ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಬೆಟಗೇರಿ | ಮುಂಗಾರು: ಚುರುಕುಗೊಂಡ ಬಿತ್ತನೆ

ರಮೇಶ ಓರಣಕರ
Published 12 ಜೂನ್ 2024, 7:16 IST
Last Updated 12 ಜೂನ್ 2024, 7:16 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮದ ರೈತಾಪಿ ಜನರು ಮುಂಗಾರು ಬಿತ್ತನೆಗೆ ಸಿದ್ದತೆ ಮಾಡ ತೊಡಗಿದ್ದು, ಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ. ಕಳೆದೊಂದು ವಾರ ಸುರಿದ ಮಳೆಗೆ ಕೃಷಿ ಭೂಮಿ ಹಸಿಯಾಗಿ ಈಗ ಹದಕ್ಕೆ ಬಂದಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿವೆ.

ಕಳೆದ ಹತ್ತುದಿನಗಳ ಹಿಂದೆ ಅಡ್ಡ ಮಳೆ, ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಈಗ ರೈತಾಪಿ ಜನ ರಾಸಾಯನಿಕ ಗೊಬ್ಬರ ಖರೀದಿಸಲು ಕೃಷಿ ಪತ್ತಿನ ಸಹಕಾರ ಸಂಘ, ಅಗ್ರೋ ಕೇಂದ್ರ, ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಖರೀದಿಸುತ್ತಿದ್ದಾರೆ.

ಹದಿನೈದು ದಿನದ ಹಿಂದೆ ಉಪ್ಪಿನಬೆಟಗೇರಿ ಹಾಗೂ ಸುತ್ತಲಿನ ಗ್ರಾಮದ ರೈತರು ಬೀಜ, ಗೊಬ್ಬರ ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಇನ್ನೂ ಕೆಲ ರೈತರು ಮುಂಗಾರು ಮಳೆ ಸುರಿದ ಮೇಲೆ ಖರೀದಿಸಿದರಾಯ್ತು ಎಂದು ಬಿಟ್ಟಿದ್ದರು. ಈಗ ಉತ್ತಮ ಮಳೆಯಾಗಿ ಬಿತ್ತಲು ಹದ ಬಂದಿರೊದ್ರಿಂದ ರೈತರು ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಸೋಯಾಬೀನ, ಶೇಂಗಾ ಮೊದಲಾದ ಬೆಳೆಗಳ ಬಿತ್ತನೆ ಮಾಡಲು ಮುಂದಾಗಿದ್ದೇವೆ. ರಾಸಾಯನಿಕ ಗೊಬ್ಬರದ ಸಲುವಾಗಿ ಆದಾರ ಕಾರ್ಡ ಸಮೇತ ತೆರಳಿ ಸರತಿ ಸಾಲಲ್ಲಿ ನಿಂತು ಖರೀದಿ ಮಾಡಿದ್ದೇವೆ. 50 ಕೆ.ಜಿ ಪ್ಯಾಕೇಟ್   ಡಿಎಪಿ ಗೊಬ್ಬರಕ್ಕೆ ₹1350 ಇದೆ. ಎರಡು ಪ್ಯಾಕೇಟ್ ಗೊಬ್ಬರಕ್ಕೆ ₹ 225 ರ ನ್ಯಾನೋ ಯೂರಿಯಾದ ಔಷಧಿ ಡಬ್ಬಿ ಮತ್ತು ಮೂರು, ನಾಲ್ಕು ಪ್ಯಾಕೇಟ್‌ಗೆ ₹ 600 ದರದ ಪೋಟ್ಯಾಶ್ ಗೊಬ್ಬರದ ಪ್ಯಾಕೇಟ್ ಹೆಚ್ಚುವರಿಯಾಗಿ ಖರೀದಿಸಬೇಕೆಂದು ನಿಯಮ ಮಾಡಿದ್ದಾರೆ. ಮೊದಲೇ ರಾಸಾಯನಿಕ ಗೊಬ್ಬರ ಸಿಗುವುದು ಕಷ್ಟವಾಗಿದೆ. ಆದ್ದರಿಂದ ಸೋಸಾಯಿಟಿ ನಿಯಮದಂತೆ ಖರೀದಿಸುವುದು ಅನೀವಾರ್ಯವಾಗಿದೆ ಎಂದು ರೈತ ಬಸವರಾಜ ಬಿಸ್ನಾಳ ತಿಳಿಸಿದರು.

ಉಪ್ಪಿನಬೆಟಗೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 240 ಪ್ಯಾಕೇಟ್ ರಸಗೊಬ್ಬರ ದಾಸ್ತಾನಿತ್ತು. ಬೆಳಿಗ್ಗೆಯಿಂದ ಸರತಿ ಸಾಲಲ್ಲಿ ನಿಂತು ಸಿಗಬಹುದೆಂದು ನಿರೀಕ್ಷಿಸಿದ್ದೇವು. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಮುಂದೆ ಸಾಲಲ್ಲಿ ನಿಂತ ರೈತರು ಖರೀದಿಸಿದ್ದರಿಂದ ಗೊಬ್ಬರ ಖಾಲಿಯಾಯಿತು. ಅನಿವಾರ್ಯವಾಗಿ ದೊಡವಾಡ, ಬೆಳವಡಿ, ಗರಗ ಸೊಸೈಟಿ ಇಲ್ಲವೇ ಅಗ್ರೋ ಕೇಂದ್ರಕ್ಕೆ ಹೋಗಿ ಖರೀದಿಸಿ ಬಾಡಿಗೆ ವಾಹನದಲ್ಲಿ ತರಬೇಕಾದ ಪರಿಸ್ಥಿತಿ ಬಂದಿದೆ ಎಂದು ಪುಡಕಲಕಟ್ಟಿ, ಕಲ್ಲೆ, ಹನುಮನಾಳ ಗ್ರಾಮದ ರೈತರು ತಮ್ಮ ಅಳಲು ತೊಡಿಕೊಂಡರು.

ಸಹಕಾರ ಸಂಘಕ್ಕೆ ನಷ್ಟ..

‘ಧಾರವಾಡದ ಕೃಷಿ ಸಹಯ ಅಭಿವೃದ್ದಿ ಕೇಂದ್ರದಿಂದ ರಾಸಾಯನಿಕ ಗೊಬ್ಬರ ನಮ್ಮ ಸಂಘಕ್ಕೆ ಹಂಚಿಕೆ ಮಾಡುತ್ತಾರೆ. ಅವರು ಹೆಚ್ಚುವರಿಯಾಗಿ ನ್ಯಾನೋ ಯೂರಿಯಾ ಔಷಧಿ ಬಾಕ್ಸ್ ಮತ್ತು ಪೋಟ್ಯಾಶ್ ಗೊಬ್ಬರ ಕಳಿಸುತ್ತಾರೆ. ಅವರು ಹೇಳಿದ ನಿಯಮದಂತೆ ಕೊಡಬೇಕಾಗಿದೆ. ರೈತರು ಹೆಚ್ಚುವರಿ ವಸ್ತು ಖರೀದಿಸಲು ಹಿಂಜರಿದರೆ ಸಹಕಾರ ಸಂಘ ನಷ್ಟ ಅನುಭವಿಸುತ್ತದೆ. ಒಂದು ವೇಳೆ ಹೆಚ್ಚುವರಿಯಾಗಿ ನ್ಯಾನೊ ಔಷಧಿ ಪೋಟ್ಯಾಶ್ ಗೊಬ್ಬರ ಬೇಡವೆಂದರೆ ನಮ್ಮ ಸಹಕಾರ ಸಂಘಕ್ಕೆ ಡಿಎಪಿ ಗೊಬ್ಬರ ಹಂಚಿಕೆ ಮಾಡುವುದಿಲ್ಲವೆಂದು ಹೇಳುತ್ತಾರೆ’ ಎಂದು ನವಲಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಲಿಂಗಪ್ಪ ಹೇಳಿದರು. 

ಚಿತ್ರಾವಳಿ: ಉಪ್ಪಿನಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮುಂದೆ ರೈತರು ಗೊಬ್ಬರ ಖರೀದಿಸಲು ನಿಂತಿದ್ದಾರೆ.
ಚಿತ್ರಾವಳಿ: ಉಪ್ಪಿನಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮುಂದೆ ರೈತರು ಗೊಬ್ಬರ ಖರೀದಿಸಲು ನಿಂತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT