ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | 7 ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಸಿದ್ಧತೆ

ಆರಂಭಿಸಲು ಸಿದ್ಧತೆ; ನಿವೇಶನ ಗುರುತು: ಕೇಂದ್ರ ಕಚೇರಿಗೆ ವಿವರ ಸಲ್ಲಿಕೆ
ಬಿ.ಜೆ.ಧನ್ಯಪ್ರಸಾದ್‌
Published 12 ಫೆಬ್ರುವರಿ 2024, 5:58 IST
Last Updated 12 ಫೆಬ್ರುವರಿ 2024, 5:58 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯಲ್ಲಿ ಹೊಸದಾಗಿ ಏಳು ಕಡೆ ಇಂದಿರಾ ಕ್ಯಾಂಟೀನ್‌ ಆರಂಭಿಸಲು ತಯಾರಿ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ.

ಹುಬ್ಬಳ್ಳಿ ನಗರದಲ್ಲಿ ಎರಡು, ಕಲಘಟಗಿ, ಅಳ್ನಾವರ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ಪಟ್ಟಣಕ್ಕೆ ತಲಾ ಒಂದು ಕ್ಯಾಂಟೀನ್‌ ನಿರ್ಮಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ (ಹಿಂದಿನ ಬಾರಿ) ಹುಬ್ಬಳ್ಳಿಯಲ್ಲಿ ಐದು ಮತ್ತು ಧಾರವಾಡದಲ್ಲಿ ನಾಲ್ಕು ಸೇರಿ ಒಟ್ಟು ಒಂಬತ್ತು ಕ್ಯಾಂಟೀನ್‌ಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ, ಧಾರವಾಡ ಹೊರತಾಗಿ ಇತರ ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸಿರಲಿಲ್ಲ.

ಇಂದಿರಾ ಕ್ಯಾಂಟೀನ್‌ ನಿರ್ಮಾಣದ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ನಿವೇಶನ ಗುರುತಿಸಿ ಕೇಂದ್ರ ಕಚೇರಿಗೆ ವಿವರ ಸಲ್ಲಿಸಿವೆ. ಬೆಂಗಳೂರಿನ ತಂಡವು ಸ್ಥಳ ಪರಿಶೀಲಿಸಿ ಅಖೈರುಗೊಳಿಸಬೇಕಿದೆ.

ರಾಜ್ಯದಲ್ಲಿ ಹೊಸದಾಗಿ 185 ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಜನವರಿ 2ರಂದು ಮಂಜೂರಾತಿ ಆದೇಶ ಹೊರಡಿಸಿದೆ. ಮೊದಲ ಹಂತದಲ್ಲಿ ನಡೆದಿದ್ದ ವಿಧಾನದಲ್ಲೇ (ಅನುಮೋದಿತ ವಿನ್ಯಾಸ, ಮಾದರಿ...) ಪ್ರಕ್ರಿಯೆ ನಡೆಯುತ್ತದೆ. ರಾಜ್ಯಮಟ್ಟದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತದೆ. ನಿರ್ಮಾಣ ಹೊಣೆ ವಹಿಸಿಕೊಂಡ ಸಂಸ್ಥೆಯು ಕಟ್ಟಡ ನಿರ್ಮಾಣ ಕಾಮಗಾರಿ ಪ್ರಕ್ರಿಯೆ ಮುಗಿಸಿ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಇಂದಿರಾ ಕ್ಯಾಂಟೀನ್‌ನಲ್ಲಿ ₹5ಕ್ಕೆ ಉಪಹಾರ, ₹10 ಊಟ ದೊರೆಯುತ್ತದೆ. ಬೇರೆ ಊರುಗಳಿಂದ ಬರುವ ಜನರು, ವಿದ್ಯಾರ್ಥಿಗಳು ಈ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುತ್ತಾರೆ. ಕಡಿಮೆ ದರದಲ್ಲಿ ಆಹಾರ ಸಿಗುವುದು ಅನುಕೂಲವಾಗಿದೆ’ ಎಂದು ಕರ್ನಾಟಕ ಕಾಲೇಜಿನ ವಿದ್ಯಾರ್ಥಿ ಸಂಗಮೇಶ ಉಳ್ಳಾಗಡ್ಡಿ ತಿಳಿಸಿದರು.

‘ಸ್ಥಳ ಪರಿಶೀಲನೆ ಬಾಕಿ’ ‘ನಿವೇಶನ ವಿಸ್ತೀರ್ಣ ಮಣ್ಣು ಪರೀಕ್ಷೆ ವರದಿ ಮೂಲಸೌಕರ್ಯ ವಿವರಗಳನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಬೆಂಗಳೂರಿನ ಎಂಜಿನಿಯರ್‌ಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ನೀರಿನ ವ್ಯವಸ್ಥೆ ಚರಂಡಿ ವ್ಯವಸ್ಥೆ ವಿದ್ಯುತ್‌ ಸಂಪರ್ಕ ಮೊದಲಾದ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಿದೆ. ಜಾಗವನ್ನು ತಂಡವು ಒಪ್ಪಿದರೆ ಕಾಮಗಾರಿ ಆರಂಭಿಸಲು ಅನುಮೋದನೆ ಲಭಿಸುತ್ತದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರೂ ಆಗಿರುವ ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಜಿಲ್ಲಾ ನೋಡೆಲ್‌ ಅಧಿಕಾರಿ ಬಿ.ಎಸ್‌.ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT