ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಲ್ಗುಡಿ ಡೇಸ್’ ಸಿನಿಮಾ ಫೆ. 7ಕ್ಕೆ ತೆರೆಗೆ

ಬಿಆರ್‌ಟಿಎಸ್ ‘ಚಿಗರಿ’ಯಲ್ಲಿ ಪಯಣಿಸಿದ ಚಿನ್ನಾರಿಮುತ್ತ
Last Updated 3 ಫೆಬ್ರುವರಿ 2020, 10:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕುಟುಂಬ ಸಮೇತ ಥಿಯೇಟರ್‌ಗೆ ಹೋಗಿ ವೀಕ್ಷಿಸಬಹುದಾದ ‘ಮಾಲ್ಗುಡಿ ಡೇಸ್’ ಸಿನಿಮಾ ಫೆ. 7ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ’ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.

ಸಿನಿಮಾ ಪ್ರಚಾರಾರ್ಥ ಹುಬ್ಬಳ್ಳಿಗೆ ಸೋಮವಾರ ಭೇಟಿ ನೀಡಿದ್ದ ಅವರು, ‘ಮೇರು ನಟ ಶಂಕರ್‌ನಾಗ್ ಅವರು ಹಿಂದೆ ಕಿರುತೆರೆಗೆ ತಂದಿದ್ದ ಮಾಲ್ಗುಡಿ ಡೇಸ್‌ ಸರಣಿಗೂ ನಮ್ಮ ‘ಮಾಲ್ಗುಡಿ ಡೇಸ್‌’ ಸಿನಿಮಾಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ಚಿತ್ರದ ಪಾತ್ರ ಲಕ್ಷ್ಮಿನಾರಾಯಣ ಮಾಲ್ಗುಡಿ ಎಂಬ ಸಾಹಿತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತಲುಪುವಿಕೆಯ ದೃಷ್ಟಿಯಿಂದ ಮಾಲ್ಗುಡಿ ಎಂಬ ಹೆಸರನ್ನು ಶೀರ್ಷಿಕೆಗೆ ಬಳಸಿಕೊಂಡಿದ್ದೇವೆ’ ಎಂದರು.

‘ಚಿತ್ರದಲ್ಲಿ 70 ವರ್ಷದ ವೃದ್ಧನಾಗಿ ಹಾಗೂ 16 ವರ್ಷದ ಹೈಸ್ಕೂಲು ವಿದ್ಯಾರ್ಥಿಯಾಗಿ ನನ್ನನ್ನು ನಿರ್ದೇಶಕರು ತೋರಿಸಿದ್ದಾರೆ. ಗಂಭೀರತೆ, ಹಾಸ್ಯ, ಪ್ರೀತಿಯನ್ನೊಳಗೊಂಡ ಸಿನಿಮಾ ಯುವಜನರಾದಿಯಾಗಿ ಹಿರಿಯರನ್ನೂ ಸೆಳೆಯಬಲ್ಲದು. ಬದುಕಿನ ವಿವಿಧ ಘಟ್ಟಗಳ ಮೆಲುಕು ಹಾಕುವ ಈ ಸಿನಿಮಾ, ವೀಕ್ಷಕರಿಗೆ ಸಂತಸದ ಕಣ್ಣೀರು ತರಿಸುವುದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿದರು.

ನಿರ್ದೇಶಕ ಕಿಶೋರ್ ಮೂಡಬಿದ್ರೆ ಮಾತನಾಡಿ, ‘ಇದೊಂದು ಕಾಲ್ಪನಿಕ ಕಥೆಯಾಗಿದ್ದು, ನಟ ವಿಜಯ ರಾಘವೇಂದ್ರ ಅವರು ಈ ಪಾತ್ರದಲ್ಲಿ ಸ್ವತಃ ಜೀವಿಸಿದಂತೆ ನಟಿಸಿದ್ದಾರೆ. ನೆನಪಿನ ಅಲೆಗಳಿಗೆ ಜಾರಿಸುವ ಸಿನಿಮಾ, ವೀಕ್ಷಕರಿಗೆ ಮಲೆನಾಡಿನ ಮಳೆಯಲ್ಲಿ ಪಯಣಿಸಿದ ಅನುಭವವನ್ನು ನೀಡುತ್ತದೆ’ ಎಂದರು.

‘ಚಿತ್ರಕ್ಕೆ ಕೆ. ರತ್ನಾಕರ ಕಾಮತ್ ಅವರು ಬಂಡವಾಳ ಹಾಕಿದ್ದಾರೆ. ಆರು ಹಾಡುಗಳಿರುವ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ಉದಯ್ ಲೀಲಾ ಛಾಯಾಗ್ರಹಣ, ಪ್ರದೀಪ್ ನಾಯಕ್ ಸಂಕಲನವಿದೆ. ರಾಜ್ಯದಾದ್ಯಂತ 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಉತ್ತಮವಾದ ಈ ಸಿನಿಮಾವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಕಾಲೇಜುಗಳಿಗೆ ಭೇಟಿ

ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು ಹಾಗೂ ಶಿರೂರು ಪಾರ್ಕ್‌ನಲ್ಲಿರುವ ಸಮರ್ಥ್ ಪಿಯು ಮತ್ತು ಪದವಿ ಕಾಲೇಜಿಗೆ ಭೇಟಿ ನೀಡಿದ ಚಿತ್ರತಂಡ, ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿತು. ನೆಚ್ಚಿನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಜಾಬಿನ ಕಾಲೇಜಿನಿಂದ ಬಿಆರ್‌ಟಿಎಸ್‌ ಚಿಗರಿ ಹತ್ತಿಕೊಂಡು ಕಿಮ್ಸ್‌ವರೆಗೆ ಪಯಣಿಸಿದ ವಿಜಯ ರಾಘವೇಂದ್ರ, ನಂತರ ಐ ಫಿಟ್ನೆಸ್ ಜಿಮ್‌ಗೆ ಭೇಟಿ ನೀಡಿದರು.

ರಜತ್ ಉಳ್ಳಾಗಡ್ಡಿ ಹಾಗೂ ಸಮರ್ಥ್ ಕಾಲೇಜಿನ ಸುಮನ್ ಕುಮಾರ್ ಚಿತ್ರತಂಡಕ್ಕೆ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT