ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯರ ಪಾಲ್ಗೊಳ್ಳುವಿಕೆಯಿಂದ ಅಭಿವೃದ್ಧಿ: ಉದ್ಯಮಿ ಮೋಹನ್‌ದಾಸ್ ಪೈ ಅಭಿಪ್ರಾಯ

‘ಇವಿನಿಂಗ್ ವಿತ್ ಲೆಜೆಂಡ್ಸ್‌’ ಸಂವಾದ
Last Updated 2 ಫೆಬ್ರುವರಿ 2020, 10:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸ್ಥಳೀಯರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅಭಿವೃದ್ದಿ ಸಾಧ್ಯ’ ಎಂದು ಉದ್ಯಮಿ ಮೋಹನ್‌ದಾಸ್ ಪೈ ಅಭಿಪ್ರಾಯಪಟ್ಟರು.

ದೇಶಪಾಂಡೆ ಫೌಂಡೇಷನ್‌ ಶನಿವಾರ ಆಯೋಜಿಸಿದ್ದ ‘ಇವಿನಿಂಗ್ ವಿತ್ ಲೆಜೆಂಡ್ಸ್‌’ ಸಂವಾದದಲ್ಲಿ ಹುಬ್ಬಳ್ಳಿ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ‘ಜನಪ್ರತಿನಿಧಿಗಳು ಹಾಗೂ ಜನರ ನಡುವಿನ ಅಂತರ ಮಂದಗತಿಯ ಅಭಿವೃದ್ಧಿಗೆ ಕಾರಣ. ಹಾಗಾಗಿ, ಸ್ಥಳೀಯರಿಗೆ ತಮ್ಮ ನಗರ ಏನಾಗಬೇಕು ಎಂಬುದರ ಮುನ್ನೋಟ ಇರಬೇಕು’ ಎಂದರು.

‘ರಸ್ತೆ, ಸಾರಿಗೆ, ಆಸ್ಪತ್ರೆ, ಉದ್ಯಾನ ಇತ್ಯಾದಿ ಅಭಿವೃದ್ಧಿಗೆ ಸಂಬಂಧಿಸಿದಂತೆ, ಜನಪ್ರತಿನಿಧಿಗಳನ್ನು ನೇರವಾಗಿ ಭೇಟಿಯಾಗಿ ಚರ್ಚಿಸಬೇಕು. ನಮ್ಮಲ್ಲಿ ರಾಜಕಾರಣ ಹಾಗೂ ರಾಜಕಾರಣಿಗಳೆಂದರೆ ಅಸಹ್ಯಪಡುವ ವಾತಾವರಣ ಇದೆ. ಆದರೆ, ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಅಭಿವೃದ್ಧಿ ಅಸಾಧ್ಯ. ಹಾಗಾಗಿ, ಜನರು ರಾಜಕೀಯವಾಗಿ ಸಕ್ರಿಯರಾದರೆ, ಅಭಿವೃದ್ಧಿಗೆ ವೇಗಗೊಳ್ಳುತ್ತದೆ’ ಎಂದು ಹೇಳಿದರು.

ಏನನ್ನೂ ಮಾಡಲಿಲ್ಲ

‘ಹುಬ್ಬಳ್ಳಿಯನ್ನು ಐ.ಟಿ ಸಿಟಿಯಾಗಿ ಮಾಡುವ ಉದ್ದೇಶದಿಂದ ಹಿಂದೆ ‘ಐ.ಟಿ ವಿಷನ್’ ಎಂಬ ಗ್ರೂಪ್ ರಚಿಸಿಕೊಂಡಿದ್ದೆವು. ಐ.ಟಿ ಅಭಿವೃದ್ಧಿಯ ರೂಪುರೇಷೆಗಳ ಕುರಿತು ಇಲ್ಲಿನ ಜನಪ್ರತಿನಿಧಿಗಳ ಜತೆ ಚರ್ಚಿಸಿದ್ದೆವು. ಎಲ್ಲದಕ್ಕೂ ಓಕೆ ಅಂದರು. ಆದರೆ, ಏನನ್ನೂ ಮಾಡಲಿಲ್ಲ. ತಜ್ಞರ ಮಾತಿಗೆ ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸಿಗುವ ಪ್ರತಿಕ್ರಿಯೆ ಇಲ್ಲಿ ಸಿಗುವುದಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ, ಜನಪ್ರತಿನಿಧಿಗಳು ಎಲ್ಲರ ಸಲಹೆಗಳನ್ನು ಆಲಿಸಿ, ಕಾರ್ಯಪ್ರವೃತ್ತರಾಗಬೇಕು’ ಎಂದು ಪೈ ಸಲಹೆ ನೀಡಿದರು.

ಐ.ಟಿ ಕಂಪನಿ ಎಚ್‌ಸಿಎಲ್ ಸ್ಥಾಪಕ ಅಜಯ್ ಚೌಧರಿ ಮಾತನಾಡಿ, ‘ಇಂದಿನ ಯುಗದಲ್ಲಿ ಪದವಿಗಳು ಲೆಕ್ಕಕ್ಕಿಲ್ಲ. ಈಗೇನಿದ್ದರೂ ಕೌಶಲಕ್ಕಷ್ಟೇ ಬೆಲೆ. ಕೌಶಲ ಇದ್ದವರು ಎಲ್ಲಿ ಬೇಕಾದರೂ ಕೆಲಸ ಗಿಟ್ಟಿಸಿಕೊಳ್ಳಬಲ್ಲ. ಮುಂದಿನ ವರ್ಷಗಳಲ್ಲಿ ಕಂಪ್ಯೂಟರ್‌ಗಳು ಮನುಷ್ಯನ ಮೆದುಳನ್ನು ಮೀರಿಸುತ್ತವೆ. ನಾವೆಷ್ಟು ವರ್ಷ ಬದುಕಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳುವ ಕಾಲ ದೂರವಿಲ್ಲ’ ಎಂದು ಅಭಿಪ್ರಾಯಪಟ್ಟರು.’

ಉದ್ಯಮಿ ರಾಜೀವ್, ‘ಕೌಶಲ ಭಾಷೆಯ ಗಡಿಯನ್ನು ಮೀರಿ ಬೆಳೆಯುತ್ತಿದೆ. ಹಿಂದೆ ಇಂಗ್ಲಿಷ್ ಗೊತ್ತಿದ್ದರೆ, ಕೆಲಸ ಪಡೆಯುವುದು ಸುಲಭ ಎಂಬ ಮಾತಿತ್ತು. ಈಗ ಎಲ್ಲವೂ ಬದಲಾಗಿದೆ. ಕೌಶಲ ಹಾಗೂ ಉದ್ಯಮಶೀಲತೆ ಇದ್ದರೆ ಯಾವ ಮಟ್ಟಕ್ಕೆ ಬೇಕಾದರೂ ಬೆಳೆಯಬಹುದು. ಔದ್ಯಮಿಕ ಅಭಿವೃದ್ಧಿಯಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಪ್ರಗತಿ ಸಾಧ್ಯ’ ಎಂದರು.

ದೇಶಪಾಂಡೆ ಫೌಂಡೇಷನ್‌ ಸ್ಥಾಪಕ ಗುರುರಾಜ ದೇಶಪಾಂಡೆ ಸಂವಾದವನ್ನು ನಡೆಸಿಕೊಟ್ಟರು. ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳಾದ ಶಿಗ್ಗಾವಿಯ ಸುಮತಾ, ಹುಬ್ಬಳ್ಳಿಯ ಅನ್ನಪೂರ್ಣ ಮುಂಡರಗಿ, ನವಲಗುಂದದ ರೈತ ನಾಗಪ್ಪ ಯಾವಗಲ್, ಉದ್ಯಮಿಗಳಾದ ಗದುಗಿನ ಸರೋಜಾ ಚೇಗರೆಡ್ಡಿ ಹಾಗೂ ಡಾ. ಶೇಖರ್ ಬಸವಣ್ಣ ಅವರಿಗೆ ‘ಯಂಗ್ ಅಚೀವರ್ ಅವಾರ್ಡ್‌’ ನೀಡಲಾಯಿತು.

ಚಳ್ಳಕೆರೆಯ ರಾಜ ಬಿ., ವಾರಾಣಸಿಯ ಶುಭಂ ಕುಮಾರ್ ಶಾ,ಬಳ್ಳಾರಿಯ ಜಗದೀಶ್ ಜಿ.ಎಂ, ರಂಗನಾಥ್ ದೇಸಾಯಿ ಹಾಗೂ ಹಿರಿಯೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ‘ಯುವ ಸಮಾವೇಶ–2020’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನರೇಗಲ್‌ನ ತುಳಸಿಗಿರಿ ಮಲ್ಲಕಂಬ ತಂಡ ನೀಡಿದ ಮಲ್ಲಕಂಬ ಪ್ರದರ್ಶನ ಮೈನವಿರೇಳಿಸಿತು.

‘ವಿಭಜಿಸಲಾಗದ ನಾಯಕತ್ವ ಬೆಳೆಸಬೇಕು’

‘ನಮ್ಮ ದೇಶದ ಯುವಜನರನ್ನು ಜಾತಿ–ಧರ್ಮ ಹಾಗೂ ಸಿದ್ಧಾಂತ ಆಧಾರದ ಮೇಲೆ ಸುಲಭವಾಗಿ ವಿಭಜಿಸಬಹುದಾಗಿದೆ. ಇದಕ್ಕೆ ಅವರಲ್ಲಿರುವ ಸೀಮಿತ ಮನೋಭಾವ ಹಾಗೂ ನಾಯಕತ್ವದ ಕೊರತೆ ಕಾರಣ. ಹಾಗಾಗಿ, ಭಿನ್ನತೆಗಳನ್ನು ಮೀರುವ, ಎಲ್ಲವನ್ನೂ ಒಳಗೊಳ್ಳುವ ಸಾಮುದಾಯಿಕ ನಾಯಕತ್ವವನ್ನು ಅವರಲ್ಲಿ ಬೆಳೆಸಬೇಕು. ಆಗ ಯಾವುದಕ್ಕೂ ಸುಲಭವಾಗಿ ಮಾರು ಹೋಗದೆ, ವಿವೇಚನೆ ಬಳಸಿ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT