ಗುರುವಾರ , ಡಿಸೆಂಬರ್ 1, 2022
20 °C
ಕಸದ ಡಬ್ಬಿಗೆ, ತಡೆಗೋಡೆಗೆ ‘ಪೇಮೇಯರ್‌’ ಪೋಸ್ಟರ್‌ ಅಂಟಿಸಿದ ಕಾಂಗ್ರೆಸ್‌ ಕಾರ್ಯಕರ್ತರು

ಪೌರಸನ್ಮಾನದಲ್ಲಿ ಅವ್ಯವಹಾರ; ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೆಂಗಳೂರಿಗೆ ಸೀಮಿತವಾಗಿದ್ದ ಪೋಸ್ಟರ್‌ ಅಭಿಯಾನ, ಇದೀಗ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಆರಂಭವಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಮೂರು ದಿನಗಳ ಹಿಂದೆ ನಗರದಲ್ಲಿ ನಡೆದ ‘ರಾಷ್ಟ್ರಪತಿ ಪೌರಸನ್ಮಾನ ಕಾರ್ಯಕ್ರಮದ ಖರ್ಚು–ವೆಚ್ಚದಲ್ಲಿ ಅವ್ಯವಹಾರವಾಗಿದೆ’ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ಬುಧವಾರದಿಂದ ನಗರದಲ್ಲಿ ‘ಪೇ–ಮೇಯರ್‌’ ಅಭಿಯಾನ ಹಮ್ಮಿಕೊಂಡಿದ್ದಾರೆ.

ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ನಗರದ ವಿವಿಧೆಡೆ ಮೇಯರ್‌ ಈರೇಶ ಅಂಚಟಗೇರಿ ಅವರ ಭಾವಚಿತ್ರದ ಜೊತೆ ಕ್ಯೂಆರ್‌ ಕೋಡ್‌ ಇರುವ ‘ಪೇ–ಮೇಯರ್‌’ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆ ಪೋಸ್ಟರ್‌ಗಳನ್ನು ಹಂಚಿಕೊಂಡು, ‘ಪೌರಸನ್ಮಾನ ಕಾರ್ಯಕ್ರಮದಲ್ಲಿ ದುಂದುವೆಚ್ಚವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈರೇಶ ಅಂಚಟಗೇರಿ ಅವರೇ, ನಿಮ್ಮ ಲಂಚಾವತಾರ ಸಾರುವ ಪೇ–ಮೇಯರ್‌ ಪೋಸ್ಟರ್‌ ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ. ರಾಷ್ಟ್ರಪತಿ ಅವರ ಪೌರ ಸನ್ಮಾನದ ಹೆಸರಿನಲ್ಲಿ ದುಂದುವೆಚ್ಚ ಮಾಡಿ ಪೆಂಡಾಲ್‌ ಹಾಕಿದ ನಂತರ ಟೆಂಡರ್‌ ಕರೆದು ಹುಬ್ಬಳ್ಳಿಯ ಮಾನ ಕಳೆದಿದ್ದೀರಿ. ನೀವು ರಾಜೀನಾಮೆ ನೀಡಬೇಕು’ ಎಂದು ರಜತ್‌, ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡು, ಪೇ–ಮೇಯರ್‌ ಪೋಸ್ಟರ್‌ ಹಾಕಿ ‘ರಾಷ್ಟ್ರಪತಿ’ ಮತ್ತು ‘ಬಿಜೆಪಿ ಕರ್ನಾಟಕ’ಕ್ಕೆ ಟ್ಯಾಗ್‌ ಮಾಡಿದ್ದಾರೆ.

‘ಪಾಲಿಕೆ ಸದಸ್ಯರ‍್ಯಾರಾದರೂ ಅಭಿವೃದ್ಧಿ ಕಾಮಗಾರಿಗೆ ಮೇಯರ್‌ ಬಳಿ ₹5 ಲಕ್ಷ ಕೇಳಿದರೆ, ವಾರ್ಡ್‌ನಲ್ಲಿ ತೆರಿಗೆ ಹಣ ಸಂಗ್ರಹಿಸಿಕೊಂಡು ಬನ್ನಿ ಎಂದು ಹೇಳುತ್ತಾರೆ. ₹10 ಲಕ್ಷ ಕೇಳಿದರೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಮಾಡಿ ಎನ್ನುತ್ತಾರೆ. ಯಾರನ್ನೂ ವಿಶ್ವಾಸಕ್ಕೆ ಪಡೆಯದೆ, ಸಾಮಾನ್ಯ ಸಭೆಯನ್ನೂ ಕರೆಯದೆ, ದಿಢೀರನೇ ಪೌರಸನ್ಮಾನ ಕಾರ್ಯಕ್ರಮಕ್ಕೆ ನಿರ್ಧಾರ ಕೈಗೊಳ್ಳುತ್ತಾರೆ. ಜಿಮ್ಖಾನ ಮೈದಾನದವರು ಸ್ಥಳ ಉಚಿತವಾಗಿ ನೀಡಿದ್ದಾರೆ, ಅದಮ್ಯ ಚೇತನದವರು ಊಟೋಪಾಹಾರದ ವ್ಯವಸ್ಥೆ ಮಾಡಿದ್ದಾರೆ ಎಂದು ಮೇಯರ್‌ ಅವರೇ ಹೇಳಿದ್ದಾರೆ. ಇವೆರಡೂ ಉಚಿತವಾಗಿದೆ ಎಂದಾಗ, ಪೆಂಡಾಲ್‌, ಆಸನಗಳು, ಫ್ಲೆಕ್ಸ್‌, ಬ್ಯಾನರ್‌, ಜಾಹೀರಾತಿಗೆ ₹1.30 ಕೋಟಿ ಹೇಗೆ ಖರ್ಚಾಗಲು ಸಾಧ್ಯ? ಅದು ಸಾರ್ವಜನಿಕರು ಪಾಲಿಕೆಗೆ ಪಾವತಿಸಿದ ತೆರಿಗೆ ಹಣ. ಅಷ್ಟೊಂದು ದುಂದುವೆಚ್ಚ ಮಾಡುವುದನ್ನು ಬಿಟ್ಟು, ಗಟಾರ ನಿರ್ಮಾಣ, ಬೀದಿ ದೀಪ ನಿರ್ವಹಣೆ, ಪೌರ ಕಾರ್ಮಿಕರಿಗೆ ವೇತನ ಪಾವತಿಸಬಹುದಿತ್ತು. ಇವರು ದುಡ್ಡು ತಿನ್ನುವುದಕ್ಕಾಗಿ ಪೌರ ಸನ್ಮಾನ ಕಾರ್ಯಕ್ರಮ ಮಾಡಿರುವುದು ಸರಿಯೇ? ಲೆಕ್ಕವಿದ್ದರೆ ನೀಡಲಿ, ಇಲ್ಲ ರಾಜೀನಾಮೆ ನೀಡಲಿ’ ಎಂದು ರಜತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೌರ ಸನ್ಮಾನ ಕಾರ್ಯಕ್ರಮದ ಮುನ್ನಾದಿನ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ ಅವರು, ‘ಮೇಯರ್‌ ಪ್ರತಿಯೊಂದಕ್ಕೂ ದುಡ್ಡು ಎನ್ನುತ್ತ ಕಮಿಷನ್‌ ವ್ಯವಹಾರ ನಡೆಸುತ್ತಿದ್ದಾರೆ. ದುಂದುವೆಚ್ಚ ಮಾಡಿ ಪೌರಸನ್ಮಾನ ಕಾರ್ಯಕ್ರಮ ಆಯೋಜಿಸುವ ಅಗತ್ಯವಿತ್ತೇ’ ಎಂದು ಪ್ರಶ್ನಿಸಿದ್ದರು.

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು