ಬುಧವಾರ, ಜೂನ್ 16, 2021
28 °C
ಹೊರ ರಾಜ್ಯಗಳ ಸಂಚಾರದಲ್ಲಿ ಕಾಣದ ಹೆಚ್ಚು ವ್ಯತ್ಯಾಸ

ಪ್ರಯಾಣಿಕರ ಕೊರತೆ; ರೈಲು ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕರ್ನಾಟಕದಲ್ಲಿ ಲಾಕ್‌ಡೌನ್‌ ಹೇರಿರುವ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕೆಲ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಮೇ 3ರಿಂದ ಮುಂದಿನ ಆದೇಶದ ತನಕ ಮೈಸೂರು–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ ವಿಶೇಷ ರೈಲು ಎರಡೂ ಮಾರ್ಗದಿಂದ, ಮೇ 5ರಿಂದ ಹುಬ್ಬಳ್ಳಿ–ಎಂಜಿಆರ್‌ ಚೆನ್ನೈ ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಸಂಚಾರವನ್ನು ಹುಬ್ಬಳ್ಳಿಯಿಂದ, 6ರಿಂದ ಚೆನ್ನೈನಿಂದ ರದ್ದು ಪಡಿಸಲಾಗಿದೆ.

ಏ. 30ರಿಂದ ಮೈಸೂರು–ಬಾಗಲಕೋಟೆ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಮೈಸೂರಿನಿಂದ ರದ್ದಾಗಿದ್ದು, ಮೇ 1ರಿಂದ ಬಾಗಲಕೋಟೆಯಿಂದಲೂ ಈ ರೈಲು ಸಂಚರಿಸುವುದಿಲ್ಲ. ಯಶವಂತಪುರ–ಹೊಸಪೇಟೆ ನಡುವಿನ ನಿತ್ಯದ ರೈಲು ಮತ್ತು ಬೆಂಗಳೂರು–ಹುಬ್ಬಳ್ಳಿ ನಡುವೆ ನಿತ್ಯ ಸಂಚರಿಸುತ್ತಿದ್ದ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನೂ ಮೇ 1ರಿಂದ ರದ್ದುಪಡಿಸಲಾಗಿದೆ.

ಮುಂಗಡ ಕಾಯ್ದಿರಿಸಲಷ್ಟೇ ಅವಕಾಶ: ರೈಲಿನಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಮುಂಗಡ ಟಿಕೆಟ್‌ ಪಡೆದರಷ್ಟೇ ಪ್ರಯಾಣಿಸಲು ನೈರುತ್ಯ ರೈಲ್ವೆ ಅವಕಾಶ ಕಲ್ಪಿಸಿದೆ. ಆನ್‌ಲೈನ್‌ ಅಥವಾ ನಿಲ್ದಾಣಗಳ ಕೌಂಟರ್‌ನಲ್ಲಿ ಮುಂಗಡ ಟಿಕೆಟ್‌ ಪಡೆಯಬೇಕಿದೆ.

ಆಗದ ವ್ಯತ್ಯಾಸ: ರಾಜ್ಯದಲ್ಲಿ ಲಾಕ್‌ಡೌನ್‌ ಇರುವ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ಬಹಳಷ್ಟು ಇಳಿಮುಖವಾಗಿದೆ. ಆದ್ದರಿಂದ ಅಗತ್ಯವಿಲ್ಲದ ಮಾರ್ಗಗಳಲ್ಲಿ ರೈಲುಗಳನ್ನು ರದ್ದುಪಡಿಸಲಾಗಿದೆ. ಆದರೆ, ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸ ಕಂಡುಬಂದಿಲ್ಲ.

‘ವಾಸ್ಕೊ, ಗುವಾಹಟಿ, ದಾನಾಪುರ ಹೀಗೆ ಹೊರ ರಾಜ್ಯಗಳಿಗೆ ಹೋಗುವ ರೈಲುಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದಾರೆ. ಬಹಳಷ್ಟು ಜನ ಸ್ಲೀಪರ್‌ ಕ್ಲಾಸ್‌ನಲ್ಲಿ ಮುಂಗಡ ಟಿಕೆಟ್‌ ಪಡೆಯುತ್ತಿದ್ದಾರೆ. ಎಸಿ ಕೋಚ್‌ಗೆ ಬೇಡಿಕೆ ಕಡಿಮೆಯಾಗಿದೆ. ಹಿಂದೆ ಲಾಕ್‌ಡೌನ್‌ ಘೋಷಿಸಿದ್ದಾಗ ಸಂಪೂರ್ಣ ಬಂದ್ ಆಗಿತ್ತು. ಆದರೆ, ಈ ಬಾರಿ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರಿಂದ ಹೊರರಾಜ್ಯಗಳಿಗೆ ಹೋಗುವವರ ಸಂಖ್ಯೆ ಹಿಂದಿನಷ್ಟಿಲ್ಲ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಂಡಿದ್ದೇವೆ. ಮುಂದೆ ಯಾವ ಮಾರ್ಗದಲ್ಲಿಯಾದರೂ ಬೇಡಿಕೆ ಕಂಡುಬಂದರು ರೈಲು ಓಡಿಸಲು ಸಿದ್ಧರಿದ್ದೇವೆ’ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು