ಶನಿವಾರ, ಜನವರಿ 18, 2020
20 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಯುವ ಪ್ರತಿಭೆ: ಕುಶಾಲ್‌ಗೆ ನಾಸಾ ಮೆಚ್ಚುಗೆ

ರವಿ ಎಸ್‌.ಬಳೂಟಗಿ Updated:

ಅಕ್ಷರ ಗಾತ್ರ : | |

Prajavani

ಧಾರವಾಡದ ಕುಶಾಲ್ ಕುಮಾರ್ ಪೋಥುಲಾ ಬಾಹ್ಯಾಕಾಶ ವಿಷಯದಲ್ಲಿ ಸಿದ್ಧಪಡಿಸಿದ ಪ್ರಬಂಧವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ನಾಸಾ) ಮೆಚ್ಚಿಕೊಂಡಿದೆ. ಧಾರವಾಡದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯಾದ ಕುಶಾಲ್‌ಗೆ ಬಾಹ್ಯಾಕಾಶ ವಿಷಯದಲ್ಲಿ ವಿಶೇಷ ಆಸಕ್ತಿ ಇದೆ. ಆತ ಅಂತರಿಕ್ಷಕ್ಕೆ ಸಂಬಂಧಿಸಿದ ಸೂತ್ರವೊಂದನ್ನು ‘ಮಿಸ್ಟ್ರಿಯಸ್ ಆರಿಜನ್ ಆಫ್ ಫಾಸ್ಟ್ ರೇಡಿಯೊ ಬಸ್ಟ್(ಎಫ್.ಆರ್.ಬಿ)’ ಹೆಸರಿನಲ್ಲಿ ಸಂಶೋಧನೆ ಕೈಗೊಂಡಿದ್ದಾನೆ. ಈ ಕುರಿತಾದ ಕಿರು ಮಾಹಿತಿಯನ್ನು ನಾಸಾಗೆ ಪತ್ರ ಮುಖೇನ ತಿಳಿಸಿದ್ದ. ಈ ಪತ್ರ ರವಾನಿಸಿದ ಕೆಲವೇ ದಿನಗಳಲ್ಲಿ ನಾಸಾ ಪ್ರತಿಕ್ರಿಯಿಸಿ, ಈ ಸಂಶೋಧನಾ ವಿಷಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಕುಶಾಲ್‌ಗೆ ಪತ್ರವನ್ನೂ ಬರೆದಿದೆ.

‘ನಿಮ್ಮ ಪತ್ರಕ್ಕೆ ಧನ್ಯವಾದಗಳು. ಈ ವಿಷಯ ಆಸಕ್ತಿಕರವಾಗಿದೆ. ಇಂಥದ್ದೇ ಹಲವು ಮಾಹಿತಿ ನಮ್ಮ ವೆಬ್‌ಸೈಟ್‌ನಲ್ಲಿವೆ. ಈ ವಿಷಯವನ್ನು ನೀವು ಅಲ್ಲಿ ಅಳವಡಿಸಬಹುದು. ಇದರಿಂದ ನಮ್ಮ ಸಂಶೋಧನೆ ಹಾಗೂ ನಿಮ್ಮ ಅಧ್ಯಯನಕ್ಕೆ ಅನುಕೂಲ ಆಗಲಿದೆ’ ಎಂದು ನಾಸಾ ಪತ್ರದಲ್ಲಿ ಉಲ್ಲೇಖಿಸಿದೆ.

‘ನಮ್ಮ ವೆಬ್‌ಸೈಟ್‌ಗೆ ನೀವು ಲಾಗಿನ್ ಆಗಿರಿ. ಟ್ವಿಟರ್‌ನಲ್ಲಿ ಫಾಲೋ ಮಾಡಿರಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಇ-ಮೇಲ್ ಮೂಲಕ ತಿಳಿಸಿ. ನಾಸಾದೊಂದಿಗೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಿ. ಇದು ನಿಮ್ಮ ಜ್ಞಾನಾರ್ಜನೆಗೆ ನೆರವಾಗಲಿದೆ. ನಿಮಗೆ ಶುಭವಾಗಲಿ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

9ನೇ ತರಗತಿಯಲ್ಲಿ ಓದುತ್ತಿರುವ ಆತ, ಓದಿನ ಜತೆಗೆ ಈ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಕೈಗೊಂಡಿದ್ದಾನೆ. ಬಾಹ್ಯಾಕಾಶ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಈ ಶಾಲೆಗೆ ಕೀರ್ತಿ ತಂದಿದ್ದಾನೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇರಬೇಕಾದ ಬುದ್ಧಿಮತ್ತೆ ಕುಶಾಲ್‌ಗೆ ಇದೆ, ಪದವಿ, ಸ್ನಾತಕೋತ್ತರ ಹಂತದ ಪ್ರಶ್ನೆಪತ್ರಿಕೆಗಳನ್ನು ಈತ ಬಿಡಿಸಬಲ್ಲ. ಸ್ಪರ್ಧೆಯೊಂದರಲ್ಲಿ ಎಂ.ಎಸ್.ಸಿ ಪ್ರಶ್ನೆಪತ್ರಿಕೆಗೆ ಸಮರ್ಪಕ ಉತ್ತರ ನೀಡಿ ಬಹುಮಾನ ಗೆದ್ದಿದ್ದಾನೆ. ಗ್ಯಾಲಕ್ಸಿ, ಗ್ರಹಗಳ ಚಲನೆ, ಗುರುತ್ವಾಕರ್ಷಣ ಶಕ್ತಿಗಳನ್ನು ನಿರೂಪಿಸುವ ಪ್ರಬಂಧ ಹಾಗೂ ಮಾದರಿಗಳನ್ನು ಈತ ತಯಾರಿಸಿದ್ದಾನೆ. ನವದೆಹಲಿಯಲ್ಲಿ ನಡೆದ 23ನೇ ಕಾಂಗ್ರೆಸ್ ವಿಜ್ಞಾನ ಸಮ್ಮೇಳನ, ಖರಗಪುರದ ಐಐಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾನೆ. ಹಲವು ಬಾರಿ ‘ಬಾಲ ವಿಜ್ಞಾನಿ’ ಪುರಸ್ಕಾರವೂ ಸಂದಿದೆ.

‘ಶಾಲ್ ಬುದ್ಧಿವಂತ ಹುಡುಗ. ಹಲವು ಸ್ಪರ್ಧೆಗಳಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದಾನೆ. ಎಲ್ಲಿಯೇ ಹೋದರು ಬಹುಮಾನ ಖಚಿತ’ ಎನ್ನುತ್ತಾರೆ ಕೇಂದ್ರಿಯ ವಿದ್ಯಾಲಯದ ಶಿಕ್ಷಕರು.

ವಿವಿಧ ವಿಷಯಗಳ ಹತ್ತಕ್ಕೂ ಹೆಚ್ಚು ಪ್ರಬಂಧಗಳನ್ನು ಕುಶಾಲ್ ರಚಿಸಿದ್ದಾರೆ. ತಮ್ಮ ಪರಿಕಲ್ಪನೆ ಆಧರಿಸಿ ವಿಜ್ಞಾನದ ಮಾದರಿಗಳನ್ನು ಆತ ತಯಾರಿಸಿದ್ದಾನೆ. ‘ಇಂಟ್ರಡಕ್ಷನ್ ಟು ಬ್ಲ್ಯಾಕ್ ಹೋಲ್’, ‘ಬ್ಲ್ಯಾಕ್ ಹೋಲ್ ಮೇಡ್ ಈಸಿ’, ‘ಡಾರ್ಕ್ ಮ್ಯಾಟರ್ ಮೇಡ್ ಈಸಿ’ ಮುಂತಾದವು ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿವೆ.

ವಿದ್ಯುತ್‌ಗೆ ಸಂಬಂಧಿಸಿದ ವೈರ್‌ಲೆಸ್ ಎಲೆಕ್ಟ್ರಿಸಿಟಿ, ಥರ್ಮಲ್ ಎಲೆಕ್ಟ್ರಿಸಿಟಿ ವಿಷಯಗಳ ಮಾದರಿಗಳನ್ನೂ ರೂಪಿಸಿದ್ದಾನೆ. ಖಗೋಳದ ಜ್ಯೋತಿಷದ ಬಗ್ಗೆಯೂ ಜ್ಞಾನವಿದೆ. ಕಳೆದವಾರ ದೆಹಲಿಯಲ್ಲಿ ನಡೆದ ಕೇಂದ್ರೀಯ ವಿದ್ಯಾಲಯಗಳ ವಿಜ್ಞಾನ ಸಮ್ಮೇಳನದಲ್ಲಿ ಬೆಂಗಳೂರು ವಲಯದ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಪತ್ರ ಹಾಗೂ ಫಲಕ ಪಡೆದಿದ್ದಾನೆ.

ಕುಶಾಲ್ ತೆಲಂಗಾಣದ ಕರೀಂನಗರ ಜಿಲ್ಲೆಯವ. ತಂದೆ ಧಾರವಾಡದ ಐಐಟಿಯ ಉದ್ಯೋಗಿಯಾಗಿದ್ದು, ಐಐಟಿ ಕ್ಯಾಂಪಸ್ ನಿರ್ಮಾಣ ಯೋಜನೆಯ ಎಂಜಿನಿಯರ್ ಆಗಿದ್ದಾರೆ. ಹೀಗಾಗಿ ಕಳೆದ ಐದು ವರ್ಷಗಳಿಂದ ಆತನಿಗೆ ಧಾರವಾಡದ ನಂಟಿದೆ.

ಐದು ಸಾವಿರ ವೀಕ್ಷಕರು
ವಿಜ್ಞಾನ, ಬಾಹ್ಯಾಕಾಶದ ವಿಷಯಗಳಲ್ಲಿ ಸಮರ್ಥವಾಗಿ ಸಂವಹನ ನಡೆಸುವ ಕೌಶಲ ಈ ಬಾಲಕನಿಗೆ ಇದೆ. ತನಗೆ ಮನವರಿಕೆಯಾದ ವಿಷಯಗಳನ್ನು ವಿಡಿಯೊ ಮಾಡಿ, ಅವುಗಳನ್ನು ತನ್ನದೇ ಹೆಸರಿನ ಯುಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದಾನೆ. ವಿಷಯದ ವಿವರಣೆಯ ಜತೆಗೆ ಮಾದರಿಗಳನ್ನು ತಯಾರಿಸುವ ಮಾಹಿತಿಯೂ ಆ ವಿಡಿಯೊದಲ್ಲಿವೆ. 5ರಿಂದ 10 ನಿಮಿಷ ಅವಧಿಯ ಒಟ್ಟು ಒಂಬತ್ತು ವಿಡಿಯೊಗಳು ಈತನ ಚಾನಲ್‌ನಲ್ಲಿವೆ. ಅವುಗಳನ್ನು ಈವರೆಗೆ ಐದು ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು