾಮಕರಣ

ಸೆ. 6ರ ಒಳಗೆ ಮರುನಾಮಕರಣ ಕಾರ್ಯಕ್ರಮ: ನಿರ್ದೇಶಕ ಎಸ್‌.ಎಫ್‌.ಕಮ್ಮಾರ್‌
Published 23 ಜೂನ್ 2024, 15:20 IST
Last Updated 23 ಜೂನ್ 2024, 15:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದ ಬಡವರ ಸಂಜೀವಿನಿಯಾದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಇನ್ಮುಂದೆ ‘ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ’ ಯಾಗಿ ಹೆಸರು ಬದಲಿಸಿಕೊಳ್ಳಲಿದೆ. ಹೀಗೆ ಹೆಸರು ಬದಲಾಗುತ್ತಿರುವುದು ಇದು ಮೂರನೇ ಬಾರಿ.

ಆಸ್ಪತ್ರೆ ಆರಂಭವಾದ 1957ರಲ್ಲಿ ಕರ್ನಾಟಕ ವೈದ್ಯಕೀಯ ಕಾಲೇಜ್‌ (ಕೆಎಂಸಿ) ಎಂದು ಹೆಸರು ಇಡಲಾಗಿತ್ತು. ಅದಾದ 44 ವರ್ಷಗಳ ನಂತರ, ಅಂದರೆ 1996ರಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಎಂದು ಮರುನಾಮಕರಣ ಮಾಡಲಾಗಿತ್ತು. 28 ವರ್ಷಗಳ ನಂತರ, ಇದೀಗ ಮತ್ತೊಮ್ಮೆ ಹೆಸರು ಬದಲಾಯಿಸಲು ನಿರ್ಧರಿಸಲಾಗಿದೆ. ಇದಕ್ಕೆ ಈಗಾಗಲೇ ಸರ್ಕಾರದಿಂದ ಒಪ್ಪಿಗೆಯೂ ದೊರೆತಿದ್ದು, ಎರಡು ತಿಂಗಳ ಒಳಗೆ ಆರಂಭದಲ್ಲಿದ್ದ ಹಳೆ ಹೆಸರಿನ ಜೊತೆಗೆ ‘ಸಂಶೋಧನಾ ಸಂಸ್ಥೆ’ ಎನ್ನುವ ಹೊಸ ಪದ ಸೇರ್ಪಡೆಯಾಗಲಿದೆ.

ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಕಲಬುರ್ಗಿ ಮತ್ತು ಹುಬ್ಬಳ್ಳಿಯಲ್ಲಿರುವ ಮೆಡಿಕಲ್‌ ಕಾಲೇಜುಗಳು ಅತ್ಯಂತ ಹಳೆಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು. ಈಗಾಗಲೇ ಬೆಂಗಳೂರು ಮತ್ತು ಮೈಸೂರಿನ ವೈದ್ಯಕೀಯ ಕಾಲೇಜುಗಳು ಸಂಶೋಧನಾ ಸಂಸ್ಥೆಯಾಗಿ ಹೆಸರು ಬದಲಿಸಿಕೊಂಡಿವೆ. ಸಂಶೋಧನಾ ಸಂಸ್ಥೆಯಾಗಿ ಹೆಸರು ಬದಲಿಸಿಕೊಳ್ಳುತ್ತಿರುವ ಮೂರನೇ ಕಾಲೇಜು ಹುಬ್ಬಳ್ಳಿಯ ಕಿಮ್ಸ್‌ ಆಗಿದೆ. ಕಲಬುರ್ಗಿ ಮೆಡಿಕಲ್‌ ಕಾಲೇಜು ಸಹ ಸಂಶೋಧನಾ ಕೇಂದ್ರವೆಂದು ಹೆಸರು ಬದಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ.

ಈ ಕುರಿತು ಮಾಹಿತಿ ನೀಡಿದ ಕಿಮ್ಸ್‌ ನಿರ್ದೇಶಕ ಡಾ.ಎಸ್‌.ಎಫ್‌.ಕಮ್ಮಾರ್‌, ‘ಕಿಮ್ಸ್‌ ಎಂದಾಗ ಕಾರವಾರ ಮತ್ತು ಕೊಪ್ಪಳದ ಮೆಡಿಕಲ್‌ ಕಾಲೇಜು ಎಂದು ಜನರಲ್ಲಿ ಗೊಂದಲವಾಗುತ್ತಿತ್ತು. ಹಳೇ ವಿದ್ಯಾರ್ಥಿಗಳು ಕೆಂಎಸಿನೇ ಇರಬೇಕು, ಆ ಹೆಸರಲ್ಲಿ ಭಾವನಾತ್ಮ ಸಂಬಂಧ ಇದೆ ಎನ್ನುತ್ತಿದ್ದರು. ರೋಗಿಗಳು ಈಗಲೂ ಕೆಎಂಸಿ ಎಂದೇ ಹೇಳುತ್ತಾರೆ. ಈ ಕುರಿತು ಸರ್ಕಾರಕ್ಕೆ ಕೆಎಂಸಿ–ಆರ್‌ಐ(ಕರ್ನಾಟಕ ಮೆಡಿಕಲ್‌ ಕಾಲೇಜು–ಸಂಶೋಧನಾ ಸಂಸ್ಥೆ) ಎಂದು ಹೆಸರಿಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಹುಬ್ಬಳ್ಳಿ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ ಎಂದು ಹೆಸರಿಟ್ಟುಕೊಳ್ಳಲು ಸೂಚಿಸಿತ್ತು. ಕಿಮ್ಸ್‌ ಇದ್ದಿದ್ದು, ಕೆಎಂಸಿ ಆಗಲಿಲ್ಲ ಎಂದಾಗ, ಹುಬ್ಬಳ್ಳಿ ಇನ್‌ಸ್ಟಿಟ್ಯೂಟ್‌ ಎಂದು ಹೆಸರು ಇಟ್ಟರೆ ಮತ್ತೆ ಹೊಸತಾಗುತ್ತದೆ ಎಂದು, ನಾವು ಕೆಎಂಸಿ ಎಂದೇ ನಾಮಕರಣ ಮಾಡಲು ಅವಕಾಶ ನೀಡಬೇಕು ಎಂದಾಗ, ಸರ್ಕಾರ ಹಸಿರು ನಿಶಾನೆ ನೀಡಿತು’ ಎಂದರು.

‘ಬೆಂಗಳೂರಿನ ಬಿಎಂಸಿ–ಆರ್‌ಐ(ಬೆಂಗಳೂರು ಮೆಡಿಕಲ್‌ ಕಾಲೇಜ್‌ ಮತ್ತು ಸಂಶೋಧನಾ ಸಂಸ್ಥೆ) ಮಾದರಿಯಲ್ಲಿ ಕೆಎಂಸಿ–ಆರ್‌ಐ (ಕರ್ನಾಟಕ ಮೆಡಿಕಲ್‌ ಕಾಲೇಜ್‌ ಮತ್ತು ಸಂಶೋಧನಾ ಸಂಸ್ಥೆ) ಎಂದು ನಾಮಕರಣ ಮಾಡಲು ಸರ್ಕಾರ ಎರಡು ತಿಂಗಳ ಹಿಂದೆಯೇ ಪತ್ರ ಬರೆದು ತಿಳಿಸಿದೆ. ಚುನಾವಣಾ ನೀತಿ ಸಂಹಿತೆಯಿಂದ ಮರು ನಾಮಕರಣ ಪ್ರಕ್ರಿಯೆ ವಿಳಂಬವಾಗಿದೆ. ಸದ್ಯದಲ್ಲಿಯೇ ನಡೆಯಲಿರುವ ವೈದ್ಯಕೀಯ ಕಾಲೇಜುಗಳ ಸಲಹಾ ಮಂಡಳಿಯಲ್ಲಿ ವಿಷಯ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸೆಪ್ಟೆಂಬರ್‌ 6ರಂದು ಕೆಎಂಸಿ ಸಂಸ್ಥಾಪಕರ ದಿನವಿದ್ದು, ಅದಕ್ಕೂ ಪೂರ್ವವೇ ಮರುನಾಮಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಸಂಶೋಧನಾ ಕೇಂದ್ರವಾದರೆ ತೆರಿಗೆ ವಿನಾಯ್ತಿ’ ‘ವೈದ್ಯಕೀಯ ಕಾಲೇಜನ್ನು ಸಂಶೋಧನಾ ಕೇಂದ್ರ ಮಾಡುವುದರಿಂದ ತೆರಿಗೆ ವಿನಾಯ್ತಿ ದೊರೆಯುತ್ತದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕೆಲವು ವೈದ್ಯಕೀಯ ಸಲಕರಣೆಗಳಿಗೆ ಸುಂಕ ರಿಯಾಯ್ತಿ ಸಿಗುತ್ತದೆ’ ಎಂದು ನಿರ್ದೇಶಕ ಡಾ.‌ಎಸ್‌.ಎಫ್‌.ಕಮ್ಮಾರ್‌ ಹೇಳಿದರು. ‘ಬೆಂಗಳೂರಿನ ಬಿಎಂಸಿ–ಆರ್‌ಐ (ಬೆಂಗಳೂರು ಮೆಡಿಕಲ್‌ ಕಾಲೇಜ್‌ ಮತ್ತು ಸಂಶೋಧನಾ ಸಂಸ್ಥೆ) ಮಾದರಿಯಲ್ಲಿ ಕೆಎಂಸಿ–ಆರ್‌ಐ (ಕರ್ನಾಟಕ ಮೆಡಿಕಲ್‌ ಕಾಲೇಜ್‌ ಮತ್ತು ಸಂಶೋಧನಾ ಸಂಸ್ಥೆ) ಎಂದು ನಾಮಕರಣ ಮಾಡಲು ಸರ್ಕಾರ ಎರಡು ತಿಂಗಳ ಹಿಂದೆಯೇ ಪತ್ರ ಬರೆದು ತಿಳಿಸಿದೆ. ಎಲ್ಲ ದಾಖಲೆಗಳು ಕಿಮ್ಸ್‌ ಎಂದಿದ್ದು ಅವೆಲ್ಲವೂ ಈಗ ಕೆಎಂಸಿ–ಆರ್‌ಐ ಎಂದಾಗಬೇಕು. ಇಲ್ಲಿ ಕಲಿತಿರುವ ಅನೇಕರು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರೆಲ್ಲ ಒಮ್ಮೆಲೆ ಗೊಂದಲಕ್ಕೆ ಒಳಗಾಗಬಹದು. ಇದು ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT