ಭಾನುವಾರ, ಜನವರಿ 19, 2020
23 °C
ಮೆಟ್ರೊ- ನಮ್‌ ಕೆರಿ ಕಥಿ

ಹುಬ್ಬಳ್ಳಿ–ಧಾರವಾಡ: ಕೆರೆ ಪರಿಸರಕ್ಕೆ ನಗರೀಕರಣದ ಕೊಳ್ಳಿ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಜಲಮೂಲಗಳು ಜನವಸತಿ ಅಥವಾ ಕಟ್ಟಡಗಳಿಂದ ದೂರವಿರಬೇಕು. ಆಗ ಮಾತ್ರ ಅವುಗಳ ರಕ್ಷಣೆ ಹಾಗೂ ಶುಚಿತ್ವ ಸಾಧ್ಯ ಎಂಬುದು ರಾಜ–ಮಹಾರಾಜರ ಕಾಲದ ಮಾತು. ಅದಕ್ಕಾಗಿಯೇ ಅವರು ಕೆರೆಗಳನ್ನು ಊರ ಮುಂದೆ ಕಟ್ಟುತ್ತಿದ್ದರು. ಸುತ್ತಮುತ್ತ ಜನವಸತಿ ಇರುತ್ತಿರಲೇ ಇಲ್ಲ. ಆದರೆ, ಆಧುನಿಕತೆ ಬೆಳೆದಂತೆಲ್ಲ ಮನುಷ್ಯ ಅದನ್ನು ಮರೆತಾಯಿತು. ಅದಕ್ಕೇ ಕೆರೆಗಳ ಸುತ್ತಲೂ ಕಟ್ಟಡಗಳೇ ಇದ್ದು, ದಿನದಿಂದ ದಿನಕ್ಕೆ ಕೆರೆಯ ವ್ಯಾಪ್ತಿ ಸಂಕುಚಿತಗೊಳ್ಳುತ್ತಿದೆ.

ಕೆರೆಯೊಂದು ಉಳಿಯಬೇಕಾದರೆ, ಅದರ ಮೂಲ ಅಸ್ತಿತ್ವ ಉಳಿಯಬೇಕಾದರೆ ಸುತ್ತಮುತ್ತಲಿನ ವಾತಾವರಣದ ಪಾತ್ರ ಅತ್ಯಂತ ಪ್ರಮುಖ. ಆದರೆ, ಇಂತಹ ಮೂಲ ವಾತಾವರಣಕ್ಕೇ ನಗರೀಕರಣ ಕೊಳ್ಳಿ ಇಟ್ಟಿದೆ. ನೀರಿನ ಹರಿಯುವ ಮೂಲವನ್ನು ಅತಿಕ್ರಮಿಸಿಕೊಂಡು ಕೆರೆ ಮೂಲಹುಟ್ಟಿಗೇ ತಿಲಾಂಜಲಿ ಇಡಲಾಗಿದೆ. ಸಂವಿಧಾನದ ಆರ್ಟಿಕಲ್‌ 51ಎ ಪ್ರಕಾರ, ಅರಣ್ಯ, ಕೆರೆ, ನದಿ ಹಾಗೂ ವನ್ಯಜೀವಿಗಳಂತಹ ನೈಸರ್ಗಿಕ ಪರಿಸರಗಳನ್ನು ರಕ್ಷಿಸುವುದು ನಾಗರಿಕರ ಕರ್ತವ್ಯ. ಆದರೆ, ಇದನ್ನು ಎಂದಿಗೂ ಪಾಲಿಸಿಲ್ಲ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಕೆರೆಗಳ ಸುತ್ತಮುತ್ತಲಿನ ವಾತಾವರಣವನ್ನು ಅತಿಯಾದ ನಗರೀಕರಣವೇ ಆವರಿಸಿಕೊಂಡಿದೆ. ಪಾಲಿಕೆ ವ್ಯಾಪ್ತಿಯ ಕೆರೆಗಳ ಸುತ್ತಲಿನ ಪ್ರದೇಶದಲ್ಲಿ ಕಟ್ಟಡಗಳೇ ಶೇ 30ರಷ್ಟು ಇವೆ. ಈ ನಿಟ್ಟಿನಲ್ಲಿ ನಂತರದ ಸ್ಥಾನ ಧಾರ್ಮಿಕ ಕಟ್ಟಡಗಳದ್ದು ಶೇ 14. ಕೃಷಿ ಭೂಮಿ, ಸಸಿಗಳನ್ನು ನೆಟ್ಟಿರುವುದು ತಲಾ ಶೇ 12ರಷ್ಟು. ಮಳಿಗೆಗಳು, ಬಡಾವಣೆಗಳು ತಲಾ ಶೇ 6, ಶೆಡ್‌ ಶೇ 5, ಅರಣ್ಯ ಶೇ 3, ಬೋರ್‌ವೆಲ್‌ ಶೇ 2ರಷ್ಟಿದೆ. ಇತರೆಗಳ ವ್ಯಾಪ್ತಿ ಶೇ 8ರಷ್ಟು.

ಅಯೋಧ್ಯಾ, ಬೆಂಗೇರಿ, ಬಿದನಾಳ, ಗೋಪನಗೊಪ್ಪ, ಕೃಷ್ಣಾಪುರ, ನಾಗಶೆಟ್ಟಿ ಕೊಪ್ಪ ವ್ಯಾಪ್ತಿಯ ಕೆರೆಗಳಲ್ಲಿ ಆಗಿರುವುದೇ ಇದು. ಇಲ್ಲಿ ಮನುಷ್ಯನೊಂದಿಗೆ ಸ್ಪರ್ಧೆಗೆ ಬಿದ್ದು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೆಲವು ಕೆರೆಗಳು ಸೆಣಸಿ ನಾಶವಾಗಿವೆ. ಅಳಿದುಳಿದಿರುವ ಕೆರೆಗಳಿಗೆ ನೀರೆಂಬ ಉಸಿರು ಸಿಗಲು ಸುತ್ತಲಿನ ಅಭಿವೃದ್ಧಿ ಕಾರ್ಯಗಳು ಬಿಡುತ್ತಿಲ್ಲ.

ಹುಬ್ಬಳ್ಳಿಯ ಅಯೋಧ್ಯಾನಗರ, ನವ ಅಯೋಧ್ಯಾ ನಗರ ಎಂದು ಅಭಿವೃದ್ಧಿಯಾದಾಗ ಅಯೋಧ್ಯಾದಲ್ಲಿದ್ದ ಮೂರು ಕೆರೆಗಳಲ್ಲಿ ಎರಡು ಅಸ್ತಿತ್ವ ಕಳೆದುಕೊಂಡು ವಸತಿ ಬಡಾವಣೆಗಳಾಗಿವೆ.  ಏಳು ಎಕರೆಯಿದ್ದ ಅಯೋಧ್ಯಾ ಕೆರೆ ಶತಮಾನಗಳ ಇತಿಹಾಸದಿಂದ ಹೊರಬಂದು ಅಂಬೇಡ್ಕರ್ ಕಾಲೊನಿಯಾಗಿದೆ. ಇನ್ನು ಕೇವಲ 7 ಕುಂಟೆಯಿದ್ದ ಅಯೋಧ್ಯಾ ಕುಂಟೆಯ ಕುರುಹೂ ಇಲ್ಲದಂತಾಗಿದೆ. ಇನ್ನು ಉಳಿದ ಅಯೋಧ್ಯಾ ಕೆರೆ–2 ಅಂದರೆ ಕೆಂಪೆಕೆರೆ, ಸಂತೋಷನಗರದಲ್ಲಿದ್ದು, ಕಾರವಾರ ರಸ್ತೆಗೆ ಒಂದಷ್ಟು ವ್ಯಾಪ್ತಿ ಕಳೆದುಕೊಂಡು, ಒಳಚರಂಡಿ ನೀರಿಗೆ ಆಶ್ರಯ ನೀಡಿದ್ದರೂ ಸಾವಿರಾರು ಹಕ್ಕಿಗಳ ತಾಣ. ಈ ಕೆರೆ ಅಭಿವೃದ್ಧಿ ಸೋಗಿನಲ್ಲಿ ಅಂಗಳವನ್ನೇ ಕಡಿಮೆ ಮಾಡಲಾಗಿದೆ.

ಬೆಂಗೇರಿಯಲ್ಲಿ ಮೂರು ಕೆರೆಗಳು ದಾಖಲೆಯಲ್ಲಿದ್ದು, ಅದರಲ್ಲಿ ಎರಡು ಕೆರೆಗಳು ದುರ್ಬಳಕೆಯಾಗಿವೆ. ಬೆಂಗೇರಿ ಕುಂಟೆ–1 ಬಾದಾಮಿನಗರದಲ್ಲಿ ಬಡಾವಣೆಯಾಗಿದೆ. ಬೆಂಗೇರಿ ಕೆರೆ ಬೆಂಗೇರಿಯ ಶನಿವಾರ ಸಂತೆಯ ತಾಣವಾಗಿ, ತೋಟಗಾರಿಕೆ ಇಲಾಖೆಯ ನರ್ಸರಿಯಾಗಿ ಎಲ್ಲ ನೀರಿನ ಮೂಲಗಳನ್ನು ಕಳೆದುಕೊಂಡು ಸಮತಟ್ಟಾಗಿದೆ. ಬೆಂಗೇರಿ ಖಾದಿ ಗ್ರಾಮೋದ್ಯೋಗ ಹಾಗೂ ಸೋಡಾ ಫ್ಯಾಕ್ಟರಿ ಬಳಿ, ಅಳಿದು ಉಳಿದಿರುವ ಬೆಂಗೇರಿ ಕುಂಟೆ 2ರ ಸುತ್ತಲೂ ಶೆಡ್‌ಗಳಿವೆ. ಇದನ್ನು ಋತುವಾರು ಕೆರೆ ಅಂದರೆ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಕೆರೆ ಎನ್ನಲಾಗಿದ್ದು, ತ್ಯಾಜ್ಯ, ಹೊಲಸಿನ ಆಗರವಾಗಿದೆ. ಶೇ 65ರಷ್ಟು ಒತ್ತುವರಿಯಾಗಿರುವ ಕೆರೆಯನ್ನು ಉಳಿಸಿಕೊಳ್ಳಬಹುದು.

ಹುಬ್ಬಳ್ಳಿಯ ಗೋಪನಕೊಪ್ಪ ಕೆರೆಯನ್ನು ಸಂತೋಷನಗರದ ಕೆರೆ ಎಂದೂ ಕರೆಯಲಾಗುತ್ತದೆ. ಶತಮಾನಗ ಇತಿಹಾಸ ಹೊಂದಿರುವ ಈ ಕೆರೆಯನ್ನು ಸಾಕಷ್ಟು ಬಾರಿ ಪುನರುಜ್ಜೀವನಗೊಳಿಸಲಾಗಿದೆ. ಕೆರೆಯ ಸುತ್ತಲೂ ಬೇಲಿ ಇರುವ ಕಾರಣ ಶೇ 2.5ಕ್ಕಿಂತ ಹೆಚ್ಚಿನ ಒತ್ತುವರಿಯಾಗಿಲ್ಲ. ಆದರೂ ಒಳಚರಂಡಿ, ತ್ಯಾಜ್ಯದ ಸಂಕಟದಿಂದ ಹೊರತಾಗಿಲ್ಲ.

ಹುಬ್ಬಳ್ಳಿಯ ಕೃಷ್ಣಾಪುರದಲ್ಲಿ ಮೂರು ಕೆರೆಗಳು ದಾಖಲೆಯಲ್ಲಿವೆ. ಹೆಗ್ಗೇರಿ ಕಾಲೊನಿಯಲ್ಲಿ 44 ಎಕರೆಯ ಹೆಗ್ಗೇರಿ ಕೆರೆ ಅಂಗಳದಲ್ಲೇ ಆಯುರ್ವೇದ ಕಾಲೇಜು, ಅಂಬೇಡ್ಕರ್‌ ಕ್ರೀಡಾಂಗಣ, ಕಾನೂನು ಕಾಲೇಜು, ಶಾಲೆಗಳು ನಿರ್ಮಾಣವಾಗಿ, ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಕೆರೆ ಇಲ್ಲಿತ್ತು ಎಂಬ ಕುರುಹು ತೋರುತ್ತದೆ. ಸುಭಾಷನಗರ, ವಿಶಾಲನಗರದಲ್ಲಿ ಕೃಷ್ಣಾಪುರ ಕುಂಟೆ–1 ತನ್ನ ಅಸ್ತಿತ್ವ ಕಳೆದುಕೊಂಡು, ಮನೆಗಳು, ವಾಣಿಜ್ಯ ಕಟ್ಟಡ ಹಾಗೂ ರಸ್ತೆಗೆ ಆಹುತಿಯಾಗಿದೆ. ಉಳಿದಿರುವುದು ಕೃಷ್ಣಾಪುರ ಕುಂಟೆ–2 ಮಾತ್ರ. ಅಂದರೆ ಸಿದ್ಧಾರೂಢ ಮಠ ಕೆರೆ. ಈ ಕೆರೆಗೆ ಹರಿವು ಇಲ್ಲದಿದ್ದರೂ, ಅದು ಮಠದ ಆಸಕ್ತಿಯಿಂದ ಕಲ್ಯಾಣಿಯ ರೂಪ ಪಡೆದು, ಬೋರ್‌ವೆಲ್‌ ನೀರಿನಲ್ಲಿ ಸಂಗ್ರಹ ಕಾಣುತ್ತಿದೆ.

ನಾಗಶೆಟ್ಟಿಕೊಪ್ಪದ ದಾಖಲೆಯಲ್ಲಿ ಆರು ಕೆರೆ–ಕುಂಟೆಗಳಿವೆ. ಇದರಲ್ಲಿ ಜೀವಂತವಾಗಿರುವುದು ಒಂದು ಮಾತ್ರ. ಬೆಂಗೇರಿ ಎಕ್ಸ್‌ಟೆನ್ಷನ್‌ ಹನುಮನ ದೇವಸ್ಥಾನದ ಬಳಿಯಿರುವ ಕೆರೆದಂಡೆ ಓಣಿ ಪಕ್ಕದ್ದೇ ನಾಗಶೆಟ್ಟಿಕೊಪ್ಪದ ಮೊದಲ ಕೆರೆ. ಇದನ್ನು ಕೆರೆ ಎನ್ನುವ ಬದಲು ಸುತ್ತಲಿನ ಕೊಳೆಗೇರಿಯ ತ್ಯಾಜ್ಯ ಸಂಗ್ರಹ ತಾಣ ಎಂದೇ ಕರೆಯಬಹುದು. ಇದನ್ನು ಬಿಟ್ಟರೆ ಇನ್ನುಳಿದ ಐದು ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ. ಕುಂಟೆ–2ಯಲ್ಲಿ ಹನುಮನ ದೇವಸ್ಥಾನ ದ್ವಾರಗೋಪುರದ ಅಕ್ಕಪಕ್ಕದಲ್ಲಿ ಕಟ್ಟಡಗಳಾಗಿವೆ. ಭವಾನಿನಗರದಲ್ಲಿ ಕುಂಟೆ–3ರಲ್ಲಿ ರೈಲ್ವೆ ಆಫೀಸರ್ಸ್‌ ಕಾಲೊನಿ ಇದೆ; ದೇಶಪಾಂಡೆನಗರದಲ್ಲಿ ಕಲ್ಯಾಣಮಂಟಪ ರಸ್ತೆಯ ಸಮೀಪ ಕುಂಟೆ–4ರಲ್ಲಿ ಮನೆ/ಕಟ್ಟಡಗಳು ನಿರ್ಮಾಣವಾಗಿವೆ; ವಿದ್ಯಾನಗರ ಅಶೋಕನಗರದ ವಿಶ್ವೇಶ್ವರನಗರ ರಸ್ತೆಯಲ್ಲಿರುವ ಕುಂಟೆ–5 ಅಪಾರ್ಟ್‌ಮೆಂಟಾಗಿ ಪರಿವರ್ತನೆಯಾಗಿದೆ. ವಿದ್ಯಾನಗರ ಕೋರಿ 1ನೇ ಮುಖ್ಯರಸ್ತೆಯಲ್ಲಿ ಕುಂಟೆ–6 ಮನೆ/ಕಟ್ಟಡಗಳಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.

ಬಿದನಾಳದ ಊರಿನಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಯ ಸಮೀಪ ಬಿದನಾಳ ಕುಂಟೆ ನಗರೀಕರಣದ ಮಧ್ಯೆಯೂ ಜೀವಂತವಾಗಿದೆ. ಒತ್ತುವರಿಗೆ ಒಳಗಾಗದ ಈ ಕೆರೆ ಪುನರುಜ್ಜೀವನಗೊಂಡಿದ್ದರೂ, ತ್ಯಾಜ್ಯ, ಒಳಚರಂಡಿಯ ನೀರಿನ ಸಮಸ್ಯೆ ತಪ್ಪಿಲ್ಲ. ಇನ್ನು, ಹುಬ್ಬಳ್ಳಿ–ಗದಗ ರಸ್ತೆಯಲ್ಲಿರುವ ಬಮ್ಮಾಪುರ ಕೆರೆ ಕೃಷಿ ಚಟುವಟಿಕೆಗಳಲ್ಲಿ ಲೀನವಾಗಿದೆ.

ಪಾಲಿಕೆಯ 20 ಗ್ರಾಮಗಳಲ್ಲಿ ಕೆರೆಗಳಿಲ್ಲ!

ಎಂಪ್ರಿ ತನ್ನ ಅಧ್ಯಯನದಲ್ಲಿ ಜಲಮೂಲ ಪ್ರಕಾರಗಳನ್ನು ವಿಂಗಡಿಸಿದೆ. ಮೂರು ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿರುವ ಜಲಮೂಲವನ್ನು ಕೆರೆ; ಒಂದರಿಂದ ಮೂರು ಎಕರೆ ಇರುವುದನ್ನು ಗೋಕಟ್ಟೆ, ಒಂದು ಎಕರೆಗಿಂತ ಕಡಿಮೆ ಇರುವುದನ್ನು ಕುಂಟೆ ಎಂದು ವಿಭಾಗಿಸಿದೆ. ಎಚ್‌ಡಿಎಂಸಿ ಪ್ರದೇಶದಲ್ಲಿ ಒಟ್ಟು 48 ಹಳ್ಳಿಗಳಿದ್ದು, ಈ ಪೈಕಿ 28 ಗ್ರಾಮಗಳಲ್ಲಿ 101 ಜಲಮೂಲಗಳಿವೆ. 20 ಗ್ರಾಮಗಳಲ್ಲಿ (ಹುಬ್ಬಳ್ಳಿ ತಾಲ್ಲೂಕಿನಲ್ಲಿ 6 ಗ್ರಾಮಗಳು ಮತ್ತು ಧಾರವಾಡ ತಾಲ್ಲೂಕಿನಲ್ಲಿ 14 ಗ್ರಾಮಗಳು) ಯಾವುದೇ ಜಲಮೂಲಗಳಿಲ್ಲ. ಜೀವಂತವಿರುವ 54 ಜಲಮೂಲಗಳಲ್ಲಿ 30 ಜಲಮೂಲಗಳು ಧಾರವಾಡ ತಾಲ್ಲೂಕಿನಲ್ಲಿ ಮತ್ತು 24 ಕೆರೆ–ಕುಂಟೆಗಳು ಹುಬ್ಬಳ್ಳಿ ತಾಲ್ಲೂಕಿನಲ್ಲಿವೆ. ಅದೇ ರೀತಿ ಬಳಕೆಯಾಗದ/ ಅಸ್ತಿತ್ವ ಕಳೆದುಕೊಂಡಿರುವ 47 ಜಲಮೂಲಗಳಲ್ಲಿ, 21 ಧಾರವಾಡ ಹಾಗೂ 26 ಹುಬ್ಬಳ್ಳಿ ತಾಲ್ಲೂಕಿನಲ್ಲಿವೆ. 101 ಕೆರೆ–ಕುಂಟೆಗಳಲ್ಲಿ ಶೇ 43ರಷ್ಟು ಕೆರೆ, ಶೇ 32ರಷ್ಟು ಗೋಕಟ್ಟೆ, ಶೇ 26ರಷ್ಟು ಕುಂಟೆಗಳಾಗಿವೆ. ಜೀವಂತವಿರುವ 54 ಕೆರೆ–ಕುಂಟೆಗಳಲ್ಲಿ ಶೇ 55ರಷ್ಟು ಕೆರೆ, ಶೇ 30ರಷ್ಟು ಗೋಕಟ್ಟೆ, ಶೇ 15ರಷ್ಟು ಕುಂಟೆಗಳಿವೆ. ಅಸ್ತಿತ್ವ ಕಳೆದುಕೊಂಡ 47 ಕೆರೆ–ಕುಂಟೆಗಳಲ್ಲಿ ಶೇ 38 ಕುಂಟೆ, ಶೇ 32 ಗೋಕಟ್ಟೆ, ಶೇ 30ರಷ್ಟು ಕೆರೆ.

ಜೀವಂತ ಕೆರೆ–ಕುಂಟೆಗಳಲ್ಲಿ ಧಾರವಾಡ ತಾಲ್ಲೂಕಿನಲ್ಲಿ ಶೇ 58.2ರಷ್ಟಿದ್ದರೆ, ಅಸ್ತಿತ್ವ ಕಳೆದುಕೊಂಡ ಕೆರೆ–ಕುಂಟೆಗಳಲ್ಲಿ ಶೇ 52ರಷ್ಟು ಹುಬ್ಬಳ್ಳಿಯಲ್ಲಿವೆ. ಹುಬ್ಬಳ್ಳಿ–ಧಾರವಾಡದಲ್ಲಿರುವ ಅತಿದೊಡ್ಡ ಕೆರೆ ಎಂದರೆ ಉಣಕಲ್‌ ಕೆರೆ 229 ಎಕರೆ 2 ಗುಂಟೆ ವ್ಯಾಪ್ತಿ ಹೊಂದಿದ್ದು, ಹುಬ್ಬಳ್ಳಿ ತಾಲ್ಲೂಕಿನಲ್ಲಿದೆ. ಎರಡನೇ ಸ್ಥಾನ ಧಾರವಾಡದಲ್ಲಿರುವ 164 ಎಕರೆ 45 ಗುಂಟೆ ಪ್ರದೇಶದಲ್ಲಿರುವ ಕೆಲಗೇರಿ ಕೆರೆ–2. ನವಲೂರಿನಲ್ಲಿ 68 ಎಕರೆ 38 ಗುಂಟೆ ವ್ಯಾಪ್ತಿಯಲ್ಲಿರುವ ನವಲೂರ ಕೆರೆ ನಂತರದ ಸ್ಥಾನದಲ್ಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು