ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿಗೆ ಚೊಂಬು ಕೊಡುವುದು ನಿಶ್ಚಿತ: ಬಂಡೆಪ್ಪ ಕಾಶೆಂಪುರ

Published 25 ಏಪ್ರಿಲ್ 2024, 8:51 IST
Last Updated 25 ಏಪ್ರಿಲ್ 2024, 8:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಈ ಚುನಾವಣೆಯಲ್ಲಿ ರಾಜ್ಯದ ಜನ ರಾಹುಲ್ ಗಾಂಧಿ ಅವರಿಗೆ ಚೊಂಬು ಕೊಡುವುದು ನಿಶ್ಚಿತ. ಪ್ಲಾಸ್ಟಿಕ್ ಚೊಂಬು ಕೊಡಬೇಕೊ, ಸ್ಟೀಲ್ ಚೊಂಬು ಕೊಡಬೇಕೊ ಎಂದು ಜನ ಯೋಚನೆ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ ಲೇವಡಿ ಮಾಡಿದರು.

‘ಇದು ಮೋದಿ ವರ್ಸಸ್‌ ರಾಹುಲ್ ಗಾಂಧಿ ನಡುವಿನ ಚುನಾವಣೆ. ದೇಶವನ್ನು ಯಾರು ಮುನ್ನಡೆಸಬೇಕು, ಯಾರು ಸಮರ್ಥರು ಎಂದು ಪ್ರತಿ ಗ್ರಾಮಗಳಲ್ಲಿ ಜನರು ಚಿಂತನೆ ಮಾಡುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಎನ್‌ಡಿಎ, ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಜನ ಬೆಂಬಲಿಸಲಿದ್ದಾರೆ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. 10 ಕೆ.ಜಿ ಅಕ್ಕಿ ಕೊಡುತ್ತಿದ್ದು, ರಾಜ್ಯವನ್ನು ಹಸಿವು ಮುಕ್ತ ಮಾಡುತ್ತೇವೆ ಎಂದು ಈಗಲೂ ಸುಳ್ಳು ಹೇಳುತ್ತಿದ್ದಾರೆ. ಐದು ಕೆ.ಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ಕಾಂಗ್ರೆಸ್‌ನವರು ಪ್ರತಿ ಕೆ.ಜಿಗೆ ₹34 ಯಂತೆ ಐದು ಕೆ.ಜಿಗೆ ₹170 ನೀಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆ.ಜಿ ಅಕ್ಕಿಗೆ ₹60 ದರ ಇದೆ. ಇದರಲ್ಲಿ ಐದು ಕೆ.ಜಿ ಅಕ್ಕಿ ಖರೀದಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಒಂದು ಕಡೆ ಗ್ಯಾರಂಟಿ ಯೋಜನೆಗಳ ಮೂಲಕ ಕೊಟ್ಟು, ಇನ್ನೊಂದು ಕಡೆ ಜನರಿಂದ ಕಿತ್ತುಕೊಳ್ಳುತ್ತಿದ್ದಾರೆ. ರೈತರಿಗೆ ಏಳು ತಾಸು ನಿರಂತರವಾಗಿ ವಿದ್ಯುತ್ ಪೂರೈಸುತ್ತಿಲ್ಲ. ಮದ್ಯದ ದರವನ್ನು ಏರಿಸಿದ್ದಾರೆ’ ಎಂದು ಹರಿಹಾಯ್ದರು.

‘ಗ್ಯಾರಂಟಿ ಯೋಜನೆಗಳು ವರ್ಕೌಟ್‌ ಆಗುತ್ತಿಲ್ಲ ಎಂದು ಚೊಂಬು ತಂದಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ರೈತಪರವಾದ ಯಾವ ಯೋಜನೆಗಳೂ ಇಲ್ಲ. ಕೇಂದ್ರ ಸರ್ಕಾರ ಬರ ಪರಿಹಾರ ನೀಡದೆ ಅನ್ಯಾಯ ಮಾಡಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ’ ಎಂದರು.

‘ರಾಜ್ಯದಲ್ಲಿ ಬರ ಇದ್ದು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ರೈತರಿಗೆ ಪರಿಹಾರ ನೀಡಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ₹24 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ನಿಮಗೆ ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿಲ್ಲ. ಐದು ತಿಂಗಳಿನಿಂದ ಹಾಲಿನ ಪ್ರೋತ್ಸಹಧನ ಬಾಕಿ ಉಳಿಸಿಕೊಂಡಿದ್ದಾರೆ’ ಎಂದರು.

ಪ್ರಲ್ಹಾದ ಜೋಶಿ ಅವರು ಕೆಂದ್ರ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಜನರು ಅವರನ್ನು ಬೆಂಬಲಿಸುವ ಮೂಲಕ ಮೋದಿ ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.

ಶಿವಾನಂದ ಪಾಟೀಲ ವಜಾಗೊಳಿಸಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡನೀಯ. ಘಟನೆ ನಡೆದ 24 ಗಂಟೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರು ಒಂದೊಂದು ರೀತಿಯ ಹೇಳಿಕೆ ನೀಡಿದರು. ನೇಹಾ ಹತ್ಯೆ ಆಕಸ್ಮಿಕ ಎಂದು ಹೇಳಿಕೆ ನೀಡಿದ ಸಚಿವ ಶಿವಾನಂದ ಪಾಟೀಲ ಅವರನ್ನು ಸಂಪುಟದಿಂದ ವಜಾಗೊಳಸಿಬೇಕು ಎಂದು ಆಗ್ರಹಿಸಿದರು.

ಈಶ್ವರಪ್ಪ ದುಡುಕಿನ ನಿರ್ಧಾರ: ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ಡಿಸಿಎಂ ಸೇರಿದಂತೆ ಎಲ್ಲ ಮಹತ್ವದ ಸ್ಥಾನಗಳನ್ನು ನೀಡಿತ್ತು. ಪುತ್ರನಿಗೆ ಟಿಕೆಟ್‌ ಸಿಕ್ಕಿವೆಂದು ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಅನುಸರಿಸಿಕೊಂಡು ಹೋಗಬೇಕಿತ್ತು ಎಂದರು.

ಗುರುರಾಜ ಹುಣಸಿಮರದ, ಗಂಗಾಧರ ಮಠ, ಸಿ.ಎಂ.ನಾಗರಾಜ ಇದ್ದರು.

ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಎಚ್‌.ಡಿ.ದೇವೇಗೌಡ ಅವರು ಅವರ ಜತೆ ಕೈಜೋಡಿಸಿದ್ದಾರೆ. ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲುತ್ತೇವೆ
ಬಂಡೆಪ್ಪ ಕಾಶೆಂಪುರ, ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT