ಸೋಮವಾರ, ಸೆಪ್ಟೆಂಬರ್ 27, 2021
28 °C
ಕುಂದಗೋಳ ವಿಧಾನಸಭೆ ಉಪ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್‌ ಚಾಲನೆ

ಮೋದಿ ದುರಾತ್ಮ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಐದು ವರ್ಷದ ಆಡಳಿತಾವಧಿಯಲ್ಲಿ ರೈತರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಜನರ ಪರ ಕೆಲಸ ಮಾಡದ ಪ್ರಧಾನಿ ನರೇಂದ್ರ ಮೋದಿ ಒಬ್ಬ ದುರಾತ್ಮ’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದರು.

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಿಧಾನಸಭಾ ಉಪ ಚುನಾವಣಾ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿಗೆ 56 ಇಂಚಿನ ಎದೆ ಎಂದು ಬೀಗುತ್ತಾರೆ. ಅಷ್ಟು ದೊಡ್ಡ ಎದೆ ಇದ್ದರೂ ಪ್ರಯೋಜನವಿಲ್ಲ. ಅದರ ಒಳಗೆ ಬಡವರ ಪರ ಮಿಡಿಯುವ ಹೃದಯ ಇಲ್ಲ. ಅವರದು ಕೇವಲ ಬೂಟಾಟಿಕೆಯ ಹೃದಯ. ಬಿಜೆಪಿಯವರು ಡೋಂಗಿಗಳು. ಅವರಿಗೆ ಹೃದಯವೇ ಇಲ್ಲ. ಮಾನಗೆಟ್ಟವರು, ಲಜ್ಜೆ ಗೆಟ್ಟವರು ಬಿಜೆಪಿಯವರು ಎಂದು ಹರಿಹಾಯ್ದರು.

ಉಪ ಚುನಾವಣೆಯಲ್ಲಿ ಬಿಜೆಪಿಯವರು ಚಿಕ್ಕನಗೌಡ್ರಗೆ ವೋಟ್‌ ಕೊಡಿ ಎಂದು ಕೇಳುತ್ತಿಲ್ಲ. ಮೋದಿಗೆ ವೋಟ್‌ ಕೊಡಿ ಎಂದು ಕೇಳುತ್ತಾರೆ. ಹಾಗಾದರೆ ಯಾಕೆ ಅವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂದು ಪ್ರಶ್ನಿಸಿದರು.

‘ಮೋದಿ ಮುಖ ನೋಡಿ ಸಾಕಾಗಿದೆ. ಐದು ವರ್ಷಗಳ ಕಾಲ ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಪಟ್ಟಿ ಕೊಡಲಿ ಎಂದು ಸವಾಲು ಹಾಕಿದ ಅವರು, ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿರಲಿಲ್ಲ’ ಎಂದರು.

ವಿದೇಶದಲ್ಲಿರುವ ಕ‍ಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇನೆ, ಯುವಜನರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆ, ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದರು ಮೋದಿ. ಆದರೆ, ಯಾವುದನ್ನೂ ಮಾಡಲಿಲ್ಲ. ಮಲ್ಯ, ಅಂಬಾನಿ ಅವರ ₹ 3.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು ಎಂದು ಆರೋಪಿಸಿದರು.

ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಬಿಜೆಪಿ ಸ್ನೇಹಿತರಾದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ ಶೆಟ್ಟರ್‌, ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ ಅವರು ಸಿ.ಎಸ್‌.ಶಿವಳ್ಳಿ ನಿಧನರಾದ ದಿನ ಅವರ ವ್ಯಕ್ತಿತ್ವ, ಕಾರ್ಯವೈಕರಿ, ಆಚಾರ–ವಿಚಾರವನ್ನು ಹಾಡಿ ಹೊಗಳಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಈ ಚುನಾವಣೆಯಲ್ಲಿ ಮಾತನಾಡಲು ಅವರಿಗೆ ಏನೂ ಉಳಿದಿಲ್ಲ. ಹೀಗಾಗಿ ಅಂದು ಆಡಿದ ಮಾತನ್ನು ಬಿಜೆಪಿ ಮುಖಂಡರು ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಶಿವಳ್ಳಿ ಅಧಿಕಾರದಲ್ಲಿದ್ದಾಗ ಹಣ ಮಾಡಿದ್ದ, ಭ್ರಷ್ಟಾಚಾರ ಮಾಡಿದ್ದ ಎಂದು ಯಾರು ಅವರತ್ತ ಬೊಟ್ಟು ಮಾಡಲು ಸಾಧ್ಯವಿಲ್ಲ. ಬಡವರ ಪರ ಅವರು ಅಪಾರ ಕಾಳಜಿ ಹೊಂದಿದ್ದರು’ ಎಂದು ಶ್ಲಾಘಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, 50 ಸಾವಿರ ಮತಗಳ ಅಂತರದಿಂದ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

‘ಬಿಜೆಪಿ ಮುಖಂಡರು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಆರಂಭದಿಂದಲೂ ಅಸ್ಥಿರಗೊಳಿಸಲು ಹವಣಿಸುತ್ತಿದ್ದಾರೆ. ಈ ಹಿಂದೆ ಸಿ.ಎಸ್‌. ಶಿವಳ್ಳಿ ಅವರಿಗೂ ಹಣದ ಆಮಿಷ ಒಡ್ಡಿದ್ದರು. ಆದರೆ, ಶಿವಳ್ಳಿ ಮಾರಾಟದ ವಸ್ತುವಾಗಲಿಲ್ಲ’ ಎಂದು ಶ್ಲಾಘಿಸಿದರು.

ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ ಮಾತನಾಡಿ, ‘ಅನುಕಂಪ ಇದೆ ಎಂದು ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಲು ಕುತಂತ್ರ ಮಾಡುತ್ತದೆ’ ಎಂದು ಹೇಳಿದರು.

ಸಚಿವ ಸತೀಶ ಜಾರಕಿಹೊಳ್ಳಿ ಮಾತನಾಡಿ, ‘ಶಿವಳ್ಳಿ ಅವರಂತಹ ಸಾಮಾನ್ಯ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆ. ಬಿಜೆಪಿ ಮಾತಿಗೆ ಯಾರೂ ಮೋಸ ಹೋಗಬೇಡಿ’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಕುಸುಮಾವತಿ ಶಿವಳ್ಳಿ ಕಾಂಗ್ರೆಸ್‌ ಅಭ್ಯರ್ಥಿಯಲ್ಲ; ಜೆಡಿಎಸ್‌ ಅಭ್ಯರ್ಥಿ ಎಂದು ತಿಳಿದು ಈ ಚುನಾವಣೆಯಲ್ಲಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಒಂದು ಪ್ರಚಾರಕ್ಕೆ ಬರಲಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.