ಗುರುವಾರ , ಜೂನ್ 24, 2021
28 °C
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ನಾತು ಆಗ್ರಹ

ರಾಜ್ಯ ಸರ್ಕಾರವೂ ಮೀಸಲಾತಿ ನೀಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೇಂದ್ರ ಸರ್ಕಾರ ಮೇಲ್ವರ್ಗದವರಿಗೆ ಘೋಷಿಸಿರುವ ಶೇ 10ರಷ್ಟು ಮೀಸಲಾತಿಯಲ್ಲಿ ಬ್ರಾಹ್ಮಣರೂ ಒಳಗೊಂಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡ ಶೇ 10ರಷ್ಟು ಮೀಸಲಾತಿ ನೀಡಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಬಿ. ನಾತು ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ನೌಕರಿಯಲ್ಲಿ ಬ್ರಾಹ್ಮಣರಿಗೆ ಮೀಸಲಾತಿ ಕೊಡಲಾಗಿದೆ. ಈ ಸೌಲಭ್ಯ ರಾಜ್ಯ ಸರ್ಕಾರಿ ನೌಕರರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. ಇದರಿಂದ ಅನೇಕ ಬ್ರಾಹ್ಮಣರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಈ ಕುರಿತು ತುರ್ತು ಆದೇಶ ಹೊರಡಿಸಬೇಕು’ ಎಂದು ಹೇಳಿದರು.

’ರಾಜ್ಯದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದು ಅತ್ಯಂತ ಸಂತಸದ ವಿಷಯ. ಮಂಡಳಿಗೆ ಸರ್ಕಾರ ₹25 ಕೋಟಿ ಅನುದಾನ ನೀಡಿ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುವಂತೆ ತಿಳಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಮೂರು ಸ್ಥಾನಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಕ್ರಮವಾಗಿ ₹15 ಸಾವಿರ, ₹10 ಸಾವಿರ ಮತ್ತು ₹5 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು’ ಎಂದರು.

’ಬ್ರಾಹ್ಮಣ ಸಮಾಜದವರ ಅಭಿವೃದ್ಧಿಗಾಗಿ ಎಸ್ಸೆಸ್ಸೆಲ್ಸಿ ಪೂರ್ವ ಮತ್ತು ನಂತರದ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡುವುದು, ವೇದಾಧ್ಯಯನ ಹಾಗೂ ಸಂಸ್ಕೃತ ಕಲಿಯವವರಿಗೆ ಶಿಷ್ಯವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಸನ್ನಿಧಿ ಯೋಜನೆ, ಕರಕುಶಲ ತಯಾರಿಕೆ, ಗುಡಿ ಕೈಗಾರಿಕೆ, ಹೂ ಬತ್ತಿ ಮಾಡುವ ಮಹಿಳೆಯರಿಗೆ ಉದ್ಯೋಗ ಮೇಳಗಳನ್ನು ಆಯೋಜಿಸುವುದು, ಬ್ರಾಹ್ಮಣ ಸ್ವಸಹಾಯ ಸಂಘಗಳ ಸ್ಥಾಪನೆ, ಅನಾಥ, ಅಂಗವಿಕಲ, ವಿಧವೆ ಮಹಿಳೆಯರಿಗೆ ಮಾಸಿಕ ಪಿಂಚಣಿ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ. ಅಕ್ಟೋಬರ್‌ ವೇಳೆಗೆ ಇವುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ಮಂಡಳಿ ನಿರ್ದೇಶಕ ವಿನೀತ್‌ ಶ್ಯಾಮ್‌ ಭಟ್‌, ಗೋಪಾಲ ಕುಲಕರ್ಣಿ, ಮನೋಹರ ಪರ್ವತಿ, ಶಂಕರ ಪಾಟೀಲ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.