ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ರಷ್ಟು ಆಸನ ಭರ್ತಿ ನಮಗೇಕಿಲ್ಲ?: ಕಲ್ಯಾಣ ಮಂಟಪಗಳ ಮಾಲೀಕರ ಪ್ರಶ್ನೆ

ನಿರ್ವಹಣೆ ವೆಚ್ಚ ಸರಿದೂಗಿಸಲಾಗದ ಸ್ಥಿತಿ: ಕಲ್ಯಾಣ ಮಂಟಪಗಳ ಮಾಲೀಕರ ಪ್ರಶ್ನೆ
Last Updated 3 ಫೆಬ್ರುವರಿ 2022, 14:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಿತ್ರಮಂದಿರ, ಸಭಾಭವನ, ಜಿಮ್‌ ಮುಂತಾದವುಗಳಿಗೆ ಇರುವ ಕೋವಿಡ್‌ ನಿಯಮ ನಮಗೇಕಿಲ್ಲ? ಅವರಿಗೆ ಶೇ 50 ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಕಲ್ಯಾಣ ಮಂಟಪಗಳಿಗೇಕೆ ಈ ನಿಯಮ ಅನ್ವಯಿಸಿಲ್ಲ? ಸಾವಿರ ಆಸನ ಸಾಮರ್ಥ್ಯದ ಕಲ್ಯಾಣ ಮಂಟಪಕ್ಕೂ 200 ಮಂದಿಗೆ ಮಾತ್ರವೇ ಏಕೆ ಅವಕಾಶ ನೀಡಲಾಗಿದೆ ಎಂಬುದು ಕಲ್ಯಾಣ ಮಂಟಪಗಳ ಮಾಲೀಕರ ಪ್ರಶ್ನೆ.

ಕೋಟ್ಯಂತರ ಖರ್ಚು ಮಾಡಿ ನಿರ್ಮಿಸಿದ ಕಲ್ಯಾಣ ಮಂಟಪಗಳು ಬೀಗ ಹಾಕಬೇಕಾದ ಸ್ಥಿತಿಗೆ ತಲುಪಿವೆ. ಅವುಗಳನ್ನೇ ನಂಬಿಕೊಂಡಿರುವ ಕಾರ್ಮಿಕರು, ಅಡುಗೆ ಮಾಡುವವರು, ಅಲಂಕಾರದವರು, ಓಲಗದವರು ಸೇರಿದಂತೆ ಸಾವಿರಾರು ಕುಟುಂಬಗಳು ಉದ್ಯೋಗ ಕಳೆದುಕೊಳ್ಳುತ್ತವೆ ಎನ್ನುತ್ತಾರೆ ಕಲ್ಯಾಣ ಮಂಟಪಗಳ ಮಾಲೀಕರು.

‘200 ರಿಂದ 1,500 ಜನರ ಸಾಮರ್ಥ್ಯದ ಕಲ್ಯಾಣ ಮಂಟಪಗಳಿವೆ. ಸಾವಿರ ಆಸನ ಹೊಂದಿರುವ ಮಂಟಪಗಳಲ್ಲಿಯೂ 200 ಜನರಿಗೆ ಸೀಮಿತಗೊಳಿಸಿರುವುದರಿಂದ ಜನರು ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುತ್ತಿಲ್ಲ. ಇಲ್ಲಿಯೂ ಶೇ 50 ರಷ್ಟು ಅನ್ವಯಿಸಿದರೆ, ಅನುಕೂಲ ಆಗುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿಯ–ಧಾರವಾಡ ಕಲ್ಯಾಣ ಮಂಟಪ ಓನರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಬಸವರಾಜ ಹೆಬಸೂರ.

ವಿದ್ಯುತ್‌ ಬಿಲ್‌, ಮ್ಯಾನೇಜರ್, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರ ವೇತನ ಸೇರಿದಂತೆ ಕಲ್ಯಾಣ ಮಂಟಪ ನಿರ್ವಹಣೆಗೆ ತಿಂಗಳಿಗೆ ಒಂದು ಲಕ್ಷ ಖರ್ಚಾಗುತ್ತದೆ. ಮೂರು ವರ್ಷಗಳಿಂದ ಇಲ್ಲಿ ನಡೆಯುವುದಕ್ಕಿಂತ ರದ್ದಾದಮದುವೆಗಳ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಅವರು.

‘ಮುಂಗಡವಾಗಿ ಕಲ್ಯಾಣ ಮಂಟಪ ಕಾಯ್ದಿರಿಸಿದವರು ಈಗ ಮಂಟಪ ರದ್ದು ಮಾಡಿದ್ದಾರೆ. ಕೆಲವರು ಮನೆ ಮುಂದೆಯೇ ಮದುವೆ ಮಾಡುತ್ತಿದ್ದರೆ, ಇನ್ನೂ ಕೆಲವರು ಮುಂದೂಡಿದ್ದಾರೆ. ಮುಂಗಡ ಹಣ ವಾಪಸ್‌ ನೀಡುವುದೇ ಕೆಲಸವಾಗಿದೆ. ಇದರಿಂದಾಗಿ ಮಂಟಪಗಳ ನಿರ್ವಹಣೆಯೇ ಕಷ್ಟವಾಗಿದೆ’ ಎಂದು ಸಂಕಷ್ಟ ಬಿಚ್ಚಿಟ್ಟರು.

‘ಡಿಸೆಂಬರ್‌ನಲ್ಲಿ ಎರಡು ಕಾರ್ಯಕ್ರಮಗಳು ನಡೆದವು. ಆ ನಂತರ ಯಾರೂ ಬಂದಿಲ್ಲ. ಜನವರಿಯಲ್ಲಿಯೂ ಕೋವಿಡ್‌ ನಿಯಮಗಳಿಂದಾಗಿ ಕಾರ್ಯಕ್ರಮ ನಡೆದಿಲ್ಲ’ ಎನ್ನುತ್ತಾರೆ ಗೋಕುಲ ಗಾರ್ಡನ್‌ ಮ್ಯಾನೇಜರ್‌ ರಮೇಶ.

ಮದುವೆ ಸೀಸನ್‌ ಅಲ್ಲದ ಸಂದರ್ಭದಲ್ಲಿ ಕಲ್ಯಾಣ ಮಂಟಗಳನ್ನು ವಿವಿಧ ವಸ್ತುಗಳ ಮಾರಾಟ ಮೇಳಗಳಿಗೆ ಬಾಡಿಗೆ ನೀಡಲಾಗುತ್ತಿತ್ತು. ಕೋವಿಡ್‌ನಿಂದಾಗಿ ಅವುಗಳೂ ನಡೆಯುತ್ತಿಲ್ಲ.

*
ನಿರ್ವಹಣೆಗೆ ಲಕ್ಷಾಂತರ ವೆಚ್ಚ
ಸಾವಿರಾರು ಕುಟುಂಬಗಳಿಗೆ ಸಂಕಷ್ಟ
ಮುಂಗಡ ಹಣ ವಾಪಸ್‌ ನೀಡುವುದೇ ಕೆಲಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT