ಹುಬ್ಬಳ್ಳಿ: ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಇದೇ 21ರಂದು ವಕೀಲರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಏಳು ಮಂದಿ ಸ್ಪರ್ಧಿಸಿದ್ದಾರೆ.
ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಎಸ್.ಕೆ. ಕಾಯಕಮಠ ಸ್ಪರ್ಧಿಸಿದ್ದು, ಹಾಲಿ ಅಧ್ಯಕ್ಷ ಸಿ.ಆರ್. ಪಾಟೀಲ ಪುನರ್ ಆಯ್ಕೆ ಬಯಸಿದ್ದಾರೆ. ಅವರ ಜೊತೆ ಮಾಜಿ ಅಧ್ಯಕ್ಷ ಡಿ.ಎಂ. ನರಗುಂದ, ಎಂ.ಎಸ್. ಬಣದ, ಎಚ್.ಎಲ್. ನದಾಫ್, ಸಿ.ಬಿ. ಪಾಟೀಲ, ಎಸ್.ಜೆ. ನಿರ್ಮಾಣಿಕ್ ಕಣದಲ್ಲಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹನುಮಂತ ಶಿಗ್ಗಾಂವ ಮತ್ತು ಪಿ.ಎಚ್. ತೋಟದ ನಡುವೆ ಹಣಾಹಣಿ ಏರ್ಪಟ್ಟಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಶಿಗ್ಗಾಂವ ಅವರು ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಉಪಾಧ್ಯಕ್ಷ ಸ್ಥಾನ ಒಂದೇ ಇದ್ದು, ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಎ.ಕೆ. ಅಕ್ಕಿ, ಲಕ್ಷ್ಮಣ ಬೀಳಗಿ, ಎಸ್.ಎಂ. ಪಾಟೀಲ ಮತ್ತು ಝೆಡ್.ಕೆ. ತಟಗಾರ ಕಣದಲ್ಲಿದ್ದಾರೆ.
ಸಹ ಕಾರ್ಯದರ್ಶಿ ಸ್ಥಾನ ಸಹ ಒಂದೇ ಇದ್ದು, ಐವರು ಸ್ಪರ್ಧೆಯಲ್ಲಿದ್ದಾರೆ. ಖಜಾಂಚಿ ಸ್ಥಾನಕ್ಕೆ ಎಸ್.ಜಿ. ದೊಡ್ಡಮನಿ ಮತ್ತು ಎಸ್.ವಿ. ಗುಳೇದ ಮಧ್ಯೆ ಹಣಾಹಣಿ ಏರ್ಪಟ್ಟಿದೆ. ಹಿರಿಯ ಕಾರ್ಯಕಾರಿಣಿ ಮಂಡಳಿಗೆ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೂರು ಸ್ಥಾನಗಳಿಗೆ ಆಯ್ಕೆಯಾಗಬೇಕಿದೆ. ಕಿರಿಯ ಕಾರ್ಯಕಾರಿಣಿ ಮಂಡಳಿಗೆ ಲಭ್ಯವಿರುವ ಮೂರು ಸ್ಥಾನಗಳಿಗೆ ಒಂಬತ್ತು ಮಂದಿ ಕಣದಲ್ಲಿದ್ದಾರೆ.
ಹಿರಿಯ ಮಹಿಳಾ ಆಡಳಿತ ಮಂಡಳಿಯ ಒಂದು ಸ್ಥಾನ ಮತ್ತು ಕಿರಿಯ ಮಹಿಳಾ ಆಡಳಿತ ಮಂಡಳಿಯ ಒಂದು ಸ್ಥಾನಕ್ಕೆ ನೇರ ಪೈಪೋಟಿ ಏರ್ಪಟ್ಟಿದೆ.
ಜುಲೈ 21ರಂದು ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಸಂಜೆ 6ರಿಂದ ಮತ ಎಣಿಕೆ ಆರಂಭವಾಗಲಿದ್ದು, ಅದೇ ದಿನ ರಾತ್ರಿ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 1,492 ಮತದಾರರು ಇದ್ದಾರೆ. ಚುನಾವಣಾಧಿಕಾರಿಯಾಗಿ ಎಸ್.ಜಿ. ಅರಗಂಜಿ ಅವರ ಜೊತೆ ಐ.ಕೆ. ಬೆಳಗಲಿ ಹಾಗೂ ಎಸ್.ವೈ. ದುಂಡರೆಡ್ಡಿ ಕರ್ತವ್ಯ ನಿರ್ವಹಿಸಲಿದ್ದಾರೆ.