ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಣಸಿನಕಾಯಿಗೆ ರೋಗ: ಕುಂದಗೋಳ ರೈತರು ಚಿಂತಾಕ್ರಾಂತ

ಬಸವರಾಜ ಗುಡ್ಡದಕೇರಿ
Published 29 ಆಗಸ್ಟ್ 2024, 6:13 IST
Last Updated 29 ಆಗಸ್ಟ್ 2024, 6:13 IST
ಅಕ್ಷರ ಗಾತ್ರ

ಕುಂದಗೋಳ: ಮುಂಗಾರಿನ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬೆಳೆ ಸತತ ಮಳೆಯಿಂದ ಕೊಳೆ ರೋಗ ಹಾಗೂ ಡೊಣ್ಣೆ ಹುಳು ಬಾಧೆಗೆ ತುತ್ತಾಗುತ್ತಿದ್ದು ರೈತರು ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ತಾಲ್ಲೂಕಿನ ಮೆಣಸಿನಕಾಯಿ ರಾಜ್ಯದಲ್ಲಿಯೆ ಪ್ರಸಿದ್ಧಿ ಹೊಂದಿದ್ದು, ಬ್ಯಾಡಗಿ ಡಬ್ಬಿ, ಕಡ್ಡಿ, ಗುಂಟೂರು, ಜ್ವಾಲಾ, ಕಾಶ್ಮೀರಿ, ಇಂಡೋ, ವಾರಂಗಲ್, ಚಪ್ಪಟಾ ಹೀಗೆ ನಾನಾ ರೀತಿಯ ಮೆಣಸಿನಕಾಯಿ ತಳಿಗಳನ್ನು ಇಲ್ಲಿನ ರೈತರು ಬೆಳೆಯುತ್ತಿದ್ದಾರೆ. ಕಳೆದ ವರ್ಷ 8,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು, ಈ ವರ್ಷ ಅಂದಾಜು 6,000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ ಅತಿಯಾದ ಮಳೆಯಿಂದ ನೀರಿನ ತೇವಾಂಶ ಹೆಚ್ಚಾಗಿ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇನ್ನೊಂದಡೆ ಡೊಣ್ಣು ರೋಗಗಳ ಕಾಟ ಹೆಚ್ಚಾಗಿದೆ. ಕೀಟ ಬಾಧೆ ಜೊತೆ ಬೆಳೆಗಳಿಗೆ ಮುರುಟು ರೋಗದ ಕಾಟವೂ ಹೆಚ್ಚಾಗಿದೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.

‘ಈ ವರ್ಷ ಡೊಣ್ಣೆ ಹುಳುಗಳ ಬಾಧೆ ಹೆಚ್ಚಾಗಿದ್ದು, ಇದಕ್ಕೆ ಗಿಡಗಳ ಬೇರುಗಳಿಗೆ ಸ್ಟ್ರೀಚಿಂಗ್ ಮೂಲಕ ಉಪಚಾರ ಮಾಡಬೇಕಾಗಿದೆ. ಇದು ರೈತರಿಗೆ ಕಷ್ಟದ ಕೆಲಸ. ಇನ್ನೂ ಹಳದಿ ರೋಗ ಕೂಡ ಹೆಚ್ಚಾಗಿದೆ’ ಎಂದು  ರೈತ ನಾಗರಾಜ ದೇಶಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಬಿಹಾಳ, ಯರೆಬೂದಿಹಾಳ, ಯಲಿವಾಳ ಭಾಗಗಳಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು, ಸಲಹೆ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಾಲ್ಲೂಕು ಅಧಿಕಾರಿ ಮಂಜುನಾಥ ಕರೋಶಿ ಹೇಳಿದರು.

ಔಷಧೋಪಚಾರ ಸಲಹೆ: ಹೊಲಗಳಲ್ಲಿ ನೀರು ನಿಲ್ಲದಂತೆ ನೊಡಿಕೊಳ್ಳಬೇಕು. ಡೊಣ್ಣು ಹುಳ ನಿಯಂತ್ರಣಕ್ಕೆ ಪ್ಲೋರೇಟ್ಅನ್ನು ಗಿಡಗಳ ಸುತ್ತಲು ಬೇರಿಗೆ ಹಾಕಿ ಮಣ್ಣು ಮುಚ್ಚುವ ಮೂಲಕ ಉಪಚಾರ ಮಾಡಬಹುದು. ಎಲೆಗಳು ಹಳದಿ ಬಣ್ಣ ನಿಯಂತ್ರಣಕ್ಕೆ 19.19.19 ಹಾಗೂ 13.26 ಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಎಲೆಗಳಿಗೆ ಸಿಂಪಡಣೆ ಮಾಡುವುದು. ಮುರುಟು ರೋಗಕ್ಕೆ ಪೇಗಾಟಸ್ ಪೌಡರನ ಒಂದು ಪ್ಯಾಕೇಟನ್ನು ಒಂದು ಪಂಪ ಕ್ಯಾನ್‌ಗೆ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆ ತಾಲ್ಲೂಕು ಅಧಿಕಾರಿ ಮಂಜುನಾಥ ಕರೋಶಿ ಸಲಹೆ ನೀಡಿದರು. 

ಕುಂದಗೋಳ ತಾಲ್ಲೂಕಿನ ಬಹುತೇಕ ಕಡೆ ಮೆಣಸಿನಕಾಯಿ ಬೆಳೆ ಡೊಣ್ಣು ಹುಳದಿಂದ ಬೆಳೆ ಹಾಳಾಗುತ್ತಿರುವುದು 
ಕುಂದಗೋಳ ತಾಲ್ಲೂಕಿನ ಬಹುತೇಕ ಕಡೆ ಮೆಣಸಿನಕಾಯಿ ಬೆಳೆ ಡೊಣ್ಣು ಹುಳದಿಂದ ಬೆಳೆ ಹಾಳಾಗುತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT