ಶುಕ್ರವಾರ, ಸೆಪ್ಟೆಂಬರ್ 17, 2021
23 °C

ಹುಬ್ಬಳ್ಳಿ: ಅಲೆಮಾರಿ ಮಕ್ಕಳಿಗೆ ನಾಗಪಂಚಮಿ ಹಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಾಗರ ಪಂಚಮಿ ಅಂಗವಾಗಿ ಕಲ್ಲುನಾಗರ ಮೂರ್ತಿಗೆ ಹಾಲು ಎರೆಯುವುದು ಸಂಪ್ರದಾಯ. ಆದರೆ, ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಇಲ್ಲಿನ ಅಲೆಮಾರಿ ಮಕ್ಕಳಿಗೆ ಶುಕ್ರವಾರ ಹಾಲು ನೀಡಿ ವಿಶಿಷ್ಠವಾಗಿ ನಾಗಪಂಚಮಿ ಆಚರಿಸಿದರು.

ನವನಗರದ ಮುಗಳಕೋಡ–ಜಿಡಗಾ ಮಠದ ಪಕ್ಕದಲ್ಲಿನ ಚನ್ನಬಸವೇಶ್ವರ ಶಾಲೆಯಲ್ಲಿ ಮಕ್ಕಳಿಗೆ ಹಾಲು ನೀಡಿದರು. ಅಲೆಮಾರಿ ಸಮುದಾಯದ ನೂರಕ್ಕೂ ಹೆಚ್ಚು ಮಕ್ಕಳು ಹಾಲು ಕುಡಿದು ಶ್ರೀಗಳ ಆಶೀರ್ವಾದ ಪಡೆದರು.

ಮಠದ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಅಲೆಮಾರಿ ಸಮುದಾಯ ಹಾಗೂ ಸಾಯಿಬಾಬಾ ಭಕ್ತರು(ದೇವರ ಬಂಡಿ) ವಾಸ್ತವ್ಯ ಹೂಡಿದ್ದಾರೆ. ಆ ಕುಟುಂಬಗಳ ಮಕ್ಕಳೆಲ್ಲ ಹಾಲು ಸವಿದರೆ, ಅವರ ತಾಯಂದಿರು ಪಂಚಮಿಯ ಸಂಭ್ರಮದಲ್ಲಿ ಭಾಗಿಯಾದರು.

ಬಳಿಕ ಮಾತನಾಡಿದ ಪಂಚಮಸಾಲಿ ಶ್ರೀ, ‘ಕಲ್ಲನಾಗರಕ್ಕೆ ಹಾಕುವ ಹಾಲು ಹಾಕುವುದು ಪೋಲು ಮಾಡುವ ಕೆಲಸ. ಈ ಬಗ್ಗೆ ಜನಜಾಗೃತಿ ಮೂಡಿಸಲೆಂದೇ ಮಕ್ಕಳಿಗೆ ಹಾಲು ನೀಡುತ್ತಿದ್ದೇವೆ. ಮಠದಿಂದ 24 ವರ್ಷಗಳಿಂದ ಈ ಪರಂಪರೆ ಮುಂದುವರಿಸಿಕೊಂಡ ಬರಲಾಗಿದೆ’ ಎಂದು ತಿಳಿಸಿದರು.

‘ಕಲ್ಲ ನಾಗರ ಕಂಡರೆ ಹಾಲೆರವರಯ್ಯಾ? ಎಂಬ ಬಸವಣ್ಣನ ನುಡಿ ನಮ್ಮನ್ನು ಪ್ರಭಾವಿಸಿದೆ. ಈ ಮೌಢ್ಯದ ವಿರುದ್ಧ ಪ್ರತಿವರ್ಷ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಹಾಲು‌ ಕುಡಿಸುತ್ತಿದ್ದೇವೆ. ಕೋವಿಡ್ ಕಾರಣ ಶಾಲೆಗಳು ತೆರೆದಿಲ್ಲ. ಹೀಗಾಗಿ ಅಲೆಮಾರಿ‌ ಸಮುದಾಯದ‌ ಮಕ್ಕಳಿಗೆ ಹಾಲು ನೀಡಿ ನಾಗಪಂಚಮಿ ಆಚರಿಸುತ್ತಿದ್ದೇವೆ’ ಎಂದು ಹೇಳಿದರು.

‘ಮಕ್ಕಳು ದೇವರ ಸಮಾನ‌. ಕಲ್ಲಿಗೆ ಹಾಲೆರದು ಪೋಲು ಮಾಡುವ ಬದಲು ಅನಾಥರು, ಅಲೆಮಾರಿ ಮಕ್ಕಳಿಗೆ ನೀಡುವುದೇ ನಿಜವಾದ ಹಬ್ಬ’ ಎಂದರು.

ರಾಣಿ ಚನ್ನಮ್ಮ ಬಳಗದ ದೀಪಾ ನಾಗರಾಜ ಗೌರಿ, ರೇಖಾ ಹೊಸೂರ, ಕರಿಯಪ್ಪ, ಷಣ್ಮುಖ ಬಡಿಗೇರ, ಬಸವರಾಜ ಮನಗುಂಡಿ, ರವಿ ಬಂಕದ, ಮಾಲಾ ಗಡೇದ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು