ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಗರವಾದ ಹೊಸೂರ ಪ್ರಾದೇಶಿಕ ಬಸ್‌ ನಿಲ್ದಾಣ: ಪ್ರಯಾಣಿಕರ ಪರದಾಟ

Published 13 ಫೆಬ್ರುವರಿ 2024, 7:41 IST
Last Updated 13 ಫೆಬ್ರುವರಿ 2024, 7:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹೊಸ ಕೋರ್ಟ್‌ ಕಡೆಯಿಂದ ಹೊಸೂರ ಬಸ್‌ ನಿಲ್ದಾಣದೊಳಗೆ ಬಂದು ಗ್ರಾಮೀಣ ಬಸ್‌ಗಳ ಕಡೆ ಹೋಗಲು ವೃದ್ಧರಿಗೆ ಮತ್ತು ಅಂಗವಿಕಲರಿಗೆ ತುಂಬಾ ಕಷ್ಟವಾಗುತ್ತಿದೆ. ಮೇಲಿನ ಅಂತಸ್ತಿಗೆ ಹೋಗಲು ನಿಲ್ದಾಣದಲ್ಲಿ ಲಿಫ್ಟ್‌ ಮಾಡಿದ್ದು, ಅದು ಕೆಟ್ಟು ನಿಂತು ವರ್ಷವಾಗಿದೆ. ಈವರೆಗೆ ದುರಸ್ತಿಯಾಗಿಲ್ಲ. ನಮ್ಮ ಸಂಕಷ್ಟ ಯಾರೂ ಕೇಳುತ್ತಿಲ್ಲ’.

ಇಲ್ಲಿನ ಹೊಸೂರ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಅದರಲ್ಲೂ ವೃದ್ಧರು, ಅಂಗವಿಕಲರು, ಅನಾರೋಗ್ಯಪೀಡಿತರು, ಮಹಿಳೆಯರು ತೋಡಿಕೊಳ್ಳುವ ಸಂಕಷ್ಟವಿದು. ‘ಹೆಸರಿಗೆ ಮಾತ್ರ ಲಿಫ್ಟ್ ಇದೆಯೇ ಹೊರತು ಅದರಿಂದ ನಮಗೆ ಯಾವ ರೀತಿಯಲ್ಲೂ ಪ್ರಯೋಜನವಾಗಿಲ್ಲ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಹೊಸೂರ ಬಸ್‌ ನಿಲ್ದಾಣದ ಆವರಣದಲ್ಲಿ ನಡೆದಾಲು ಪ್ರಯಾಸ ಪಡಬೇಕು. ಮಂಡಿನೋವು ಉಳ್ಳವರಿಗೆ, ಉರುಗೋಲು ಹಿಡಿದು ನಡೆಯುವವರಿಗೆ ಮೆಟ್ಟಿಲು ಹತ್ತಿಳಿಯಲು ಆಗುವುದೇ? ಅಂಗವಿಕಲರು ಹೇಗೆ ತಾನೇ ನಡೆದುಕೊಂಡು ಹೋಗಲು ಆಗುತ್ತದೆ? ಲಿಫ್ಟ್ ಯಾವಾಗ ದುರಸ್ತಿ ಯಾಗುತ್ತದೆ ಎಂಬುದನ್ನು ಕೇಳಿದರೆ, ಯಾರೂ ಸಹ ಸರಿಯಾಗಿ ಉತ್ತರಿಸುವುದಿಲ್ಲ’ ಎಂದು ಹಿರಿಯ ನಾಗರಿಕರಾದ ಈಶ್ವರ ನಾಯ್ಕರ್‌ ಅಸಹಾಯಕತೆ ವ್ಯಕ್ತಪಡಿಸಿದರು.

‘2021ರ ಫೆಬ್ರುವರಿ 15 ರಂದು ಸಾರ್ವಜನಿಕರ ಹೊಸೂರ ಬಸ್‌ ನಿಲ್ದಾಣ ಉದ್ಘಾಟನೆಗೊಂಡಿತು. ಆದರೆ, ಮೂರೇ ವರ್ಷಗಳಲ್ಲಿ, ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಿಲ್ದಾಣದ ಹಿಂಭಾಗದಲ್ಲಿ 20 ಅಡಿಗಳಷ್ಟು ಇಳಿಜಾರಿನಲ್ಲಿದೆ. ಮೇಲ್ಭಾಗದಲ್ಲಿ ಗ್ರಾಮೀಣ ಭಾಗದ ಬಸ್‌ಗಳ ನಿಲುಗಡೆ ಪ್ಲಾಟ್‌ಫಾರಂ ಮತ್ತು ಕೆಳಭಾಗದಲ್ಲಿ ಹೊರಜಿಲ್ಲೆಗೆ ಸಂಚರಿಸುವ ಬಸ್‌ಗಳ ಪ್ಲಾಟ್‌ ಫಾರಂಗಳಿವೆ. ಹೀಗಾಗಿ ಒಂದು ಕಡೆ ಯಿಂದ ಇನ್ನೊಂದು ಕಡೆಗೆ ಪ್ರಯಾಣಿಕರು ಸಂಚರಿಸಲು ಮೆಟ್ಟಿಲುಗಳನ್ನು ಬಳಸಬೇಕು. ಇದು ಅನಿವಾರ್ಯ’ ಎಂದು ನಗರದ ನಿವಾಸಿ ಕಮಲಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸೂರ ಬಸ್‌ ನಿಲ್ದಾಣದ ಒಳಗಿನಿಂದ ನೇರವಾಗಿ ಚಿಗರಿ ಬಸ್‌ನಿಲ್ದಾಣಕ್ಕೆ ತಲುಪಲು ಸಂಪರ್ಕ ಸೇತುವೆ ನಿರ್ಮಿಸಲಾಗಿದೆ. ಮೆಟ್ಟಿಲು ಏರಲು ಆಗದವರಿಗೆ ಲಿಫ್ಟ್‌ ಮಾಡಲಾಗಿದೆ. ಆದರೆ, ಅದರ ಸಮರ್ಪಕ ನಿರ್ವಹಣೆ ಆಗದ ಕಾರಣ ಅದು ಪಾಳು ಬಿದ್ದಿದೆ. ಅದು ಈಗ ತ್ಯಾಜ್ಯ ರಾಶಿಯ ತಾಣವಾಗುತ್ತಿದೆ. ಪಕ್ಕದಲ್ಲಿರುವ ಮೆಟ್ಟಿಲುಗಳ ಆಸುಪಾಸು ಜನರು ಉಗುಳುತ್ತಿದ್ದು, ಇಡೀ ಕಟ್ಟಡ ಕೊಳಕಾಗಿದೆ. ನಿಲ್ದಾಣದೊಳಗೆ ಸ್ವಚ್ಛತೆ ಎಂಬುದಿಲ್ಲ. ನಿಯಮಿತವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಕಸ ಬೀಸಾಡುವವರ ಮೇಲೆ ನಿಗಾ ವಹಿಸುವ ವ್ಯವಸ್ಥೆ ಇಲ್ಲ’ ಎಂದು ಅವರು ದೂರಿದರು.

‘ಲಿಫ್ಟ್ ನಿರ್ವಹಣೆಗೆ ನಿಯೋಜನೆಯಾದ ಸಿಬ್ಬಂದಿ ಕೊರತೆ ಇದೆ. ಮೂರು ವರ್ಷಗಳಲ್ಲಿಯೇ ನಿಲ್ದಾಣದೊಳಗಿನ ನಿರ್ಮಾಣಗಳಲ್ಲಿ ಅಲ್ಲಲ್ಲಿ ಬಿರುಕು ಕಾಣಿಸುತ್ತಿದೆ. ನಿಲ್ದಾಣದ ಪ್ರವೇಶ ಮಾರ್ಗಗಳಲ್ಲಿ ಚರಂಡಿಗಳಿಗೆ ಅಡ್ಡಲಾಗಿ ಹಾಕಿದ್ದ ಕಬ್ಬಿಣದ ಸರಳುಗಳು ಬಸ್‌ ಚಕ್ರಗಳ ಭಾರ ತಾಳಲಾರದೆ ಕಿತ್ತುಹೋಗಿವೆ. ಇದರಿಂದ ಚರಂಡಿಯ ಕೊಳಚೆ ನೀರು ರಸ್ತೆ ಹರಿಯುತ್ತಿದೆ. ನಮಗೆ ಬಸ್‌ ನಿಲ್ದಾಣದ ಹಿಂಭಾಗದ ಮಾರ್ಗಗಳಿಂದ ಒಳ ಬರಲು ತೊಂದರೆ ಆಗಿದೆ’ ಎಂದು ಪ್ರಯಾಣಿಕರು ತಿಳಿಸಿದರು.

ಲಿಫ್ಟ್‌ ಸುಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದರು. ಅದು ಕೆಲಸ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತಿಲ್ಲ. ಈ ಕೂಡಲೇ ವಿಚಾರಿಸಿ ದುರಸ್ತಿಗೆ ಕ್ರಮ ವಹಿಸುವೆ
ಭರತ್‌ ಎಸ್‌. ವ್ಯವಸ್ಥಾಪಕ ನಿರ್ದೇಶಕ, ವಾಯವ್ಯ ಸಾರಿಗೆ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT