ಗುರುವಾರ , ಮೇ 6, 2021
25 °C
ಅನೈತಿ ಸಂಬಂಧ; ವೇಲ್‌ ಬಿಗಿದು ಮಕ್ಕಳ ಹತ್ಯೆ

ಮಕ್ಕಳ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅನೈತಿಕ ಸಂಬಂಧ ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದು ತನ್ನೆರಡು ಮಕ್ಕಳನ್ನು ಕೊಲೆಗೈದ ತಾಯಿಗೆ ಇಲ್ಲಿನ ಐದನೇ ಸೆಷನ್ಸ್‌ ಕೋರ್ಟ್‌ ಬುಧವಾರ ಜೀವಾವಧಿ ಜೈಲು ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಿದೆ.

ಹಳೇಹುಬ್ಬಳ್ಳಿ ನವಯೋಧ್ಯಾನಗರದ ಪ್ರೇಮಾ ಅಲಿಯಾಸ್‌ ಚೈತ್ರಾ ಹುಲಕೋಟಿ ಶಿಕ್ಷೆಗೆ ಒಳಗಾದ ಮಹಿಳೆ. 2018ರ ಡಿ.11ರಂದು ಪ್ರೇಮಾ ನಾಲ್ಕು ವರ್ಷದ ಹೆಣ್ಣು ಮಗು ರೋಹಿಣಿ ಮತ್ತು ಐದು ವರ್ಷ ಮಗ ರೋಹಿತ್‌ನನ್ನು ಶಾಲೆಯ ಗುರುತು ಪತ್ರದ ದಾರ ಮತ್ತು ವೇಲ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಳು. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಅವಳ ಪತಿ ಪರಶುರಾಮ ಹುಲಕೋಟಿ ಪ್ರಕರಣ ದಾಖಲಿಸಿದ್ದರು.

ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.

ಮೂವರಿಗೆ ಜೈಲು ಶಿಕ್ಷೆ: ನಕಲಿ ಔಷಧ ಮಾರಾಟ ಮಾಡುತ್ತಿದ್ದ  ಔಷಧ ಮಳಿಗೆಯ ಇಬ್ಬರು ಮಾಲೀಕರು ಹಾಗೂ ಅವುಗಳನ್ನು ಪೂರೈಸುತ್ತಿದ್ದ ಬೆಂಗಳೂರಿನ ಫಾರ್ಮಾ ಕಂಪನಿ ಮಾಲೀಕರೊಬ್ಬರಿಗೆ ಒಂದನೇ ಸೆಷನ್ಸ್‌ ಕೋರ್ಟ್‌ ಮೂರು ವರ್ಷ ಜೈಲು ಶಿಕ್ಷೆ ತಲಾ ₹ 10ಸಾವಿರ ದಂಡ ವಿಧಿಸಿದೆ.

ಹುಬ್ಬಳ್ಳಿ ಜೆಸಿ ನಗರದ ರಾಧಾ ಫಾರ್ಮಾ ಪ್ರೊಡಕ್ಸನ್‌ ಔಷಧ ಮಳಿಗೆ ಮಾಲೀಕರಾದ ಗೋವಿಂದ ತ್ರಿವೇದಿ, ಜಗದೀಶ ತ್ರಿವೇದಿ ಮತ್ತು ಬೆಂಗಳೂರಿನ ದೀಪಕ ಇಂಟರ್‌ನ್ಯಾಷನಲ್‌ ಫಾರ್ಮಾಸುಟಿಕಲ್ಸ್‌ನ ವಿಕ್ರಮ ಭೋಜಾನಿ ಶಿಕ್ಷೆಗೆ ಒಳಗಾದ ಅಪರಾಧಿಗಳು.

2005ರಲ್ಲಿ ಔಷಧ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶರಣಬಸಪ್ಪ ಹನುಮನಾಳ ಅವರು, ತಪಾಸಣೆ ನಡೆಸಿದಾಗ ಐದು ಬಗೆಯ ನಕಲಿ ಔಷಧಿಗಳು ದೊರೆತಿದ್ದವು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ ಚೌಗಲೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆದರೆ, ಪಿಕಾಕ್‌ ಫಾರ್ಮಾ ಕಂಪನಿಯ ಸತೀಶ ಶರ್ಮಾ ತಲೆಮರೆಸಿಕೊಂಡಿದ್ದು, ಪ್ರಕರಣ ಪ್ರತ್ಯೇಕಿಸಲಾಗಿದೆ. ಪ್ರಕರಣದಲ್ಲಿ ಸಹಾಯಕ ಔಷಧ ನಿಯಂತ್ರಕ ಕೆ.ಎಸ್‌. ಮಲ್ಲಿಕಾರ್ಜುನ ಅನುಸರಣಾಧಿಕಾರಿ ಆಗಿದ್ದರು.

ಹತ್ಯೆ; ಅಪರಾಧಿಗೆ ಶಿಕ್ಷೆ: ಜಮೀನಿಗೆ ಬರುವುದು ಬೇಡ ಎಂದು ಕೆಲಸ ಬಿಡಿಸಿದ್ದಕ್ಕೆ ಕೋಪಗೊಂಡು ಮಹಿಳೆಯನ್ನು ಹತ್ಯೆ ಮಾಡಿದ ಅಪರಾಧಿಗೆ, ಐದನೇ ಸೆಷನ್ಸ್‌ ಕೋರ್ಟ್‌ ಬುಧವಾರ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿದೆ.

ತಾಲ್ಲೂಕಿನ ಬಮ್ಮಸಮುದ್ರ ಗ್ರಾಮದ ಖಾದರಸಾಬ್‌ ಮನಿಯಾರ್‌ ಶಿಕ್ಷೆಗೆ ಒಳಗಾದ ವ್ಯಕ್ತಿ. ಅದೇ ಗ್ರಾಮದ ನೀಲವ್ವ ತಿಪ್ಪಣ್ಣವರ ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದನು. ಕಳವು ಮಾಡುತ್ತಾನೆ ಎಂದು ಅವರು ಕೆಲಸ ಬಿಡಿಸಿದ್ದರು. ಅದರಿಂದ ಕೋಪಗೊಂಡ ಖಾದರಸಾಬ್‌, ನೀಲವ್ವ ಅವರ ಮನೆ ಎದುರಿನ ರಸ್ತೆಬಳಿ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದನು. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್‌. ಗಂಗಾಧರ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.

ಆತ್ಮಹತ್ಯೆಗೆ ಕಾರಣ; 5ವರ್ಷ ಶಿಕ್ಷೆ: ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ಪತಿಗೆ ಇಲ್ಲಿನ ಐದನೇ ಸೆಷನ್ಸ್‌ ಕೋರ್ಟ್‌ ಐದು ವರ್ಷ ಜೈಲು ಶಿಕ್ಷೆ, ₹60ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ಗುರುಸಿದ್ದಪ್ಪ ಚನ್ನಪ್ಪ ಹಂಚಿನಾಳ ಶಿಕ್ಷೆಗೆ ಒಳಗಾದ ವ್ಯಕ್ತಿ. ಗಂಗಮ್ಮ ಎಂಬುವವರನ್ನು ಮದುವೆಯಾಗಿದ್ದು, ನಂತರ ತಾಯಿ ದೇವಮ್ಮ ಜೊತೆ ಸೇರಿ ತವರು ಮನೆಯಿಂದ ಬಂಗಾರ, ಹಣ ತರುವಂತೆ ದೈಹಿಕ ಕಿರುಕುಳು ನೀಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದ ಗಂಗಮ್ಮ 2016ರ ಮೇ 31ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್‌ಸ್ಪೆಕ್ಟರ್‌ ಎಂ.ಎಸ್. ಪಾಟೀಲ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ–ವಿವಾದ ಆಲಿಸಿದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಬುಧವಾರ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು