ಶನಿವಾರ, ಫೆಬ್ರವರಿ 29, 2020
19 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ | ನಮ್‌ ಕೆರಿ ಕಥಿ–13

ಗ್ರಾಮದ ಸೊಗಡಿನಲ್ಲೂ ಒತ್ತುವರಿ: ವಿನಾಶದ ಅಂಚಿನಲ್ಲಿರುವ ಕೆರೆಗಳು

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಧಾರವಾಡ ಹೋಬಳಿಯ ತಡಸಿನಕೊಪ್ಪದಲ್ಲಿ ಐದು ಕೆರೆಗಳಿವೆ. ಆದರೆ ಉಳಿದಿರುವುದು ಎರಡು ಎಂಬುದೇ ಶೋಚನೀಯ. ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಬಿಡದ ತಡಸಿನಕೊಪ್ಪಕ್ಕೆ ಪಾಲಿಕೆಯ ‘ಆಧುನಿಕ ಸೌಲಭ್ಯಗಳು’ ಇನ್ನೂ ಬಾರದೆ ಇದ್ದರೂ, ಕೆರೆಗಳ ಒತ್ತುವರಿಗೆ ಮಾತ್ರ ಯಾವುದೇ ತಡೆಯಾಗಿಲ್ಲ. ಹೀಗಾಗಿಯೇ ಜಲಮೂಲಗಳಿಗೆ ಇಲ್ಲಿ ಪ್ರಾಮುಖ್ಯ ಇಲ್ಲದೆ ಕಲ್ಲು–ಮಣ್ಣನ್ನು ಯಥೇಚ್ಛವಾಗಿ ಸುರಿಯಲಾಗಿದೆ, ಸುರಿಯಲಾಗುತ್ತಿದೆ.

ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ, ಸತ್ತೂರ ಕಾಲೊನಿಗಳ ನಡುವೆ ತಡಸಿನಕೊಪ್ಪದ ಕೆರೆಗಳು ಮಾಯವಾಗಿವೆ. ಅಳಿದು ಉಳಿದಿರುವ ಎರಡು ಕೆರೆಗಳಿಗೂ ಸಾಕಷ್ಟು ಆತಂಕವಿದೆ. ಅವುಗಳು ಕೆರೆಗಳೇ ಅಲ್ಲ, ಖಾಸಗಿಯವರ ಸ್ವತ್ತು ಎಂದು ಇಲ್ಲಿನ ಇಟ್ಟಿಗೆ ತಯಾರಕರು ಹೇಳುತ್ತಾರೆ. ತಡಸಿನಕೊಪ್ಪದ ಒಳಹೊಕ್ಕರೆ ಲಾರಿಗಳದ್ದೇ ಸಾಲುಸಾಲು. ಇಟ್ಟಿಗೆ ಗೂಡು ಹೆಚ್ಚಾಗಿರುವುದರಿಂದ ಅದನ್ನು ಒಯ್ಯಲು ಲಾರಿಗಳು ಇಲ್ಲಿವೆ. ಹಳ್ಳಕೊಳ್ಳದ್ದಲ್ಲೆಲ್ಲ ಇಟ್ಟಿಗೆ ನಿರ್ಮಾಣದ್ದೇ ಕಾಮಗಾರಿ.

ತಡಸಿನಕೊಪ್ಪ ಊರ ಮುಂದಿನ ಕೆರೆ 5 ಎಕರೆಗೂ ಹೆಚ್ಚು ವ್ಯಾಪ್ತಿ ಹೊಂದಿದ್ದು, ಸುಮಾರು 1.5 ಮೀಟರ್‌ನಷ್ಟು ಆಳಹೊಂದಿದೆ. ಗೃಹ ತ್ಯಾಜ್ಯ, ಕಟ್ಟಡ ತ್ಯಾಜ್ಯವನ್ನು ಇಲ್ಲಿಗೆ ಸುರಿಯಲು ಯಾರೂ ಹಿಂದೆಬಿದ್ದಿಲ್ಲ. ಅಲ್ಲದೆ, ತ್ಯಾಜ್ಯವನ್ನು ಆಗಾಗ್ಗೆ ಇಲ್ಲಿ ಸುಡಲಾಗುತ್ತದೆ. ಒಳಚರಂಡಿ ನೀರು ಕೂಡ ಹರಿಯವುದು ಕೆರೆಗೇ. ಶಾಲೆ ಮತ್ತು ಮನೆಗಳಿಗೆ ಶೇ 17ರಷ್ಟು ಪ್ರದೇಶ ಒತ್ತುವರಿಯಾಗಿದೆ. ಕೆರೆಯ ಅಂಗಳವನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಸಿಕೊಳ್ಳುವ ಪ್ರಯತ್ನ ಕಳೆದ ಬಾರಿ ಸುರಿದ ಭಾರಿ ಮಳೆ ತಡೆಯೊಡ್ಡಿದೆ. ನೀರು ಸಂಗ್ರಹ ಹೆಚ್ಚಾಗಿರುವುದರಿಂದ ಅಕ್ರಮ ಕಟ್ಟಡ ನಿರ್ಮಾಣಗಳು ಅರ್ಧದಲ್ಲೇ ನಿಂತಿವೆ.

ತಡಿಸಿನಕೊಪ್ಪದ ಕುಂಟೆ–1 ಹಾಗೂ ಕುಂಟೆ–2 ಸತ್ತೂರ ಕಾಲೊನಿಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಕುಂಟೆ–1 ಮಾವಿನ ತೋಟ ಹಾಗೂ ರಸ್ತೆಯಿಂದ ಒತ್ತುವರಿಯಾಗಿದ್ದರೆ, ಕುಂಟೆ–2 ಬಡಾವಣೆಯಾಗಿದೆ. ಕುಂಟೆ–3 ತಡಸಿನಕೊಪ್ಪದ ಗ್ರಾಮದ ಹೊರಭಾಗದಲ್ಲಿದ್ದು, ಇಟ್ಟಿಗೆ ಮಾಡುವ ಪ್ರದೇಶದಲ್ಲಿ ಬಯಲು ಪ್ರದೇಶವಾಗಿದೆ. ಕೆರೆಯ ಗುರುತು ಸಿಗದಂತೆ ಮಾಡಲಾಗಿದ್ದು, ಯಾವುದೇ ಸಂದರ್ಭದಲ್ಲೂ ಕಟ್ಟಡ ಅಥವಾ ಇತರೆ ಉದ್ದೇಶಕ್ಕಾಗಿ ಒತ್ತುವರಿಯಾಗುವ ಸಂಭವವಿದೆ. ಕುಂಟೆ–4 ನೀರಿನ ಸಂಗ್ರಹವನ್ನು ಹೊಂದಿರುವ ಚಿಕ್ಕ ವ್ಯಾಪ್ತಿಯ ಜಲಮೂಲವಾಗಿದ್ದರೂ, 1.5 ಮೀಟರ್‌ ಆಳ ಹೊಂದಿದೆ. ಈ ಕೆರೆಯಲ್ಲಿ, ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.

ಪಾಲಿಕೆ ಅಭಿವೃದ್ಧಿ ಕಾರ್ಯಗಳು ಇಲ್ಲಿಗೆ ಇನ್ನೂ ತಲುಪಿಲ್ಲವಾದ್ದರಿಂದ, ಕೆರೆಗಳ ಒತ್ತುವರಿ ಬಯಲು ಪ್ರದೇಶಕ್ಕೆ ಸೀಮಿತವಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳು ಇನ್ನೂ ಬಯಲಿನ ಸ್ವರೂಪದಲ್ಲೇ ಇದ್ದು, ಅಲ್ಲೂ ಮನೆಗಳು ಬಂದರೆ, ಜೀವಂತ ಕೆರೆಗಳನ್ನೂ ಉಳಿಸಿಕೊಳ್ಳುವುದು ದೂರದ ಮಾತು.

ಡಿ.ಸಿ ವರದಿ ಪ್ರಧಾನಿ ಪ್ರಶಸ್ತಿಗಷ್ಟೇ ಸೀಮಿತ!

ಹುಬ್ಬಳ್ಳಿ–ಧಾರವಾಡದಲ್ಲಿ ಬಹುತೇಕ ಕೆರೆಗಳು ನಾಶವಾಗುತ್ತಿವೆ. ನಗರೀಕರಣದ ಒತ್ತಡದಲ್ಲಿ ಒತ್ತುವರಿ ಹೆಚ್ಚಾಗಿದ್ದು, ಒಳಚರಂಡಿ ನೀರು ಹರಿದು, ಅನಾರೋಗ್ಯಕರ ವಾತಾವರಣವಿದೆ. ಉದ್ಯಾನಗಳು ಅನಾರೋಗ್ಯಕರ ಗಿಡಗಳು, ನಗರ ತ್ಯಾಜ್ಯದಿಂದ ಕೂಡಿದ್ದು, ಸಮಾಜಘಾತುಕ ಶಕ್ತಿಗಳ ತಾಣವಾಗುತ್ತಿವೆ. ಸಾಂಸ್ಕೃತಿಕ ಸಂಪ್ರದಾಯಗಳನ್ನು ಮರುಸ್ಥಾಪಿಸಲು ಮೂಲಸೌಲಭ್ಯಗಳು ಸಾಲುತ್ತಿಲ್ಲ.... ಇವೆಲ್ಲವನ್ನೂ ಸುಸ್ಥಿತಿಗೆ ತರಬೇಕು ಎಂಬ ಉದ್ದೇಶದಿಂದ ‘ಸುಸ್ಥಿರ ಜೀವನಕ್ಕೆ ಮರಳಲು ಮೂಲಕ್ರಮಗಳು: ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಸೋಲ್‌ (ಸೇವಿಂಗ್‌ ಓಪನ್‌ ಸ್ಪೇಸಸ್, ಅರ್ಬನ್‌ ಲೇಕ್ಸ್‌) ಮತ್ತು ಸಾಂಸ್ಕೃತಿಕ ಪುನರುಜ್ಜೀವನ’ ವರದಿ ತಯಾರಾಗಿತ್ತು.

ಈ ವರದಿಯನ್ನು ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ದರ್ಪಣ್‌ ಜೈನ್‌ ಅವರು 2008ರಲ್ಲಿ ತಯಾರಿಸಿದ್ದರು. ಈ ಪ್ರಕಾರ, ನಗರಾಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಒಟ್ಟಾಗಿ ಸೇರಿಕೊಂಡು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು.

ನಗರದಲ್ಲಿರುವ ಉಣಕಲ್‌ ಕೆರೆ, ಕೆಲಗೇರಿ ಕೆರೆ, ಸಾಧನಕೆರೆ, ತೋಳನಕೆರೆ, ಜಯನಗರ ಕೆರೆ, ನುಗ್ಗೀಕೆರೆ, ಸೋಮೇಶ್ವರ ಕೆರೆ, ನವಲೂರು ಕೆರೆ, ರಾಯಾಪುರ ಕೆರೆ, ಭೈರಿದೇವರಕೊಪ್ಪ ಕೆರೆ, ಗೋಕುಲ ಕೆರೆಗಳ ಪುನರುಜ್ಜೀವನ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು. ಕೆರೆಗಳ ಗಡಿಯನ್ನು ಗುರುತಿಸಿ, ಒತ್ತುವರಿಯನ್ನು ತೆರವುಗೊಳಿಸುವುದು. ಕೆರೆಗಳಿಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಬೇರೆಡೆಗೆ ಹರಿಸುವುದು. ಹೊಸ ಏರಿ ನಿರ್ಮಾಣ, ಇರುವ ಏರಿಯನ್ನು ಸದೃಢಗೊಳಿಸುವುದು, ಹೂಳು ತೆಗೆದು ನೀರಿನ ಸಂಗ್ರಹ ಹೆಚ್ಚುವುದು. ಬೇಲಿಯನ್ನು ಹಾಕುವುದು. ಅರಣ್ಯೀಕರಣ, ಲ್ಯಾಂಡ್‌ಸ್ಕೇಪ್‌ ಸೇರಿದಂತೆ ಸಂಬಂಧಿತ ಸೌಲಭ್ಯಗಳನ್ನು ಕಲ್ಪಿಸುವುದು. ಕೆರೆ ಮತ್ತು ಉದ್ಯಾನಗಳನ್ನು ಅಭಿವೃದ್ಧಿಗೊಳಿಸಿ, ಮನರಂಜನೆ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಿ ರೂಪಿಸುವುದು.

ಈ ಎಲ್ಲ ವಿಷಯಗಳು ‘ಸೋಲ್‌’ ವರದಿಯಲ್ಲಿ ಅಡಕವಾಗಿದ್ದವು. ಇಂತಹ ಅತ್ಯುತ್ತಮ ಉದ್ದೇಶದ ವರದಿಗೆ ‘ಅತ್ಯುತ್ತಮ ಸಾರ್ವಜನಿಕ ಆಡಳಿತಕ್ಕಾಗಿ ನೀಡಲಾಗುವ ಪ್ರಧಾನ ಮಂತ್ರಿಯವರ ಪ್ರಶಸ್ತಿ’ ಲಭ್ಯವಾಯಿತು.  ಅಂದಿನ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್‌ ಅವರು ಧಾರವಾಡದ ಅಂದಿನ ಜಿಲ್ಲಾಧಿಕಾರಿ ದರ್ಪಣ್‌ ಜೈನ್‌ ಅವರಿಗೆ ನವದೆಹಲಿಯಲ್ಲಿ 2013ರ ಏಪ್ರಿಲ್‌ 21ಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

ಆದರೆ, ಈ ವರದಿಯಲ್ಲಿನ ಯೋಜನೆಗಳು ಜಾರಿಯಾಗದಿರುವುದು ಧಾರವಾಡ ಜಿಲ್ಲೆಯ ದುರಾದೃಷ್ಟವೇ ಸರಿ. ವರದಿ ಜಾರಿ ಹಾಗೂ ಯೋಜನೆ ಬಗ್ಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ದರ್ಪಣ್‌ ಜೈನ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ದರ್ಪಣ್‌ ಜೈನ್‌ ಅವರ ವರದಿಯನ್ನು ಜಾರಿಗೆ ತರಲು ಅವರ ನಂತರದ ಜಿಲ್ಲಾಧಿಕಾರಿಗಳೂ ಮುಂದಾಗಲಿಲ್ಲ. ಬದಲಿಗೆ ಹೊಸ ವರದಿಗಳನ್ನು ಮಾಡಲಷ್ಟೇ ಮುಂದಾದರು ಹಾಗೂ ಮುಂದಾಗಿದ್ದಾರೆ. ಹೀಗಾಗಿ, ಕೆರೆ, ಉದ್ಯಾನ, ಸಾಂಸ್ಕೃತಿಕ ತಾಣಗಳನ್ನು ಉಳಿಸುವ ವರದಿ ಪ್ರಧಾನಿ ಪ್ರಶಸ್ತಿಗಷ್ಟೇ ಸೀಮಿತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು