ಶುಕ್ರವಾರ, ಮೇ 27, 2022
28 °C
59 ವರ್ಷಗಳಿಂದ ರಾಮನ ಜಪ, ಕೋಟಿ ಬಾರಿ ಬರವಣಿಗೆಯ ಸಾಧನೆ

ಅಮೆರಿಕಕ್ಕೆ ಹುಬ್ಬಳ್ಳಿ ಭಕ್ತನ ‘ಶ್ರೀರಾಮ ಜೈ ರಾಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಲ್ಲಿ ಎಲ್ಲಿ ನೋಡಿದರಲ್ಲೂ ರಾಮನ ಜಪ, ಮನೆ ತುಂಬಾ ದೇವರ ಫೋಟೊಗಳು. ಮನೆಯ ಅವರ ಕೊಠಡಿಯಲ್ಲಿರುವ ರಾಮನ ಫೋಟೊಕ್ಕೆ ನಿತ್ಯ ಬೆಳಿಗ್ಗೆ ದೀಪ ಹೆಚ್ಚಿ ಪೂಜೆ ಸಲ್ಲಿಸಿ ‘ಶ್ರೀರಾಮ ಜೈ ರಾಮ’ ಪಠಣ ಹಾಗೂ ಬರೆಯುವುದನ್ನು ಅವರು 59 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.

ಮಂಟೂರು ರಸ್ತೆಯ ಕೃಪಾ ನಗರದಲ್ಲಿರುವ ನಾರಾಯಣ ವರದಪ್ಪ ರಾಯಡು ಈ ಕಾಯಕ ಮಾಡಿಕೊಂಡು ಬಂದವರು. ಅವರು ಹುಟ್ಟಿದ್ದು ಆಂಧ್ರದಲ್ಲಿ. ಬೆಳೆದು ಆರಂಭದ ಒಂದಷ್ಟು ವರ್ಷಗಳನ್ನು ಕಳೆದಿದ್ದು ಮಹಾರಾಷ್ಟ್ರದಲ್ಲಿ. 75 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಬಂದು ಪೋಷಕರೊಂದಿಗೆ ನೆಲೆಸಿದರು. ಅಂಚೆ ಇಲಾಖೆಯಲ್ಲಿ ಜಮಾದಾರ ಆಗಿ ನಿವೃತ್ತಿಯಾಗಿದ್ದಾರೆ.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವಾಗಿನಿಂದ (1963) ನಿತ್ಯ ‘ಶ್ರೀರಾಮ ಜೈ ರಾಮ’ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ಬಳಿಕ 1968ರಿಂದ ನಂತರದ ಹತ್ತು ವರ್ಷಗಳ ಕಾಲ ಲೆಕ್ಕವಿಟ್ಟು ಒಂದು ಕೋಟಿ ರಾಮನಾಮ ಬರೆದಿದ್ದಾರೆ. ದೊಡ್ಡ ಅಳತೆಯ 68 ಪುಸ್ತಕಗಳಲ್ಲಿ ಬರೆದಿರುವ ರಾಮನಾಮವನ್ನು 1968ರಲ್ಲಿ ನಾರಾಯಣ ಅವರು ಭದ್ರಗಿರಿ ಅಚ್ಯುತದಾಸರು ಧಾರವಾಡದ ಕಲಾಭವನಕ್ಕೆ ಬಂದಿದ್ದಾಗ ನೀಡಿದ್ದರು. ಅಚ್ಯುತದಾಸರ ನೆರವಿನೊಂದಿಗೆ ನಾರಾಯಣ ಅವರು ಬರೆದ ರಾಮನಾಮದ ಎಲ್ಲಾ ನೋಟ್‌ಬುಕ್‌ಗಳು ಅಮೆರಿಕದ ರಾಮನ ದೇವಸ್ಥಾನಕ್ಕೆ ನೀಡಲಾಗಿದೆ.

84 ವರ್ಷ ವಯಸ್ಸಿನ ನಾರಾಯಣ ಅವರು ಈಗಲೂ ನಿತ್ಯ ರಾಮನ ಜಪದಲ್ಲಿ ತೊಡಗುತ್ತಾರೆ. ರಾಮನ ಕೋಟಿನಾಮ ಬರವಣಿಗೆ ಪೂರ್ಣಗೊಂಡ ಬಳಿಕ ಈಗ ‘ಓಂ ಶ್ರೀ ಸಾಯಿರಾಮ’ ಎನ್ನುವುದನ್ನು 1.26 ಕೋಟಿ ಸಲ ಬರೆದಿದ್ದಾರೆ. ಈಗಲೂ ಬರವಣಿಗೆಯ ಕೆಲಸ ಮುಂದುವರಿದಿದೆ. ದೇವರು ಮತ್ತಷ್ಟು ಶಕ್ತಿ ಕೊಟ್ಟರೆ ಇನ್ನೊಂದು ಸಲ ಒಂದು ಕೋಟಿ ರಾಮನಾಮ ಬರೆಯುವುದಾಗಿ ಅವರು ಹೇಳುತ್ತಾರೆ.

ನಾರಾಯಣ ಅವರು ರಾಮನ ಪರಮ ಭಕ್ತರು. ರಾಮನ ಸೇವೆಗಾಗಿ ಅವರ ಪತ್ನಿ ಮಂಗಮ್ಮ ರಾಯುಡು ಪತಿಗೆ ಬೆನ್ನೆಲುಬಾಗಿದ್ದಾರೆ.  ರಾಮನ ಮೇಲಿನ ಅಪಾರ ಪ್ರೀತಿಯಿಂದಾಗಿ ತಮ್ಮ ಮನೆಗೆ ‘ಸೀತಾರಾಮ ನಿಲಯ’ ಎಂದು ನಾಮಕರಣ ಮಾಡಿದ್ದಾರೆ.

‘ನಾನು ಮೊದಲಿನಿಂದಲೂ ರಾಮನ ಭಕ್ತ. ಜಗತ್ತಿನಲ್ಲಿ ಶಾಂತಿ ಲಭಿಸಬೇಕು, ಲೋಕ ಕಲ್ಯಾಣವಾಗಬೇಕು ಎನ್ನುವ ಕಾರಕ್ಕಾಗಿ ರಾಮನಾಮ ಪಠಿಸಿ ಅದನ್ನು ಬರೆಯುತ್ತಾ ಬಂದಿದ್ದೇನೆ. ಅಂಚೆ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3ರಿಂದ 4 ಗಂಟೆ ತನಕ ರಾಮನಾಮ ಬರೆಯುತ್ತಿದ್ದೆ. ಆಗಲೂ, ಈಗಲೂ ದೇವರ ನಾಮ ಬರೆಯಲು ಅತ್ಯಂತ ಖುಷಿಯಾಗುತ್ತದೆ. ಸದಾ ಕಾಲಕ್ಕೂ ಇದು ಸಂತೋಷ ನೀಡುವ ಕೆಲಸ’ ಎಂದು ನಾರಾಯಣ ಅವರು ವಿನೀತರಾಗಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು