ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಹೊಸವರ್ಷ ಸ್ವಾಗತಕ್ಕೆ ಸಿದ್ಧತೆ, ಪೊಲೀಸ್‌ ಕಟ್ಟೆಚ್ಚರ

Published 30 ಡಿಸೆಂಬರ್ 2023, 16:05 IST
Last Updated 30 ಡಿಸೆಂಬರ್ 2023, 16:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊಸ ವರ್ಷದ ಸ್ವಾಗತಕ್ಕೆ ವಾಣಿಜ್ಯ ನಗರಿ ಸಿದ್ಧಗೊಂಡಿದೆ. ನಗರದ ಪ್ರಮುಖ ಹೋಟೆಲ್‌ಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೇಕರಿ ಅಂಗಡಿಗಳಲ್ಲಿ ತರಹೇವಾರಿ ಕೇಕ್‌ಗಳು ಸಿದ್ಧಗೊಂಡಿವೆ. ಈ ನಡುವೆ ಪೊಲೀಸ್‌ ಇಲಾಖೆ ಸಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಟುಂಬದವರಿಗೆ, ಸ್ನೇಹಿತರ ಗುಂಪಿಗೆ, ಯುವ ಜೋಡಿಗಳಿಗೆ ಹಾಗೂ ವೈಯಕ್ತಿಕವಾಗಿ ಹೋಗುವವರಿಗೂ ಅವಕಾಶ ಕಲ್ಪಿಸಲಾಗಿದೆ. ಕೆಲ ಹೋಟೆಲ್‌ಗಳಲ್ಲಿ ಒಬ್ಬರಿಗೆ ₹2 ಸಾವಿರದಿಂದ ₹3 ಸಾವಿರದವರೆಗೆ ಶುಲ್ಕ ನಿಗದಿಪಡಿಸಿ, ಊಟ ಹಾಗೂ ವಿವಿಧ ಭಕ್ಷ್ಯಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲ ಹೋಟೆಲ್‌ಗಳಲ್ಲಿ ಪ್ರವೇಶ ಶುಲ್ಕ ₹600–₹1000ದವರೆಗೆ ನಿಗದಿಪಡಿಸಿ, ಹೊರಗಡೆಯಿಂದ ಊಟೋಪಾಹಾರ ತರಲು ಅವಕಾಶ ನೀಡಲಾಗಿದೆ.

ಹೋಟೆಲ್‌ ಹೊರಾಂಗಣ ಹಾಗೂ ಒಳಾಂಗಣದಲ್ಲಿ ರೇನ್‌ ಡ್ಯಾನ್ಸ್‌, ಡಿಜೆ ವ್ಯವಸ್ಥೆ ಮಾಡಿ, ಬಣ್ಣಬಣ್ಣದ ಬಲೂನ್‌ಗಳನ್ನು ಕಟ್ಟಿ, ದೀಪಾಲಂಕಾರ ಮಾಡಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಕುಟುಂಬದ ಕೆಲವು ಸದಸ್ಯರು ಈಗಾಗಲೇ ಹೋಟೆಲ್‌, ರೆಸಾರ್ಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಕೆಲವು ಬಡಾವಣೆಗಳ ಯುವಕರು ರಾತ್ರಿ 12ರವರೆಗೂ ಡಿಜೆ ಹಚ್ಚಿ ಕುಣಿದು ಸಂಭ್ರಮಿಸಿ, ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಗೆಬಗೆಯ ಸಿಡಿಮದ್ದುಗಳನ್ನು ಆಗಸದಲ್ಲಿ ಹಾರಿಸಿ ಸಂಭ್ರಮಿಸಲಿದ್ದಾರೆ.

ಬಹುತೇಕ ಬೇಕರಿ ಅಂಗಡಿಗಳಲ್ಲಿ ವೈವಿಧ್ಯಮಯ ಕೇಕ್‌ಗಳನ್ನು ಸಿದ್ಧಪಡಿಸಿ, ಒಪ್ಪವಾಗಿ ಜೋಡಿಸಿಡಲಾಗಿದೆ. ಗ್ರಾಹಕರು ತಮಗಿಷ್ಟವಾದ ವಿನ್ಯಾಸದ ಮಾದರಿ ತಿಳಿಸಿದರೆ, ಅದರಂತೆ ತಯಾರಿಸಿ ಕೊಡುತ್ತಿದ್ದಾರೆ. ಚಾಕಲೆಟ್‌, ಫೈನಾಪಲ್‌, ಸ್ಟ್ರಾಬೇರಿ, ವೆನಿಲ್ಲಾ, ಬಟರ್‌ ಸ್ಕಾಚ್‌, ಪಿಸ್ತಾ, ಕೋಲ್ಡ್‌ ಕೇಕ್‌ಗಳ ಖರೀದಿಯೂ ಜೋರಾಗಿ ನಡೆಯಲಿದೆ.

ರಾತ್ರಿ 10 ರವರೆಗೆ ಮಾತ್ರ ಡಿಜೆ ಬಳಸಲು ಪೊಲೀಸರು ಅವಕಾಶ ನೀಡಿದ್ದಾರೆ. ಹೊಸ ವರ್ಷದ ಸಂಭ್ರಮ ಇರುವುದೇ ರಾತ್ರಿ 12ಕ್ಕೆ. ಈ ಕುರಿತು ಪೊಲೀಸ್‌ ಇಲಾಖೆ ಪರಿಶೀಲನೆ ಮಾಡಬೇಕು.
ಅರುಣ್‌ ಸವದತ್ತಿ, ವ್ಯವಸ್ಥಾಪಕ, ಡೆನಿಸನ್ಸ್‌ ಹೋಟೆಲ್‌

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹು–ಧಾ ಮಹಾನಗರ ಪೊಲೀಸರು ಕಟ್ಟೆಚ್ಚರ ವಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕಮಿಷನರ್‌ ರೇಣುಕಾ ಸುಕುಮಾರ್‌ ಅವರು ಡಿಸಿಪಿ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ಜೊತೆ ಚರ್ಚಿಸಿ, ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರದ ಪ್ರಮುಖ ಸ್ಥಳಗಳಾದ ಚನ್ನಮ್ಮ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ ಹಾಗೂ ಧಾರ್ಮಿಕ ಸ್ಥಳಗಳಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಲಾಗಿದೆ. ರಸ್ತೆ ಅಪಘಾತ ತಪ್ಪಿಸಲೆಂದು ಮದ್ಯಪಾನ ಮಾಡಿದವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಕಾರ್ಯಕ್ರಮ ಆಯೋಜಿಸಿದವರಿಗೆ ವಾಹನದ ವ್ಯವಸ್ಥೆ ಮಾಡಲು ಪೊಲೀಸ್‌ ಇಲಾಖೆ ಸೂಚಿಸಿದೆ.

‘ಹೋಟೆಲ್‌ಗೆ ಸಿಬ್ಬಂದಿ ನಿಯೋಜನೆ’

‘ನೂತನ ವರ್ಷಾಚರಣೆ ನಡೆಯಲಿರುವ ಪ್ರಮುಖ ಹೋಟೆಲ್‌ಗಳ ಎದುರು ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಹೆಚ್ಚುವರಿ ಭದ್ರತೆ ಒದಗಿಸಲಾಗುವುದು’ ಎಂದು ಕಮಿಷನರ್‌ ರೇಣುಕಾ ಸುಕುಮಾರ್‌ ಹೇಳಿದರು. ‘ಈಗಾಗಲೇ ಹೋಟೆಲ್‌ ಮಾಲೀಕರ ವ್ಯವಸ್ಥಾಪಕರ ಸಭೆ ಕರೆದು ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳಲು ಹೋಟೆಲ್‌ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ವರ್ಷಾಚರಣೆ ನಡೆಯುತ್ತಿದೆ ಎನ್ನುವ ಮಾಹಿತಿ ಸಂಗ್ರಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ’ ಎಂದರು. ‘ಪಾರ್ಟಿಗೆ ಬರುವವರ ಹಾಗೂ ಗಾಂಜಾ ಸೇವನೆ ಮಾಡುವವರ ಮೇಲೂ ವಿಶೇಷ ಗಮನ ಇಡಲಾಗುವುದು. ಮಾದಕ ವಸ್ತುಗಳ ಸೇವನೆ ಮಾರಾಟ ನಿಯಂತ್ರಿಸಲು ಅನುಮಾನಾಸ್ಪದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಿ ಅವುಗಳನ್ನು ಸೇವನೆ ಮಾಡಿರುವುದು ಖಾತ್ರಿಯಾದರೆ ಪ್ರಕರಣ ದಾಖಲಿಸಲಾಗುವುದು. ಹೆಣ್ಣುಮಕ್ಕಳನ್ನು ಚುಡಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಲಾಗಿದ್ದು ರಾತ್ರಿವರೆಗೂ ಗಸ್ತು ತಿರುಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT