ಶುಕ್ರವಾರ, ಆಗಸ್ಟ್ 6, 2021
21 °C
ಜೀವವೈವಿಧ್ಯ ಅಭಿಯಾನ ಸಭೆಯಲ್ಲಿ ಅನಂತ ಹೆಗಡೆ ಆಶೀಸರ ಸಲಹೆ

‘ಸುಸ್ಥಿರ ಅಭಿವೃದ್ಧಿಗೆ ಪಾಲಿಕೆ ಮುಂದಾಗಲಿ‘– ಅನಂತ ಹೆಗಡೆ ಆಶೀಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನೃಪತುಂಗ ಬೆಟ್ಟ ನಿಧಾನವಾಗಿ ಕ್ಷೀಣಿಸುತ್ತಿದ್ದು, ಅದನ್ನು ರಕ್ಷಿಸಿ–ಅಲ್ಲಿರುವ ಜೀವ ವೈವಿಧ್ಯದ ಸುಸ್ಥಿರತೆ ಕಾಪಾಡಲು ಮಹಾನಗರ ಪಾಲಿಕೆ ಮುಂದಾಗಬೇಕು’ ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಪಾಲಿಕೆ ಆಯುಕ್ತರ ಸಭಾಂಗಣದಲ್ಲಿ ಶುಕ್ರವಾರ ಜೀವ ವೈವಿಧ್ಯ ಅಭಿಯಾನದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಗುರುತಿಸಿ, ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ಹಾಗೆ ಅಭಿವೃದ್ಧಿಗೊಳಿಸಬೇಕು. ಕೆರೆ ಕುರಿತು ಅಧ್ಯಯನ ನಡೆಸಿದ ತಜ್ಞರ ಸಲಹೆ ಆಧರಿಸಿ ಅಭಿವೃದ್ಧಿಗೆ ಮುಂದಾಗಬೇಕು. ಪರಿಸರ, ಪ್ರವಾಸೋದ್ಯಮ ಅಳವಡಿಸಿಕೊಂಡು, ಸ್ಥಳೀಯ ಮಣ್ಣಿಗೆ ಹೊಂದಿಕೊಳ್ಳುವಂಥ ಗಿಡಗಳನ್ನು ಬೆಳೆಸಬೇಕು’ ಎಂದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಎಲ್ಲವೂ ಕಾಂಕ್ರೀಟ್‌ಮಯವಾಗಿದ್ದು, ಜೀವ ವೈವಿಧ್ಯದ ಬೆಳವಣಿಗೆಗೆ ಅವಕಾಶವಿಲ್ಲದಂತಾಗಿದೆ. ಸಾಧ್ಯವಾದಲ್ಲೆಲ್ಲ ಹಸಿರು ಬೆಳೆಸಿ, ಉದ್ಯಾನ ನಿರ್ಮಿಸಬೇಕು. ಎರಡು ದಶಕಗಳ ಹಿಂದೆ ರಸ್ತೆ ಅಂಚಿಗೆ ಸಾಕಷ್ಟು ಮರ–ಗಿಡಗಳು ಹುಲುಸಾಗಿ ಬೆಳೆದಿದ್ದವು. ಅಭಿವೃದ್ಧಿ ಕಾಮಗಾರಿಗಳಿಂದ ಮರ–ಗಿಡಗಳೇ ಕಾಣುತ್ತಿಲ್ಲ. ಇದಕ್ಕಾಗಿ ಪಾಲಿಕೆ ಗ್ರೀನ್‌ ಬಜೆಟ್‌ ಮಂಡಿಸಿ, ಪರಿಸರ ಸಮತೋಲನಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್‌, ‘ತೋಳನಕೆರೆ ಮುಂಭಾಗದ ಎರಡು ಎಕರೆ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ನಿರ್ಧರಿಸಲಾಗಿದೆ. ನಗರದ ವಿವಿಧೆಡೆ 50 ಸಾವಿರ ಗಿಡಗಳನ್ನು ನೆಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ 524 ಉದ್ಯಾನಗಳಿದ್ದು, 120 ಉದ್ಯಾನ ಅಭಿವೃದ್ಧಿಯಾಗಿವೆ. 35 ಕೆರೆಗಳಿದ್ದು, ನಾಲ್ಕು ಕೆರೆ ಅತಿಕ್ರಮಣವಾಗಿವೆ. ಪ್ರತಿ ತಿಂಗಳು ಒಂದೊಂದು ಕೆರೆ ಒತ್ತುವರಿ ತೆರವುಗೊಳಿಸಲು ನಿರ್ಧರಿಸಲಾಗಿದೆ’  ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಪರಿಸರ ವಿಜ್ಞಾನಿ ಕೇಶವ ಕೂರ್ಸೆ, ಪಂಚಾಕ್ಷರಿ ಹಿರೇಮಠ, ಶಂಕರ ಕೆ., ಗೀತಾ ಬೆಲ್ಲದ, ರಾಜೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು