ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆ ಗರಿಗೆದರಿದ ರಾಜಕೀಯ ಚಟುವಟಿಕೆ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಆಯ್ಕೆಗೆ ಚುನಾವಣೆ ಘೋಷಣೆ
Last Updated 10 ನವೆಂಬರ್ 2021, 12:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯತ್ವ ಸ್ಥಾನ ಆಯ್ಕೆಗೆ ನಡೆಯುವ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಚುನಾವಣೆ ಘೋಷಣೆಗೆ ಮುನ್ನವೇ ಎರಡೂ ಪಕ್ಷಗಳ ಮುಖಂಡರು ಹಲವು ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸಿದ್ದಾರೆ. ಕಾಂಗ್ರೆಸ್‌, ಅಭ್ಯರ್ಥಿಗಳಿಂದ ಅರ್ಜಿಯನ್ನೂ ಆಹ್ವಾನಿಸಿತ್ತು. ಒಂದು ಡಜನ್‌ಗೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆ ಘೋಷಣೆಯೊಂದಿಗೆ ಆಕಾಂಕ್ಷಿಗಳು ಮತ್ತಷ್ಟು ಚುರುಕಾಗಿದ್ದಾರೆ.

ಡಿ.10ಕ್ಕೆ ಚುನಾವಣೆ ನಡೆಯಲಿದ್ದು, ಧಾರವಾಡ ಅವಿಭಜಿತ ಜಿಲ್ಲೆಯಿಂದ (ಧಾರವಾಡ, ಹಾವೇರಿ, ಗದಗ ಜಿಲ್ಲೆ) ವಿಧಾನ ಪರಿಷತ್‌ಗೆ ಇಬ್ಬರು ಆಯ್ಕೆಯಾಗಲು ಅವಕಾಶವಿದೆ. ಕಳೆದ ಬಾರಿ ಬಿಜೆಪಿಯಿಂದ ಪ್ರದೀಪ ಶೆಟ್ಟರ್‌, ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ ಆಯ್ಕೆಯಾಗಿದ್ದರು. ಪಕ್ಷದಿಂದ ಇಬ್ಬರು ಸ್ಪರ್ಧಿಸಲು ಅವಕಾಶವಿದ್ದರೂ, ಒಬ್ಬೊಬ್ಬರನ್ನೇ ಕಣಕ್ಕಿಳಿಸುವ ಮೂಲಕ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿನ ಸುಲಭದ ಹಾದಿ ಆಯ್ಕೆ ಮಾಡಿಕೊಂಡಿದ್ದವು.

ಮಾನೆ ಜಾಗಕ್ಕೆ ಯಾರು?: ವಿಧಾನ ಪರಿಷತ್‌ ಸದಸ್ಯರಾಗಿದ್ದ ಶ್ರೀನಿವಾಸ ಮಾನೆ ಅವರು ಇತ್ತೀಚೆಗೆ ನಡೆದ ಹಾನಗಲ್‌ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಧಾನಸಭೆ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಬೇಕಿದೆ. ಹಾಗಾಗಿ, ಪಕ್ಷದಲ್ಲಿ ಪೈಪೋಟಿ ತೀವ್ರವಾಗಿದೆ.

ಶಾಸಕ ಜಗದೀಶ ಶೆಟ್ಟರ್‌ ಅವರ ಸಹೋದರರಾಗಿರುವ ಪ್ರದೀಪ ಶೆಟ್ಟರ್‌ ಈ ಬಾರಿಯೂ ಆಕಾಂಕ್ಷಿಯಾಗಿದ್ದಾರೆ. ಸ್ಪರ್ಧೆಗೆ ಸಿದ್ಧತೆಗಳನ್ನೂ ಸದ್ದಿಲ್ಲದೆ ಮಾಡುತ್ತಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್‌ ಅವರಿಗೇ ಅವಕಾಶ ಕೊಡಲಿದೆಯೇ ಅಥವಾ ಬೇರೆ ಚುನಾವಣೆಗಳಲ್ಲಿ ಮಾಡಿದಂತೆ ಇಲ್ಲಿಯೂ ಹೊಸಬರಿಗೆ ಅವಕಾಶ ನೀಡುವ ಮೂಲಕ ಪ್ರಯೋಗಕ್ಕೆ ಮುಂದಾಗಲಿದೆಯೇ ನೋಡಬೇಕಿದೆ.

ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವರೇ?: ಧಾರವಾಡ ಅವಿಭಜಿತ ಜಿಲ್ಲೆಯಲ್ಲಿ ನಡೆಯುವ ಚುನಾವಣೆಗೆ ಇಬ್ಬರು ಆಯ್ಕೆಯಾಗಲು ಅವಕಾಶವಿರುವುದರಿಂದ ಇಬ್ಬರನ್ನು ಕಣಕ್ಕಿಳಿಸುವ ಬಿಜೆಪಿ ಅಥವಾ ಕಾಂಗ್ರೆಸ್‌ ಮುಂದಾಗಲಿವೆಯೇ ಎಂಬ ಕುತೂಹಲವಿದೆ.

ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ನೋಡಿದರೆ, ಒಬ್ಬರನ್ನು ಮಾತ್ರ ಕಣಕ್ಕಿಳಿಸುವ ಲಕ್ಷಣಗಳಿವೆ. ಕೊನೆ ಗಳಿಗೆಯ ರಾಜಕೀಯ ಬೆಳವಣಿಗೆಯಿಂದ ಪಕ್ಷಗಳ ನಿಲುವು ಬದಲಾಗುವುದು ನೋಡಬೇಕು.

ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನ ಮಾಡಬಹುದಾಗಿದೆ. ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರಿಗೂ ಮತದಾನದ ಹಕ್ಕಿತ್ತು. ಆದರೆ, ಅವಧಿ ಮುಗಿದಿರುವುದರಿಂದ ಅವರು ಮತದಾನಕ್ಕೆ ಅವಕಾಶವಿಲ್ಲ.

ಟಿಕೆಟ್‌ ಪಡೆಯಲು ಆಕಾಂಕ್ಷಿಗಳು ಈಗಾಗಲೇ ತಮ್ಮ ಮುಖಂಡರ ಮೂಲಕ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ. ಬುಧವಾರದಿಂದ ಬೆಂಗಳೂರು, ದೆಹಲಿ ಯಾತ್ರೆಯೂ ಆರಂಭವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT