ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ದೃಷ್ಟಿಯಿಂದ ಮಹತ್ವದ ಚುನಾವಣೆ: ಪ್ರಲ್ಹಾದ ಜೋಶಿ

ಬಿಜೆಪಿ ಅಭ್ಯರ್ಥಿ ಸಂಕನೂರ ಪರ ಕೊನೆಯ ದಿನ ಬಿರುಸಿನ ಪ್ರಚಾರ
Last Updated 26 ಅಕ್ಟೋಬರ್ 2020, 13:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಜೆಪಿಗೆ ರಾಜಕೀಯವಾಗಿ ಇನ್ನಷ್ಟು ಗಟ್ಟಿಗೊಳ್ಳಲು ಮತ್ತು ಬೇಜಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರರ ಕ್ಷೇತ್ರದ ಮತ್ತು ಎರಡು ಕ್ಷೇತ್ರಗಳ ಉಪ ಚುನಾವಣೆಗಳು ಮಹತ್ವದ್ದಾಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಮೊದಲ ಸಲ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ‘ಜನರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರ ಮಹತ್ವದ ಕಾಯ್ದೆಗಳನ್ನು ಜಾರಿಗೆ ತರಲು ಪ್ರಯತ್ನಿಸಿದರೂ, ವಿಧಾನಪರಿಷತ್‌ನಲ್ಲಿ ಬಹುಮತ ಲಭಿಸದ ಕಾರಣ ಸಾಧ್ಯವಾಗಿಲ್ಲ. ಆದ್ದರಿಂದ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರದಲ್ಲಿನರೇಂದ್ರ ಮೋದಿ ಅವರಿಗೆ ಬಲ ತುಂಬಲು ಈ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ’ ಎಂದರು.

‘ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಜನಪರ ಕಾರ್ಯಕ್ರಮಗಳನ್ನು ವಿರೋಧಿಸುವುದೇ ಪ್ರವೃತ್ತಿಯಾಗಿದೆ. ಆಡಳಿತದ ಅವಧಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗಿಲ್ಲ. ಈಗ ನಮ್ಮ ಸರ್ಕಾರ ಮಾಡುತ್ತಿರುವ ಕಾರ್ಯಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದರು.

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಚೀನಾದ ಸೈನಿಕರನ್ನು 15 ನಿಮಿಷದಲ್ಲಿ ದೇಶ ಬಿಟ್ಟು ಓಡಿಸುತ್ತೇವೆ ಎಂದ ರಾಹುಲ್‌ ಗಾಂಧಿ ಮಾತುಗಳ ಹಾಸ್ಯಾಸ್ಪದ. ಈ ಮಾತುಗಳನ್ನು ಕೇಳಿ ಅವರ ಪಕ್ಷದವರೇ ನಗುತ್ತಾರೆ. ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಸೋಲಿಸಿ ಮತದಾರರು ಬುದ್ದಿ ಕಲಿಸಲಿದ್ದಾರೆ. ಫಲಿತಾಂಶದ ಬಳಿಕ ಕಾಂಗ್ರೆಸ್‌ ಇನ್ನಷ್ಟು ಅವಸಾನಕ್ಕೆ ಹೋಗುತ್ತದೆ’ ಎಂದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ನಾಲ್ಕೂ ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸಂಕನೂರ ಪರ ಒಲವಿದೆ. ಪ್ರಚಾರಕ್ಕಾಗಿ ವ್ಯವಸ್ಥಿತವಾಗಿ ಯೋಜನೆ ರೂಪಿಸಿ 20 ಮತದಾರರಿಗೆ ಒಬ್ಬ ಕಾರ್ಯಕರ್ತರನ್ನು ನೇಮಿಸಿದ್ದೆವು. ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದ್ದೇವೆ’ ಎಂದರು.

ಎಸ್‌.ವಿ. ಸಂಕನೂರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಮತ್ತು ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT