ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಹಾ ಕೊಲೆ ತಡೆಯಬಹುದಿತ್ತು: ವಕೀಲೆ ರಂಜಿತಾ

ಎಸ್‌.ಎಸ್‌. ಶೆಟ್ಟರ್‌ ಫೌಂಡೇಷನ್‌ನಿಂದ ‘ಯುವ ಸಂವಾದ’
Published 31 ಮೇ 2024, 13:56 IST
Last Updated 31 ಮೇ 2024, 13:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಗರದ ಬಿವಿಬಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಅವರನ್ನು ಆರೋಪಿ ಕೊಲೆ ಮಾಡುವುದನ್ನು ಅಲ್ಲಿಯೇ ಅನತಿ ದೂರದಲ್ಲಿ ಇದ್ದ ವಿದ್ಯಾರ್ಥಿಗಳು ತಡೆಯಬಹುದಿತ್ತು. ಆದರೆ, ಅದ್ಯಾವುದನ್ನೂ ಮಾಡದೆ ನೋಡುತ್ತ ನಿಂತಿದ್ದು, ವಿದ್ಯಾರ್ಥಿ ಸಮೂಹ ಇನ್ನೂ ಜಾಗೃತವಾಗಿಲ್ಲ ಎನ್ನುವುದಕ್ಕೆ ಸಾಕ್ಷಿ’ ಎಂದು ಹೈಕೋರ್ಟ್‌ ವಕೀಲೆ ರಂಜಿತಾರೆಡ್ಡಿ ಅಳಗವಾಡಿ ಹೇಳಿದರು.

ನಗರದ ಮೂರುಸಾವಿರ ಮಠದ ಆವರಣದಲ್ಲಿರುವ ಎಸ್.ಜೆ.ಎಂ.ವಿ. ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ‌ ಶುಕ್ರವಾರ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ‘ಯುವ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೇಹಾ ಕೊಲೆ ತಡೆಯಲು ಅಲ್ಲಿಯೇ ಇದ್ದ ಕೆಲವು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಇದ್ದವು. ಆರೋಪಿಯನ್ನು ಹಿಂದಿನಿಂದ ಲಾಕ್‌ ಮಾಡಿ, ಅವಳನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದಿತ್ತು. ಸಂಭವನೀಯ ಅಪಾಯ ಹಾಗೂ ಅಪರಾಧ ಕೃತ್ಯಗಳನ್ನು ತಡೆಯಲು, ಅವಕಾಶವಿದ್ದಾಗಲೆಲ್ಲ ಸಮಸ್ತ ವಿದ್ಯಾರ್ಥಿ ಸಮೂಹ ಸಿದ್ಧವಾಗಿರಬೇಕು. ನಂತರ ಮೇಣದ ಬತ್ತಿ ಮೆರವಣಿಗೆ, ಪ್ರತಿಭಟನೆ ಮಾಡಿದರೆ ಪ್ರಯೋಜನವಿಲ್ಲ’ ಎಂದು ಸಮಾಧಾನ ವ್ಯಕ್ತಪಡಿಸಿದರು.

‘ಕಾಲೇಜು ಜೀವನದಲ್ಲಿ ವಿದ್ಯಾಭ್ಯಾಸವಷ್ಟೇ ಮುಖ್ಯವಾಗಿರಬೇಕು. ಪ್ರೀತಿ–ಪ್ರೇಮದ ಹಿಂದೆ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳಬಾರದು. ನಮ್ಮ ಜವಾಬ್ದಾರಿ ಅರಿತು, ಇತರರಿಗೆ ಆದರ್ಶವಾಗಿ ಬದುಕಬೇಕು. ಎಲ್ಲ ಸಮಯದಲ್ಲೂ ಪೊಲೀಸರು, ಪೋಷಕರು ಜೊತೆಗೆ ನಿಲ್ಲಲು ಸಾಧ್ಯವಿಲ್ಲ. ಆತ್ಮವಿಶ್ವಾಸದಿಂದ ಸಮಸ್ಯೆ ಎದುರಿಸುವುದನ್ನು ಸಹ ಕಲಿತುಕೊಳ್ಳಬೇಕು’ ಎಂದರು.

ಉಪನಗರ ಠಾಣೆ ಪಿಎಸ್‌ಐ ಕವಿತಾ ಮಾಡಗ್ಯಾಳ, ‘ಪೊಲೀಸ್ ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಆದರೆ, ಇತ್ತೀಚೆಗೆ ಅದು ನಿರೀಕ್ಷಿತ ಗುರಿ ತಲುಪುತ್ತಿಲ್ಲ. ಮಕ್ಕಳಿಗೆ ಮತ್ತು ಪಾಲಕರಿಗೆ ಸಂಘ–ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿದರೆ ನೇಹಾ ಮತ್ತು ಅಂಜಲಿ ಕೊಲೆಯಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ತಡೆಯಬಹುದು’ ಎಂದರು.

ಎಸ್‌.ಎಸ್‌. ಫೌಂಡೇಷನ್‌ ಅಧ್ಯಕ್ಷ ಸಂಕಲ್ಪ ಶೆಟ್ಟರ್‌, ವೇದ ಇಂಟರ್‌ನ್ಯಾಷನಲ್‌ ಸ್ಕೂಲ್‌ ಮುಖ್ಯಸ್ಥೆ ಶ್ರದ್ಧಾ ಶೆಟ್ಟರ್, ಪ್ರಾಚಾರ್ಯ ಎಂ.ಬಿ. ಆಡೂರ, ಶಿಕ್ಷಕರಾದ ಅಣ್ಣಪ್ಪ ಕೂರವರ, ಫೌಂಡೇಷನ್ ಸಂಯೋಜಕ ಪರಮ ಕಿತ್ಲಿ, ಶಂಕರ ಸುಂಕದ, ನಂದೀಶ ವಡಟ್ಟಿ, ಅಭಿ ಮುಪ್ಪರ್ಲಾ, ವಿನೋದ ಬಂಕಾಪುರ, ಮುರುಗೇಶ ಶೆಟ್ಟರ್‌ ಹಾಗೂ ಕಾಲೇಜು ಸಿಬ್ಬಂದಿ ಇದ್ದರು.

Cut-off box - 112ಗೆ ಕರೆ ಮಾಡಲು ಸಲಹೆ ‘ಅವಳಿನಗರದ ಜನರಲ್ಲಿ ಜಾಗೃತಿ ಮೂಡಿಸಲು ಚನ್ನಮ್ಮ‌ಪಡೆ ರಚಿಸಲಾಗಿದ್ದು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಏನೇ ಸಮಸ್ಯೆಗಳು ಎದುರಾದರೂ ತಕ್ಷಣ 112ಗೆ ಕರೆ ಮಾಡಿ ತಿಳಿಸಿದರೆ ಐದು ನಿಮಿಷದಲ್ಲಿ ಪೊಲೀಸರು ಹಾಜರಿರುತ್ತಾರೆ.  ಅಲ್ಲದೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪಾಲಕರಲ್ಲಿ ಶಿಕ್ಷಕರಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕು. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಳ್ಳಬೇಕು. ಪ್ರೀತಿ ಎಷ್ಟು ಪವಿತ್ರ ಅನ್ನೋದು ತಿಳಿವಳಿಕೆ ಬ‌ಂದಾಗ ಅರಿವಾಗುತ್ತದೆ. ಪ್ರೀತಿಸೋದು ತಪ್ಪಲ್ಲ. ಆದರೆ ಅದರ ಹೆಸರಲ್ಲಿ ಬದುಕು ಹಾಳು ಮಾಡಿಕೊಳ್ಳುವುದು ತಪ್ಪು’ ಎಂದು ಪಿಎಸ್‌ಐ ಕವಿತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT