ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ ಪ್ರಕರಣ; ಮಠಾಧೀಶರಿಂದ ಪ್ರತಿಭಟನೆ

Published 20 ಏಪ್ರಿಲ್ 2024, 6:44 IST
Last Updated 20 ಏಪ್ರಿಲ್ 2024, 6:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಸಾಧು ಸಂತರು, ವಿವಿಧ ಸಂಘಟನೆ ಪದಾಧಿಕಾರಿಗಳು ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ಯಪಡಿಸಿದರು. ಆರೋಪಿಗೆ ತಕ್ಷಣ ಕಠಿಣ ಶಿಕ್ಷೆಯಾಗಬೇಕು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, 'ಬಿಜೆಪಿ ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನೀಚತನದ ಪರಮಾವಧಿ. ಮಾನವೀಯತೆ ತಲೆ ತಗ್ಗಿಸುವಂಥ ಕೆಲಸವಾಗಿದೆ. ಬಹುಸಂಖ್ಯಾತ ರಾಜಕಾರಣಿಗಳು ನೇಹಾ ಕೊಲೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂದು ತನಿಖೆಯಾಗಬೇಕು' ಎಂದು ಒತ್ತಾಯಿಸಿದರು.

'ಯಾವುದೇ ಸರ್ಕಾರ ಇಂಥ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಜವಾಬ್ದಾರಿಯಿಂದ ವರ್ತಿಸಬೇಕು. ರಾಜ್ಯ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಚಿಂತಿಸಬೇಕು. ಒಂದು ಪಕ್ಷ ಲವ್ ಜಿಹಾದ್ ಎಂದರೆ, ಮತ್ತೊಂದು ಪಕ್ಷ ವೈಯಕ್ತಿಕ ಎನ್ನುತ್ತಿದೆ. ನೀವು ನೈತಿಕವಾಗಿ ನಿಮ್ಮ ನಿಮ್ಮ ಸ್ಥಾನದಲ್ಲಿ ಇರಲು ಯೋಗ್ಯರೇ' ಎಂದು ಪ್ರಶ್ನಿಸಿದರು.

'ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶೀಘ್ರ ಶಿಕ್ಷೆ ನೀಡಲು ಕಾನೂನು ಬದಲಾಯಿಸಬೇಕು. ಶಿಕ್ಷಣದಲ್ಲಿ ನೀತಿ, ಶಾಸನದಲ್ಲಿ ಭೀತಿಯಿಲ್ಲವಾಗಿದೆ. ಮಕ್ಕಳಿಗೆ ಶಿಕ್ಷಣದ, ನೀತಿಯ ಬೆಲೆ ಅರಿವು ಮೂಡಿಸಬೇಕಿದೆ. ಎಲ್ಲಿಯವರೆಗೆ ಆರೋಪಿಗೆ ಉಗ್ರ ಶಿಕ್ಷೆಯಾಗುವುದಿಲ್ಲವೋ, ಅಲ್ಲಿವರೆಗೆ ಭೂಮಿಯಲ್ಲಿ ಯಾರೂ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ' ಎಂದರು.

'ಯಾರಾದರೂ ಈ ಪ್ರಕರಣಗಳನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಂಡರೆ, ಅವರ ದಿಕ್ಕು ಬದಲಿಸಬೇಕಾಗುತ್ತದೆ. ಹೇಳಿಕೆ ನೀಡುವ ನಾಯಕರ ಮನೆಯ ಮಗಳಾಗಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿನಿಯ ನಡತೆ ಸರಿ ಇಲ್ಲ ಎನ್ನುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಇದು ಅಕ್ಷಮ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸವಣೂರಿನ ಚನ್ನಬಸವ ಸ್ವಾಮೀಜಿ ಮಾತನಾಡಿ, 'ನೇಹಾ ಕೊಲೆ ರಾಜಕೀಯ ಪಕ್ಷಗಳು ತಮ್ಮ‌ ಲಾಭಕ್ಕೆ ಬಳಸಿಕೊಳ್ಳಬಾರದು. ಕಾನೂನು ವ್ಯಾಪ್ತಿಗೆ ಬಿಟ್ಟು ಬಿಡಬೇಕು. ಯಾವುದೇ ವ್ಯಕ್ತಿ ಸ್ವಪ್ರತಿಷ್ಠೆಗೆ ಬಳಸಿಕೊಳ್ಳಬಾರದು. ಆರೋಪಿಗೆ ಶೀಘ್ರ ಶಿಕ್ಷೆ ವಿಧಿಸಬೇಕು' ಎಂದು ಹೇಳಿದರು.

ವಕೀಲ ಕೋರೆಶೆಟ್ಟರ್, 'ಕಾನೂನಿನ ಎಲ್ಲ ಅಂಶಗಳನ್ನು ಉಪಯೋಗಿಸಿ ಆರೋಪಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಅಪರಾಧಿಯ ಶಿಕ್ಷೆಗೋಸ್ಕರ ಬಳಸಬೇಕೇ ಹೊರತ, ರಾಜಕೀಯಕ್ಕೆ ಬಳಸಬಾರದು. ಯಾವ ಧರ್ಮದಲ್ಲಿದ್ದರೂ ಅಪರಾಧಿ ಅಪರಾಧಿಯೇ! ಮಾನವೀಯತೆ, ಬಸವ ಸಂಸ್ಕೃತಿ‌ ಎತ್ತಿ ಹಿಡಿಯಲು ನಾವೆಲ್ಲರೂ ಹೋರಾಡಬೇಕು.‌ ರಾಜಕೀಯ ಬಣ್ಣ ಬಳಿಯಬಾರದು' ಎಂದು ವಿನಂತಿಸಿದರು.

ಮಾಲಿ ಚನ್ನಪ್ಪ, 'ಯಾರಾದರೂ ಜಾಮೀನು ಕೊಡಿಸಲು ಮುಂದಾದರೆ, ಅವರ ಮನೆ ಎದುರು ಪ್ರತಿಭಟನೆ ನಡೆಸಲು ಸಿದ್ಧರಾಗಬೇಕು' ಎಂದರು.

ನೇಹಾ ಹಿರೇಮಠ ಅವರ ಸಂಬಂಧಿ ಶ್ರೀನಿಧಿ ಹಿರೇಮಠ, 'ಮನೆಯಿಂದ ಹೊರಗೆ ಬರಲು ನನಗೂ ಭಯ ಆಗುತ್ತಿದೆ. ಯಾವ ಸಂದರ್ಭದಲ್ಲಿ ಯಾರು ಬಂದು ಚಾಕು ಹಾಕುತ್ತಾರೆ ಎಂದು ತಿಳಿಯುತ್ತಿಲ್ಲ. ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ಎನ್ನುವಂತಿಲ್ಲವಾಗಿದೆ. ಕಾಲೇಜಿನಲ್ಲಿಯೂ ರಕ್ಷಣೆಯಿಲ್ಲ' ಎಂದು ಅಸಮಾಧಾ ವ್ಯಕ್ತಪಡಿಸಿದರು.

ಬಣ್ಣದ ಮಠದ ಸ್ವಾಮೀಜಿ, ಸಿಗ್ಗಾವಿಯ ಸಂಗನ ಬಸವ, ಧಾರವಾಡದ ಮುರುಘಾಮಠದ ಸ್ವಾಮೀಜಿ, ಕುಂದಗೋಳದ ಬಸವಣ್ಣಜ್ಜ ಹಾಗೂ ಹಾವೇರಿ, ಗದಗ, ಧಾರವಾಡ ಭಾಗದ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT