ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಸ್ವಾಮೀಜಿ ಸೂಚನೆಯಂತೆ ಚುನಾವಣಾ ಕಣದಿಂದ ಹಿಂದಕ್ಕೆ: ದಿಂಗಾಲೇಶ್ವರ ಶ್ರೀ

Published 22 ಏಪ್ರಿಲ್ 2024, 14:38 IST
Last Updated 22 ಏಪ್ರಿಲ್ 2024, 14:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಮ್ಮ ಪೀಠದ ಹಿರಿಯ ಸ್ವಾಮೀಜಿ (ಫಕೀರ ಶಿವಯೋಗಿ ಸಿದ್ಧರಾಮ ಸ್ವಾಮೀಜಿ) ಅವರ ಸೂಚನೆ ಮೇರೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವೆ. ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ವಾಪಸ್‌ ಪಡೆದಿರುವೆ’ ಎಂದು ಶಿರಹಟ್ಟಿ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಚುನಾವಣೆಗೆ ಸ್ಪರ್ಧಿಸುವುದು ಹೊರತುಪಡಿಸಿ ನಾನು ಹೇಳಿದ ಎಲ್ಲ ಮಾತುಗಳಿಗೆ ಈಗಲೂ ಬದ್ಧ. ಬಿಜೆಪಿ ಅಭ್ಯರ್ಥಿ (ಪ್ರಲ್ಹಾದ ಜೋಶಿ) ಅವರಿಗೆ ಪಾಠ ಕಲಿಸುವವರೆಗೆ ಹಾರ ಹಾಕಿಸಿಕೊಳ್ಳಲ್ಲ ಎಂದು ಹೇಳಿದ್ದನ್ನು ಈಗಲೂ ಪಾಲಿಸುವೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಪಕ್ಷಕ್ಕೂ ನಾನು ಈವರೆಗೆ ಬೆಂಬಲಿಸಿಲ್ಲ. ಒಂದೆರಡು ದಿನಗಳಲ್ಲಿ ಭಕ್ತರು, ಹಿತೈಷಿಗಳ ಸಭೆ ಕರೆದು ತೀರ್ಮಾನಿಸುವೆ’ ಎಂದರು.

‘ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳ ಮುಖಂಡರು ನನ್ನನ್ನು ಸಂಪರ್ಕಿಸಿದ್ದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಕೂಡ ನನ್ನ ಜೊತೆ ಮಾತನಾಡಿದ್ದರು’ ಎಂದರು.

ಸ್ವಾಮೀಜಿಗೆ ಪೇಮೆಂಟ್‌ ಆಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಅವರು ಎಂತಹವರು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅವರ ಪಕ್ಷದ ಮುಖಂಡರನ್ನೇ ಅವರು ಬಿಟ್ಟಿಲ್ಲ. ₹ 2 ಸಾವಿರ ಕೋಟಿ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ, ₹ 500 ಕೋಟಿ ಕೊಟ್ಟರೆ ಸಚಿವ ಸ್ಥಾನ ಸಿಗುತ್ತದೆ ಎಂದು ಆರೋಪಿಸಿದ್ದರು. ಇಷ್ಟಾದರೂ, ಆ ಪಕ್ಷದವರು ಅವರಿಗೆ ಲಗಾಮು ಹಾಕಿಲ್ಲ. ಅವರು ಒಂದು ರೀತಿ ‘ಮೆದುಳು ಇಲ್ಲದ ದೇಹ ಇದ್ದಂತೆ’ ಎಂದು ವ್ಯಂಗ್ಯವಾಡಿದರು.

‘ಹಣಕ್ಕಾಗಿ ಆಸೆ ಪಡುವವ ನಾನಲ್ಲ. ತಂದೆ– ತಾಯಿ, ಮನೆ ಬಿಟ್ಟು ಬಂದಿರುವೆ. ನನಗೆ ಮದುವೆ ಇಲ್ಲ, ಮಕ್ಕಳೂ ಇಲ್ಲ. ಹಣದ ಅಗತ್ಯವೂ ಇಲ್ಲ. ಮಠದ ಕೆಲಸಕ್ಕೆ ಮಾತ್ರ ಹಣ ಬೇಕೆ ಹೊರತು ಉಳಿದು ಯಾವುದಕ್ಕೂ ಬೇಡ. ಕಾಣಿಕೆ, ದೇವಣಿಗೆ ರೂಪದಲ್ಲಿ ಭಕ್ತರು ಹಣ ನೀಡಿದ್ದಾರೆ. ಇದು ಹೊರತುಪಡಿಸಿದರೆ ಬೇರಾವುದೇ ವ್ಯಕ್ತಿ ನನಗೆ ಹಣ ಕೊಟ್ಟಿದ್ದನ್ನು ಹೇಳಲಿ ನೋಡೋಣ’ ಎಂದು ಅವರು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT