ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

3 ವರ್ಷದಲ್ಲಿ 9,862 ಪೋಕ್ಸೊ ಪ್ರಕರಣ ದಾಖಲು: ಶಿಕ್ಷೆಯೇ ವಿಳಂಬ

Published : 27 ಜನವರಿ 2024, 23:50 IST
Last Updated : 27 ಜನವರಿ 2024, 23:50 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ರಾಜ್ಯದಲ್ಲಿ ಮೂರು ವರ್ಷಗಳ (2021–2023) ಅವಧಿಯಲ್ಲಿ ದಾಖಲಾದ ಪೋಕ್ಸೊ ಪ್ರಕರಣಗಳ ಸಂಖ್ಯೆ 9,862. ಆದರೆ, ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಮಾತ್ರ 202!

ಬಾಲಕಿಯರ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳು ಜಾರಿಗೊಳಿಸಿದರೂ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹದಂತಹ ಪ್ರಕರಣಗಳು ಜರುಗುತ್ತಲೇ ಇವೆ. ಆದರೆ, ಆರೋಪಿಗಳಿಗೆ ಮಾತ್ರ ತ್ವರಿತ ಶಿಕ್ಷೆಯಾಗುತ್ತಿಲ್ಲ.

ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಪ್ರಕಾರ, ಪೋಕ್ಸೊ ಪ್ರಕರಣದಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಅಲ್ಲಿ ಮೂರು ವರ್ಷದಲ್ಲಿ 1,454 ಪ್ರಕರಣಗಳು ದಾಖಲಾಗಿವೆ. ಕೊನೆಯ ಸ್ಥಾನಗಳಲ್ಲಿ ಇರುವ ಬೆಳಗಾವಿ ನಗರ ಮತ್ತು ಕಲಬುರಗಿ ನಗರದಲ್ಲಿ ತಲಾ 79 ಪ್ರಕರಣಗಳು ದಾಖಲಾಗಿವೆ.

ಮೂರು ವರ್ಷಗಳಲ್ಲಿ 129 ಪ್ರಕರಣಗಳನ್ನು ಸುಳ್ಳು ಎಂದು ಪರಿಗಣಿಸಲಾಗಿದೆ. 257 ಪ್ರಕರಣಗಳನ್ನು ವಿವಿಧ ಠಾಣೆಗಳಿಗೆ ತನಿಖೆಗಾಗಿ ವರ್ಗಾಯಿಸಲಾಗಿದೆ. ಎಂಟು ಪ್ರಕರಣಗಳು ಮಾತುಕತೆ ಮೂಲಕ ಬಗೆಹರಿದಿವೆ.

‘2012ರಲ್ಲಿ ಪೋಕ್ಸೊ ಕಾಯ್ದೆ ಬರುವವರೆಗೆ ಪೊಲೀಸ್ ಠಾಣೆಗೆ ದೂರು ನೀಡಲು ಜನ ಹಿಂಜರಿಯುತ್ತಿದ್ದರು. ಅವರಲ್ಲಿ ಭಯ ಮೂಡಿಸಲಾಗುತ್ತಿತ್ತು. ಈಗ ಸಾಕಷ್ಟು ಜಾಗೃತಿ ಮೂಡಿಸಿದ ಬಳಿಕ ಸಂತ್ರಸ್ತ ಮಕ್ಕಳ ಜೊತೆ ಪಾಲಕರು ಠಾಣೆಗೆ ದೂರು ನೀಡತೊಡಗಿದ್ದಾರೆ. ಆದರೆ, ಆರೋಪಿಗಳು ಶಿಕ್ಷೆಗೆ ಗುರಿಯಾಗುವ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿಲ್ಲ’ ಎಂದು ಚೈಲ್ಡ್ ರೈಟ್ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ತ್ವರಿತವಾಗಿ ತನಿಖೆ ನಡೆದು, ಆರೋಪಿಗಳಿಗೆ ಶಿಕ್ಷೆಯಾದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಿಸಬಹುದು. ದಾಖಲಾದ ಪ್ರಕರಣವು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂಬುದು ಕಾಯ್ದೆಯ ನಿಯಮ. ಆದರೆ, ಎರಡು ಅಥವಾ ಮೂರು ವರ್ಷಗಳವರೆಗೂ ತನಿಖೆ, ಕೋರ್ಟ್‌ಲ್ಲಿ ವಿಚಾರಣೆ ನಡೆಯುತ್ತಲೇ ಇರುತ್ತವೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.

‘ವಿರುದ್ಧ ಹೇಳಿಕೆ ಸಿಗಲ್ಲ’: ‘ಪ್ರಕರಣಗಳಲ್ಲಿ ಆರೋಪಿಗಳಿಗೆ ಬೇಗನೇ ಶಿಕ್ಷೆಯಾಗದಿರಲು ಹಲವು ಕಾರಣಗಳಿವೆ. ಹಲವು ಬಾರಿ ಸೂಕ್ತ ಸಾಕ್ಷ್ಯಾಧಾರ ಸಿಗುವುದಿಲ್ಲ. ಇನ್ನೂ ಕೆಲ ಸಲ ದೂರುದಾರರು ವಿಮುಖರಾಗಿ, ಪ್ರಕರಣ ಮುಂದುವರೆಸಲು ಬಯಸಲ್ಲ. 18 ವರ್ಷ ತುಂಬುವ ಮೊದಲೇ ಮದುವೆಯಾಗುವ ಕೆಲ ಬಾಲಕಿಯರು ಹೆರಿಗೆಗೆಂದು ಆಸ್ಪತ್ರೆಗೆ ಬಂದಾಗ, ಬಾಲ್ಯ ವಿವಾಹ ಎಂದು ಗೊತ್ತಾಗುತ್ತದೆ. ಆಗ ವೈದ್ಯರ ಮುಖಾಂತರ ಪೋಕ್ಸೊ ಪ್ರಕರಣ ದಾಖಲಾಗುತ್ತದೆ’ ಎಂದು ವಕೀಲರೊಬ್ಬರು ತಿಳಿಸಿದರು.

‘ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ತನಿಖೆ, ವಿಚಾರಣೆ, ಕೋರ್ಟ್‌ನಲ್ಲಿ ವಾದ ಸಹ ನಡೆಯುತ್ತದೆ. ಪಾಲಕರ ಹಾಗೂ ಬಾಲಕಿಯ ಒಪ್ಪಿಗೆ ಇರುವುದರಿಂದ ಮತ್ತು ಅವಳ ಭವಿಷ್ಯದ ದೃಷ್ಟಿಯಿಂದ ಕೋರ್ಟ್‌ನಲ್ಲಿ ಆರೋಪಿ ವಿರುದ್ಧದ ಹೇಳಿಕೆ ಸಿಗುವುದಿಲ್ಲ. ಹೊಂದಾಣಿಕೆ ಯೊಂದೇ ಪರಿಹಾರ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ’ ಎಂದರು.

ಪೋಕ್ಸೊ ಪ್ರಕರಣದ ತನಿಖೆ ವಿಳಂಬವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಲಿದೆ. ವರದಿ ಆಧರಿಸಿ, ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು.
ಶಶಿಧರ ಕೋಸಂಬೆ, ಸದಸ್ಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಪೋಕ್ಸೊ ಪ್ರಕರಣ ದಾಖಲಾದ 90 ದಿನಗಳಲ್ಲಿ ನಾವು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ. ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಮುಂದಿನ ಪ್ರಕ್ರಿಯೆ ಕೋರ್ಟ್‌ನಲ್ಲಿ ನಡೆಯುತ್ತದೆ.
ರೇಣುಕಾ ಸುಕುಮಾರ್, ಕಮಿಷನರ್, ಹುಬ್ಬಳ್ಳಿ-ಧಾರವಾಡ
ಕೆಲ ಧಾರ್ಮಿಕ ಮುಖಂಡರು, ಉದ್ಯಮಿಗಳು, ರಾಜಕಾರಣಿಗಳು ಪೋಕ್ಸೊ ಪ್ರಕರಣದ ಆರೋಪಿಗಳು ಆಗಿದ್ದಾರೆ. ಸೂಕ್ತ ಸಾಕ್ಷ್ಯಾಧಾರ ಇದ್ದರೂ ಶಿಕ್ಷೆ ವಿಧಿಸುವ ಪ್ರಕ್ರಿಯೆ ಮಾತ್ರ ವಿಳಂಬವಾಗುತ್ತಿದೆ.
ವಾಸುದೇವ ಶರ್ಮಾ, ಕಾರ್ಯನಿರ್ವಾಹಕ ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT