ಗುರುವಾರ , ಸೆಪ್ಟೆಂಬರ್ 23, 2021
28 °C

ಹುಬ್ಬಳ್ಳಿ– ಧಾರವಾಡ ಮೆಟ್ರೊ: ಕೆರೆಗಳ ಮಾಹಿತಿ ಇಲ್ಲ, ಒತ್ತುವರಿ ದಾಖಲೆಯೂ ಇಲ್ಲ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಕೆರೆ ಒತ್ತುವರಿ ಮಾಡಿದವರನ್ನು ಮೂರು ವರ್ಷ ಜೈಲಿಗೆ ಕಳುಹಿಸುವ ಕಠಿಣ ಕಾನೂನು ನಮ್ಮ ರಾಜ್ಯದಲ್ಲಿದೆ. ಐದು ವರ್ಷವಾಗಿದ್ದರೂ ಈ ಕಾನೂನು ಅನುಷ್ಠಾನದಲ್ಲಿ ಕರ್ನಾಟಕ ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಆಸಕ್ತಿ ವಹಿಸಿಲ್ಲ. ವಿಧಾನಸಭೆಯಲ್ಲಿ 2015ರ ಫೆಬ್ರುವರಿ 9ರಂದು ಈ ಕಾಯ್ದೆಗೆ ಅನುಮೋದನೆ ನೀಡಲಾಗಿತ್ತು.

ಕೆರೆಯಲ್ಲಿ ನೀರು ಇರಲಿ, ಇಲ್ಲದಿರಲಿ, ಕಂದಾಯ ಇಲಾಖೆಯಲ್ಲಿ ಹೇಳಲಾದ ಕೆರೆ, ಖರಾಬ್‌ ಕೆರೆ, ಕುಂಟೆ, ಕಟ್ಟೆ ಅಥವಾ ಇತರೆ ಹೆಸರಿನಿಂದ ಕರೆಯುವ ಜಲಮೂಲ ಮತ್ತು ರಾಜಕಾಲುವೆ, ಒಳಹರಿವು, ಒಡ್ಡು, ಅಡ್ಡಕಟ್ಟೆ, ತೂಬು, ಕಾಲುವೆಗಳು, ನೈಸರ್ಗಿಕ ವಲಯ, ಜಲಮೂಲಗಳಲ್ಲಿ ಬೆಳೆಸಿರುವ ಮರಗಳು, ಪೊದೆಗಳು, ಹುಲ್ಲುಗಾವಲು ನಾಶಪಡಿಸಿದರೆ ಅಥವಾ ಯಾವುದೇ ಕಾರ್ಯಕ್ಕೆ ಉಪಯೋಗಿಸಿಕೊಂಡರೆ ಅವೆಲ್ಲವನ್ನೂ ಒತ್ತುವರಿ ಎಂದು ಪರಿಗಣಿಸಲಾಗುತ್ತದೆ. ಕೆರೆ ಒತ್ತುವರಿ ಮಾಡಿಕೊಂಡಿದ್ದು ಸಾಬೀತಾದರೆ ಮೂರು ವರ್ಷ ಜೈಲು ವಿಧಿಸಬಹುದು. ಅದನ್ನು ಐದು ವರ್ಷಗಳಿಗೂ ವಿಸ್ತರಿಸಬಹುದು. 10 ಸಾವಿರಕ್ಕೂ ಹೆಚ್ಚು ದಂಡ ವಿಧಿಸಬಹುದು. ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದರೆ ಅದಕ್ಕೂ ದಂಡ. ಅಪರಾಧಕ್ಕೆ ಪ್ರೇರಣೆ ನೀಡಿದವನಿಗೂ ದಂಡ ವಿಧಿಸಲಾಗುತ್ತದೆ. ಒಂದು ಕಂಪನಿ ಅಥವಾ ಸಂಘ–ಸಂಸ್ಥೆ ಹೆಸರಿನಲ್ಲಿ ಅಪರಾಧ ಮಾಡಿದ್ದರೆ ಅದರಲ್ಲಿರುವ ಎಲ್ಲ ವ್ಯಕ್ತಿಯೂ ತಪ್ಪಿತಸ್ಥರು. ಇಂತಹ ಕಠಿಣ ಕಾನೂನು ಇದ್ದರೂ ಜಾರಿಯಾಗದಿರವುದು ದುರ್ದೈವ.

ಕೆರೆಗೆ ನೇರ ಅಥವಾ ಪರೋಕ್ಷವಾಗಿ ಒಳಚರಂಡಿ ನೀರು ಹರಿಸುವುದು, ಕಟ್ಟಡ ತ್ಯಾಜ್ಯ, ಘನತ್ಯಾಜ್ಯ ಸುರಿಯುವುದು ಮತ್ತು ಯಾವುದೇ ರೀತಿಯ ಮಾಲಿನ್ಯ ಮಾಡಿದರೆ ಅದು ಕಾಯ್ದೆ ಪ್ರಕಾರ ಅಪರಾಧ.

ಧಾರವಾಡ ಜಿಲ್ಲೆಯಲ್ಲಿ ಕೆರೆಗಳ ಸುಪರ್ದಿ ಹಾಗೂ ಅಭಿವೃದ್ಧಿಯ ಜವಾಬ್ದಾರಿಯನ್ನು ವಿವಿಧ ಇಲಾಖೆಗಳು ವಹಿಸಿಕೊಂಡಿವೆ. ಯಾವ ಇಲಾಖೆಯಲ್ಲೂ ಒಂದು ಸಮಗ್ರ ಮಾಹಿತಿಯೇ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಕೆರೆಗಳ ಮಾಹಿತಿ ಹರಿದುಹಂಚಿಹೋಗಿದೆ. ರಾಜ್ಯದ ಎಲ್ಲ ಕೆರೆಗಳ ಸಂರಕ್ಷಣೆಯ ಜವಾಬ್ದಾರಿ ಹೊಂದಿರುವ ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ ಐದು ವರ್ಷದಿಂದ ಇಂದಿಗೂ ಮೂಲದಾಖಲೆಯಾದ ಕೆರೆಗಳ ಮಾಹಿತಿಯನ್ನೇ ಹೊಂದಿಲ್ಲ. ಇನ್ನು ಒತ್ತುವರಿ ಮಾಹಿತಿ ಕೇಳಿದರೆ, ಎಲ್ಲ ಇಲಾಖೆಗಳಿಂದ ಇನ್ನೂ ಸಂಗ್ರಹಿಸಬೇಕಿದೆ ಎಂಬ ಮಾತೇ ಬರುತ್ತದೆ.

ಧಾರವಾಡದಲ್ಲೂ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ, ಕಂದಾಯ, ಅರಣ್ಯ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ... ಹೀಗೆ ಕೆರೆಗಳ ಮಾಹಿತಿಗೆ ಒಂದೊಂದು ಇಲಾಖೆ ಮತ್ತೊಂದು ಇಲಾಖೆಯನ್ನು ತೋರುತ್ತದೆ. ಜಿಲ್ಲಾಧಿಕಾರಿ ಕಚೇರಿಯ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 1,261 ಕೆರೆಗಳಿವೆ. ಆದರೆ ಅಭಿವೃದ್ಧಿ ವೆಚ್ಚ, ಪುನಶ್ಚೇತನಕ್ಕೆ ಮಾಹಿತಿ ಇಲ್ಲಿಲ್ಲ. ಇನ್ನು ಜಿಲ್ಲಾ ಪಂಚಾಯಿತಿ ಮಾಹಿತಿಯಲ್ಲಿ 442 ಕೆರೆಗಳನ್ನು ಮಾತ್ರ ತೋರಿಸಲಾಗಿದೆ. 2009–10ನೇ ಸಾಲಿನಿಂದ 2018–19ನೇ ಸಾಲಿನವರೆಗೆ ಕೆರೆಗಳ ಕೆಲವು ಕಾಮಗಾರಿಗಳಿಗೆ ₹3.64 ಕೋಟಿ ವೆಚ್ಚ ಮಾಡಿದೆ.

ಸಣ್ಣ ನೀರಾವರಿ ಇಲಾಖೆ 2019–20ನೇ ಸಾಲಿನಲ್ಲಿ 88 ಕೆರೆಗಳ ಅಭಿವೃದ್ಧಿಗೆ ₹51 ಕೋಟಿ ವೆಚ್ಚ ಮಾಡುತ್ತಿದೆ. ಆದರೆ ಈ ಕೆರೆಗಳು ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿವೆ. ಧಾರವಾಡದಲ್ಲಿ 111 ಕೆರೆಗಳು ಈ ಇಲಾಖೆ ವ್ಯಾಪ್ತಿಯಲ್ಲಿದ್ದರೂ, 9 ಕೆರೆಗಳಲ್ಲಿ ₹6 ಕೋಟಿ ವೆಚ್ಚದಲ್ಲಿ ಇಲಾಖೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ.

ಕೆರೆ ಮಾಲಿನ್ಯದಲ್ಲಿ ಗೃಹ ತ್ಯಾಜದ್ದೇ ಮೇಲುಗೈ
ಹುಬ್ಬಳ್ಳಿ–ಧಾರವಾಡದಲ್ಲಿರುವ ಕೆರೆಗಳಲ್ಲಿ ಮಾಲಿನ್ಯದ್ದೇ ಸಮಸ್ಯೆ. ಹಲವು ರೀತಿಯ ಮಾಲಿನ್ಯಗಳು ಕೆರೆಯನ್ನು ಅಶುದ್ಧಗೊಳಿಸಿವೆ. ಇದರಲ್ಲಿ ಗೃಹತ್ಯಾಜ್ಯದ್ದೇ ಮೇಲುಗೈ. ಧಾರವಾಡಕ್ಕಿಂತ ಹುಬ್ಬಳ್ಳಿಯಲ್ಲಿ ಗೃಹ ತ್ಯಾಜ್ಯದ ಸಮಸ್ಯೆ ಅತಿಹೆಚ್ಚು. ಕಟ್ಟಡ ತ್ಯಾಜ್ಯವೂ ಹುಬ್ಬಳ್ಳಿಯಲ್ಲೇ ಅಧಿಕ. ಇನ್ನು ಬಹುತೇಕವಾಗಿ ಕಾಡುತ್ತಿರುವ ಒಳಚರಂಡಿ ನೀರಿನ ಮಾಲಿನ್ಯದಿಂದ ಧಾರವಾಡದ ಕೆರೆಗಳೇ ಅತಿಹೆಚ್ಚು ನಲುಗುತ್ತಿವೆ. ಧಾರವಾಡದಲ್ಲಿ ಶೇ 16ರಷ್ಟು ಮಾಲಿನ್ಯ ಒಳಚರಂಡಿಯಿಂದಾಗುತ್ತಿದ್ದರೆ, ಹುಬ್ಬಳ್ಳಿ ಈ ಪ್ರಮಾಣ ಶೇ 13ರಷ್ಟಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 49 ಕೆರೆಗಳ ಒತ್ತುವರಿಯಲ್ಲಿ ಅತಿ ಹೆಚ್ಚಿನ ಕೆರೆಗಳಲ್ಲಿ ವಸತಿಗಾಗಿಯೇ ಹೆಚ್ಚು ಒತ್ತುವರಿಯಾಗಿದೆ. ನಂತರ ಸ್ಥಾನ ರಸ್ತೆ ನಿರ್ಮಾಣಕ್ಕೆ. ವಸತಿಗಾಗಿ 15 ಕೆರೆಗಳಲ್ಲಿ ಒತ್ತುವರಿಯಾಗಿದ್ದು, ರಸ್ತೆಗಾಗಿ 14 ಕೆರೆಗಳ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದೆ. ಕೃಷಿಗಾಗಿ 6 ಕೆರೆಗಳಲ್ಲಿ; ಸಾರ್ವಜನಿಕ–ಅರೆ ಸಾರ್ವಜನಿಕ ಬಳಕೆಗಾಗಿ 5; ದೇವಸ್ಥಾನ–ಮಸೀದಿಗಳಿಗಾಗಿ 8 ಹಾಗೂ ಕೈಗಾರಿಕೆಗಾಗಿ ಒಂದು ಕೆರೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದೆ.

ಕೆರೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ...
‘ಹುಬ್ಬಳ್ಳಿ–ಧಾರವಾಡದ ಅಭಿವೃದ್ಧಿಗೆ ವಿಶೇಷ ಅನುದಾನವಾಗಿ ₹500 ಕೋಟಿ ನೀಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಬಜೆಟ್‌ನಲ್ಲಿ ಹಣ ನೀಡಿದರೆ, ಅದರಲ್ಲಿ ಕೆರೆ ಅಭಿವೃದ್ಧಿಗೆಂದೇ ಹಣವನ್ನು ಮೀಸಲಿಡುತ್ತೇವೆ’ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

‘ಜಿಲ್ಲೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸುತ್ತೇನೆ. ಎಲ್ಲ ರೀತಿಯ ತೀರ್ಮಾನ ಕೈಗೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಏನಾದರೂ ಒಂದು ಯೋಜನೆ ಸಿದ್ಧ ಮಾಡಿದರೆ, ಮುಂದೆ ಅದಕ್ಕೆ ಏನಾದರೂ ವ್ಯವಸ್ಥೆ ಮಾಡಬಹುದು. ನಮ್ಮ ನಗರೋತ್ಥಾನ ಯೋಜನೆ, ಅಭಿವೃದ್ಧಿ ಪ್ರಾಧಿಕಾರದಲ್ಲೂ ಹಣ ಇರುತ್ತದೆ. ಎಲ್ಲವನ್ನೂ ಸೇರಿಸಿಕೊಂಡು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ನೋಡ್ರಿ, ಉಣಕಲ್‌ ಕೆರೆಗೆ ಹೋಗುತ್ತಿರುವ ಒಳಚರಂಡಿ ನೀರು ತಡೆಯಲು ಪ್ಲಾಂಟ್ ಹಾಕ್ತಾ ಇದ್ದೇವೆ. ಈಗಾಗಲೇ ಒಂದಷ್ಟು ಯುಜಿಡಿ ಲೈನ್‌ ಅನ್ನು ಡೈವರ್ಟ್‌ ಮಾಡಿದ್ದೇವೆ. ಟ್ರೀಟ್‌ಮೆಂಟ್‌ ಮಾಡಿಯೇ ಸ್ವಚ್ಛ ನೀರು ಬಿಡಲು ಏನು ವ್ಯವಸ್ಥೆ ಬೇಕೋ ಅದನ್ನು ಮಾಡುತ್ತಿದ್ದೇವೆ. ಸಂತೋಷನಗರದಲ್ಲಿ ಒಂದು ಕೆರೆ ಇದೆ. ಅದಕ್ಕೇನು ಸಮಸ್ಯೆ ಇಲ್ಲ. ಕೆಂಪೆಗೆರೆದು, ಅದನ್ನು ಇನ್ನೂ ಸ್ವಲ್ಪ ಸ್ಟಡಿ ಮಾಡಿಕೊಂಡು, ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಕೆರೆ ಸಂಪೂರ್ಣ ಮುಚ್ಚಿಬಿಡಿ!
‘ನಾಗಶೆಟ್ಟಿಕೊಪ್ಪದಲ್ಲಿ ಒಂದು ಸಣ್ಣ ಕೆರೆ ಇದೆ. ಅದರ ಸ್ವಚ್ಛತೆ ಸೇರಿದಂತೆ ಎಲ್ಲದಕ್ಕೂ ನಾನು ಹಣ ಕೊಡಲು ಸಿದ್ಧನಿದ್ದೆ. ಆದರೆ ಅಲ್ಲಿ, ಎರಡು ಮೂರು ಅಭಿಪ್ರಾಯ ಇದೆ. ಆ ಕೆರೆಯನ್ನು ಸಂಪೂರ್ಣ ಮುಚ್ಚಬೇಕು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಹೂಳು ತೆಗೆದು, ಸ್ವಚ್ಛ ಮಾಡಿ ಎಂದು ಹೇಳುತ್ತಾರೆ. ಆದ್ದರಿಂದ, ‘ನೀವೆಲ್ಲ ಹಿರಿಯರು, ಕಿರಿಯರು ಎಲ್ಲರೂ ಕೂಡಿಕೊಂಡು ನಿರ್ಧಾರ ಮಾಡಿ, ಇಂತಹದ್ದು ಮಾಡ್ರೀಪಾ ಎಂದರೆ ನಾನು ಮಾಡಲು ತಯಾರಿದ್ದೇನೆ ಎಂದು ಅವರಿಗೆ ತಿಳಿಸಿದ್ದೇನೆ.’ ಅದೇನೇ ಮಾಡಕ್ಕೆ ಹೋದರೂ ಎರಡು ಅಭಿಪ್ರಾಯ ಬಂದು ಬಿಡುತಾವೆ. ಕೆರೆ ಮುಚ್ಚಲು ಬರೋದಿಲ್ಲ ಅನ್ನೋದನ್ನ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕೆಲವರು ತಕರಾರು ಮಾಡುತ್ತಿದ್ದಾರೆ’ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

‘ಉಣಕಲ್‌ ಕೆರೆ ಇವತ್ತು ಉಳಿದಿದೆ ಎಂದರೆ ಅದಕ್ಕೆ ನನ್ನ ವೈಯಕ್ತಿಕ ಆಸಕ್ತಿಯೇ ಕಾರಣ. ಅಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲೆಲ್ಲ ಲೇಔಟ್‌ ಮಾಡಲು ಹೊರಟಿದ್ದರು. ನಾನು ಅದನ್ನೆಲ್ಲ ತಡೆಹಿಡಿದು ಗ್ರೀನ್‌ ಬೆಲ್ಟ್‌ ಎಂದು ಡಿಕ್ಲೇರ್ಡ್‌ ಮಾಡಿಸಿದ್ದೇನೆ. ಈಗಾಗಲೇ ಒಂದಷ್ಟು ಕೆರೆಗಳು ಹೋಗಿವೆ. ನಮ್ಮ ಅಭಿವೃದ್ಧಿ ಪ್ರಾಧಿಕಾರದವರು ನವನಗರದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಬಡಾವಣೆ ಮಾಡಿದ್ದಾರೆ. ಅದೆಲ್ಲ ತಪ್ಪೇ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು