ಧಾರವಾಡ: ‘ಗೋಡೆ ಕುಸಿದು ಮೃತಪಟ್ಟ ವೆಂಕಾಟಾಪುರದ ಯಲ್ಲಪ್ಪ ಹಿಪ್ಪಿಯವರ (45) ಅವರ ಕುಟುಂಬಕ್ಕೆ ಸರ್ಕಾರವು ₹5 ಲಕ್ಷ ಪರಿಹಾರ ವಿತರಿಸಿದ್ದು, ರಾಷ್ಟ್ರೀಯ ಕೌಟುಂಬಿಕ ಯೋಜನೆಯಡಿ ಅವರ ಪತ್ನಿ ಹನುಮವ್ವ ಅವರಿಗೆ ವಿಧವಾವೇತನ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ತಾಲ್ಲೂಕಿನ ವೆಂಕಟಾಪುರ ಗ್ರಾಮದ ಸಿದ್ಧರ ಕಾಲೊನಿಯಲ್ಲಿ ಗೋಡೆ ಕುಸಿದ ಪ್ರದೇಶವನ್ನು ಭಾನುವಾರ ವೀಕ್ಷಿಸಿ, ಯಲ್ಲಪ್ಪ ಅವರ ಪತ್ನಿ, ಪುತ್ರಿಯರಾದ ಯಲ್ಲವ್ವ, ಸುಮಿತ್ರಾ ಮತ್ತು ಪುತ್ರ ಶ್ರೀಧರ ಅವರಿಗೆ ಸಾಂತ್ವನ ಹೇಳಿ, ಧನ ಸಹಾಯ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿರಂತರ ಮಳೆಯಿಂದ ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಸಾವು-ನೋವು ಉಂಟಾಗಿವೆ. ಜಿಲ್ಲೆಯಲ್ಲೂ ಸಾವು ಸಂಭವಿಸಿದ್ದು ದುಃಖದ ಸಂಗತಿ. ಯಲ್ಲಪ್ಪ ಅವರ ಸ್ವಂತ ಮನೆ ಬಿದ್ದಿಲ್ಲ. ಪಕ್ಕದ ಮನೆಯ ಗೋಡೆ ಗುಡಾರದ ಗುಡಿಸಲಿನ ಮೇಲೆ ಕುಸಿದು ಅವಘಡ ಸಂಭವಿಸಿದೆ. ಯಲ್ಲಪ್ಪ ಅವರ ಮನೆ ಸೋರುತ್ತಿದ್ದು, ಸರ್ಕಾರದಿಂದ ನವೀಕರಣ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದರು.
ಇನ್ನೂ ಮೂರ್ನಾಲ್ಕು ದಿನ ಮಳೆ ಬೀಳುವ ಲಕ್ಷಣವಿದ್ದು, ಮಣ್ಣಿನ ಮಾಳಿಗೆ-ಗೋಡೆ ಮನೆಗಳಲ್ಲಿ ವಾಸಿಸುವ ಜನರು ಜಾಗ್ರತೆ ವಹಿಸಬೇಕು. ಜಿಲ್ಲೆಯಲ್ಲಿ ಶಿಥಿಲಗೊಂಡ ಮನೆಗಳ ಬಗ್ಗೆ ಕಂದಾಯ ಇಲಾಖೆ ಜೊತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಮಾಜಿ ಶಾಸಕ ಅಮೃತ ದೇಸಾಯಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ತಹಶೀಲ್ದಾರ್ ಡಿ.ಎಚ್.ಹೂಗಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಸವಿತಾ ಅಮರಶೆಟ್ಟಿ, ಕಲ್ಮೇಶ ಹಾವೇರಿಪೇಟ್, ಮಹಾದೇವಪ್ಪ ದಂಡಿನ, ಬಸವರಾಜ ಹವಾಲ್ದಾರ್ ಇದ್ದರು.
Cut-off box - ‘ಸರ್ಕಾರದ ಬಳಿ ಹಣವಿಲ್ಲ’ ‘ರಾಜ್ಯದಲ್ಲಿ ಮಳೆ ಪ್ರವಾಹದಿಂದ ಸಾಕಷ್ಟು ಹಾನಿ ಸಂಭವಿಸಿದೆ. ಆದರೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ‘ಕಾಂಗ್ರೆಸ್ ಸರ್ಕಾರ ಮುಂದಾಲೋಚನೆ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಇದರಿಂದಾಗಿ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮಳೆಯಿಂದ ಪೂರ್ಣ ಪ್ರಮಾಣ ಹಾನಿಯಾದ ಮನೆಗೆ ಹಿಂದಿನ ಯಡಿಯೂರಪ್ಪ ಅವರ ಸರ್ಕಾರ ₹5 ಲಕ್ಷ ಪರಿಹಾರ ನೀಡಿತ್ತು. ಈಗಿನ ರಾಜ್ಯ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಹಣ ಕೊಟ್ಟು ಕೈತೊಳೆದುಕೊಳ್ಳುತ್ತಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.