ಹುಬ್ಬಳ್ಳಿ: ಸುಪ್ರೀಂಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಶೀಘ್ರ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಸಾಮರಸ್ಯ ಐಕ್ಯತಾ ಒಕ್ಕೂಟದ ವತಿಯಿಂದ ನಗರದಲ್ಲಿ ಬುಧವಾರ ಮೆರವಣಿಗೆ ನಡೆಸಲಾಯಿತು.
ಇಂದಿರಾ ಗಾಜಿನಮನೆಯಲ್ಲಿರುವ ಬಾಬು ಜಗಜೀವನ್ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಅಂಬೇಡ್ಕರ್ ವೃತ್ತದವರೆಗೆ ಸಾಗಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಒಳಮೀಸಲಾತಿ ಹೋರಾಟದಲ್ಲಿ ಬಲಿದಾನ ಮಾಡಿದವರಿಗೆ ನಮಿಸಲಾಯಿತು.
ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿ, ಒಳಮೀಸಲಾತಿ ವರ್ಗೀಕರಣ ಜಾರಿ ಬಳಿಕವೇ ನೇಮಕಾತಿ, ಮುಂಬಡ್ತಿ ಮುಂದುವರಿಸಬೇಕು ಹಾಗೂ ಡೋಹರ ಸಮುದಾಯವನ್ನು ಮರಳಿ ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಲಾಯಿತು.